ಧಾರವಾಡ: ಬಿತ್ತಿದ ಭತ್ತ ಕೈಗೆ ಸಿಕ್ಕಲಿಲ್ಲ.. ಕೊಟ್ಟ ವಿಮೆ ಖಾತೆಗೆ ಜಮಾವಣೆಯಾಗಲೇ ಇಲ್ಲ..ಮಾವಿನ ಹಣ್ಣು ರುಚಿಸಲೇ ಇಲ್ಲ.. ಮಳೆ-ಗಾಳಿ ಮಾವು ಬೆಳೆಗೆ ಮಾಡಿದ ಹಾನಿಗೆ ವಿಮೆ ಹಣ ಇನ್ನೂ ಲಭಿಸಿಲ್ಲ.. ಮೆಣಸಿನಕಾಯಿಗೂ ಸಿಕ್ಕುತ್ತಿಲ್ಲ ವಿಮೆ..
ಬಂದ ಹಣ ಬ್ಯಾಂಕ್‌ನಲ್ಲೂ ಇಲ್ಲ..ವಿಮಾ ಕಂಪನಿಯಲ್ಲೂ ಇಲ್ಲ.. ಮಳೆ ಹಾಗೂ ಬರಗಾಲ ಪೆಡಂಭೂತವಾಗಿ ಕಾಡಿದ್ದರಿಂದ ಅನ್ನದಾತನ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಇದರ ಮಧ್ಯವೇ ರೈತರು ಮಳೆಯಾಶ್ರಿತ ಮತ್ತು ಹವಾಮಾನ ಆಧಾರಿತ ಬೆಳೆಗಳಿಗೆ ಇರಿಸಿದ್ದ ಬೆಳೆ ವಿಮೆ ಹಣವನ್ನು ವಿಮಾ ಕಂಪನಿ ಮತ್ತು ಬ್ಯಾಂಕ್ ಗಳು ಕೂಡಿಟ್ಟುಕೊಂಡು ಹಿಂಸೆ ನೀಡುತ್ತಿವೆ ಎನ್ನುವ ಆರೋಪ ರೈತರಿಂದ ಕೇಳಿ ಬರುತ್ತಿದೆ.
ಇದಕ್ಕೆ ಸಾಕ್ಷಿ ಎನ್ನುವಂತೆ ಜಿಲ್ಲೆಯ ಅರ್ಧದಷ್ಟು ರೈತರಿಗೆ ಕಳೆದ ನಾಲ್ಕು ತಿಂಗಳ ಹಿಂದೆಯೇ ವಿಮೆ ಹಣವನ್ನು ಅವರ ಬ್ಯಾಂಕಿನ ಖಾತೆಗಳಿಗೆ ಜಮಾವನೆ ಮಾಡಿದ ವಿಮಾ ಕಂಪನಿ ಇನ್ನುಳಿದ ರೈತರ ಹಣವನ್ನು ಬಾಕಿ ಉಳಿಸಿಕೊಂಡಿದೆ. ವಿಮಾ ಕಂಪನಿಯನ್ನು ಕೇಳಿದರೆ ಈಗಾಗಲೇ ಆಯಾ ಗ್ರಾಮ ಪಂಚಾಯಿತಿಗೆ ಅನುಸಾರವಾಗಿ ಆಯಾ ಬೆಳೆಗಳ ಹಾನಿಯನ್ನು ಅಂದಾಜು ಮಾಡಿ ಹಣ ಬಿಡುಗಡೆ ಮಾಡಿದ್ದಾಗಿ ಹೇಳುತ್ತಿವೆ.
ಆದರೆ ಬ್ಯಾಂಕುಗಳು ಮಾತ್ರ ಇನ್ನು ನಿಮ್ಮ ಹಣ ತಲುಪಿಲ್ಲ. ಹಣ ಕೊಡುವುದು ಬ್ಯಾಂಕ್‌ಗೆ ಸಂಬಂಧವೇ ಇಲ್ಲ. ಅದು ವಿಮಾ ಕಂಪನಿಗಳ ಹೊಣೆ ಎಂದು ರೈತರಿಗೆ ಹೇಳುವುದರ ಮೂಲಕ ಕೈ ತೊಳೆದುಕೊಳ್ಳುತ್ತಿವೆ. ಬಾಕಿ ಉಳಿಸಿಕೊಂಡಿದ್ದು ಎಷ್ಟು: 2018ರ ಮುಂಗಾರು ಮತ್ತು ಹಿಂಗಾರು ಬೆಳೆಗಳಿಗೆ ವಿಮೆ ಇರಿಸಿದ್ದ ಪೈಕಿ ಶೇ.40 ರೈತರ ಬೆಳೆವಿಮೆ ಹಣ ಇನ್ನೂ ಅವರ ಖಾತೆಗಳಿಗೆ ಜಮೆ ಆಗಿಲ್ಲ. 116 ಕೋಟಿ ರೂ.ಗಳ ಪೈಕಿ ಬರೀ 75 ಕೋಟಿ ರೂ. ಮಾತ್ರ ರೈತರ ಖಾತೆಗೆ ಜಮಾವನೆಯಾಗಿದ್ದು, ಉಳಿದ ಹಣವನ್ನು ವಿಮಾ ಕಂಪನಿ ಬಾಕಿ ಉಳಿಸಿಕೊಂಡಿವೆ. ವಿಮಾ ಕಂಪನಿಗಳು ತೋರಿಸುವ ಪಟ್ಟಿಯಲ್ಲಿ ಈಗಾಗಲೇ ಬೆಳೆವಿಮೆ ಹಣ ತಮ್ಮ ಕಂಪನಿಯಿಂದ ಮುನ್ನಡೆದಿದೆ ಎನ್ನುವ ಉತ್ತರ ಬರುತ್ತಿದ್ದರೆ, ಇತ್ತ ಜಿಲ್ಲಾ ಲೀಡ್ ಬ್ಯಾಂಕ್ ಮಾತ್ರ ತನಗೇನೂ ಗೊತ್ತಿಲ್ಲ ಎನ್ನುವ ಸಿದ್ಧ ಉತ್ತರ ಕೊಡುತ್ತಿದೆ. ಈ ಪೈಕಿ 31 ಕೋಟಿ ರೂ. ಹಣ ಇನ್ನೂ ರೈತರಿಗೆ ಬರಬೇಕಿದೆ. ಈ ಪೈಕಿ ಭತ್ತ ಮತ್ತು ಸೋಯಾಬಿನ್ ಬೆಳೆದ ರೈತರ ಹಣವೇ ಅಧಿಕ ಪ್ರಮಾಣದಲ್ಲಿ ಬಾಕಿ ಉಳಿದುಕೊಂಡಿದೆ.
ಮಾವು ವಿಮೆಯನ್ನೂ ಕೊಟ್ಟಿಲ್ಲ: 2018ರ ಹಿಂಗಾರಿ ಮಾವು ವಿಮೆ ಇರಿಸಿದ್ದ ಜಿಲ್ಲೆಯ ರೈತರಿಗೆ ಶೇ.63 ನಷ್ಟ ಆಧಾರದಲ್ಲಿ ಪ್ರತಿ ಹೆಕ್ಟೇರ್‌ಗೆ 48-51 ಸಾವಿರ ರೂ.ಗಳ ವರೆಗೂ ಹಣ ಲಭಿಸಬೇಕಿದೆ. ಜಿಲ್ಲೆಯ 1900ಕ್ಕೂ ಹೆಚ್ಚು ಜನ ಮಾವು ಬೆಳೆಗಾರರು ಅಲ್ಫಾನ್ಸೋ, ಕಲಮಿ ಸೇರಿದಂತೆ ತರಾವರಿ ಮಾವು ಗಿಡಗಳ ಮೇಲೆ ವಿಮೆ ಇರಿಸಿದ್ದರು. ಮಾವಿಗೆ ಜಿಗಿರೋಗ ತಗುಲಿದ್ದಲ್ಲದೇ, ವಿಪರೀತ ಮುಂಗಾರು ಪೂರ್ವ ಮಳೆಗಾಳಿಯಿಂದ ಸಾಕಷ್ಟು ನಷ್ಟ ಉಂಟಾಗಿತ್ತು. ಇದನ್ನು ಸಮೀಕ್ಷೆ ಮಾಡಿದ ತೋಟಗಾರಿಕೆ ಇಲಾಖೆ ವಿಶೇಷ ತಂಡ ಸರ್ಕಾರಕ್ಕೆ ವರದಿ ಕೂಡ ಕೊಟ್ಟಿತ್ತು.
ಜಿಲ್ಲೆಗೆ ಈ ಪೈಕಿ ಈಗಾಗಲೇ 20.7 ಕೋಟಿ ರೂ. ನಷ್ಟು ಹಣ ವಿಮಾ ಕಂಪನಿಯಿಂದ ಬಿಡುಗಡೆಯಾಗಿದೆ. ಆದರೆ ಅದಿನ್ನು ರೈತರ ಖಾತೆಗಳಿಗೆ ಜಮೆ ಆಗಿಲ್ಲ. ಇಷ್ಟಕ್ಕೂ 2019ನೇ ಸಾಲಿನ ಮಾವು ವಿಮೆ ಕಂತನ್ನು ರೈತರಿಂದ ಮತ್ತೆ ವಿಮಾ ಕಂಪನಿಗಳು ಕಟ್ಟಿಸಿಕೊಳ್ಳುತ್ತಿವೆ. ಆದರೆ ಈಗಾಗಲೇ ಬಿಡುಗಡೆಯಾಗಿರುವ ಹಣ ಯಾಕೆ ರೈತರ ಖಾತೆಗೆ ಬರುತ್ತಿಲ್ಲ ಎಂದು ಕೇಳುತ್ತಿದ್ದಾರೆ ಮಾವು ಬೆಳೆಗಾರರು.
-ಬಸವರಾಜ ಹೊಂಗಲ್