Advertisement

ವಿಮಾ ಯೋಜನೆ ಒಡಂಬಡಿಕೆ

12:51 PM Nov 01, 2017 | |

ಧಾರವಾಡ: ಕರ್ನಾಟಕ ಸೆಂಟ್ರಲ್‌ ಕೋ-ಆಪರೇಟಿವ್‌ ಬ್ಯಾಂಕ್‌, ಇಪ್ಕೋ-ಟೋಕಿಯೋ ಜನರಲ್‌ ಇನ್ಸುರನ್ಸ್‌ ಕಂಪನಿ ಹಾಗೂ ಕರ್ನಾಟಕ ರಾಜ್ಯ ವಿಮಾ ಸಹಕಾರ ಸಂಘದ ಸಂಘದ ಆಶ್ರಯದಲ್ಲಿ ವಿಮಾ ಯೋಜನೆಯ ಒಡಂಬಡಿಕೆ ಸಮಾರಂಭ ಇಲ್ಲಿಯ ಕೆಸಿಸಿ ಬ್ಯಾಂಕ್‌ನಲ್ಲಿ ಮಂಗಳವಾರ ಜರುಗಿತು.

Advertisement

ಅಧ್ಯಕ್ಷತೆ ವಹಿಸಿದ್ದ ಕೆಸಿಸಿ ಬ್ಯಾಂಕ್‌ ಅಧ್ಯಕ್ಷ ಎಸ್‌.ವೈ. ಪಾಟೀಲ ಮಾತನಾಡಿ, ಇಪ್ಕೋ-ಟೋಕಿಯೋ ಜನರಲ್‌ ಇನ್ಸುರನ್ಸ್‌ಕಂಪನಿ ಒಡಂಬಡಿಕೆ ಮಾಡಿಕೊಂಡು, ಯಾವುದೇ ತರಹದ ಹಾನಿಯ  ಮೊತ್ತ ಭರಿಸುವ ಕಾರ್ಯಕ್ರಮವನ್ನುಅನುಷ್ಠಾನಗೊಳಿಸುತ್ತಿದೆ. ಪ್ರತಿಯೊಬ್ಬರು ಈ ಯೋಜನೆಯ ಸದುಪಯೋಗ ಮಾಡಿಕೊಳ್ಳಬೇಕು.

ಕಂಪನಿ ಕೂಡಾ ಬ್ಯಾಂಕ್‌ ನ ಸದಸ್ಯರು, ಗ್ರಾಹಕರಿಗೆ ಶೀಘ್ರ ಕ್ಲೇಮ್‌ಗಳ ವಿಲೇವಾರಿ ಮಾಡಬೇಕು ಎಂದು ಸಲಹೆ ನೀಡಿದರು. ಕರ್ನಾಟಕ ರಾಜ್ಯ ವಿಮಾ ಸಹಕಾರ ಸಂಘದ ಅಧ್ಯಕ್ಷ ಬಾಪುಗೌಡ ಪಾಟೀಲ ಮಾತನಾಡಿ, ರೈತರು ಮತ್ತು ಗ್ರಾಹಕರು ಹಲವು ರೀತಿಯಲ್ಲಿ ಹಾನಿಗೊಳಗಾಗುವ ಸಾಧ್ಯತೆಗಳಿರುತ್ತವೆ. 

ಈ ಸಂದರ್ಭದಲ್ಲಿ ಅವರಿಗೆ ನೆರವಾಗಲು ವಿಮೆ ಯೋಜನೆಯನ್ನು ಕೆಸಿಸಿ ಬ್ಯಾಂಕ್‌ ಅಳವಡಿಸಿಕೊಳ್ಳುತ್ತಿದೆ. ಈಗಾಗಲೇ ರಾಜ್ಯದ 12 ಡಿಸಿಸಿ ಬ್ಯಾಂಕುಗಳು, ಕಾಸ್ಕಾರ್ಡ್‌, ಅಪೆಕ್ಸ್‌ ಬ್ಯಾಂಕು, ಅನೇಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಒಡಂಬಡಿಕೆ ಮಾಡಿಕೊಂಡಿವೆ.

ಈಗ ಇಪ್ಕೋ-ಟೋಕಿಯೋ ಜನರಲ್‌ ಇನ್ಸುರನ್ಸ್‌ ಕಂಪನಿಯೊಂದಿಗೆ ಬ್ಯಾಂಕು ಒಡಂಬಡಿಕೆ ಮಾಡಿಕೊಂಡಿದೆ. ಯೋಜನೆಯಲ್ಲಿ  ರ್ನಾಟಕ ರಾಜ್ಯ ವಿಮಾ ಸಹಕಾರ ಸಂಘ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದರು. 

Advertisement

ಇಪ್ಕೋ-ಟೋಕಿಯೋ ಜನರಲ್‌ ಇನ್ಸುರನ್ಸ್‌ ಕಂಪನಿಯ ಸಹಕಾರಿ ವಲಯದ ಸಲಹೆಗಾರ ಬಿ.ಕೆ. ಸುಭಾಸಚಂದ್ರ ಮಾತನಾಡಿ, ಸಹಕಾರ ವಲಯದ ಸಂಸ್ಥೆಗಳ ಆದಾಯ ವೃದ್ಧಿಸುವ ಸಲುವಾಗಿ ಆರ್‌ಬಿಐ ಮತ್ತು ನಬಾರ್ಡ್‌ ವಿಮಾ ಯೋಜನೆಯ ಅಳವಡಿಕೆಗೆ ಅನುಮತಿ ನೀಡಿವೆ.

ಯಾವುದೇ ಹೂಡಿಕೆ ಇಲ್ಲದೇ ಆದಾಯ ಬರುವುದರಿಂದ ಸಹಕಾರ ಬ್ಯಾಂಕುಗಳ ಆರ್ಥಿಕ ವಹಿವಾಟಿನ ವ್ಯಾಪ್ತಿ ಹಿಗ್ಗಲಿದೆ. ಜೊತೆಗೆ ಸದಸ್ಯರ ಮತ್ತು ಗ್ರಾಹಕರ ಹಿತರಕ್ಷಣೆ ಸಹ ಆಗಲಿದೆ. ಸಹಕಾರ ಕ್ಷೇತ್ರದ ಇಪ್ಕೋ ಸಂಸ್ಥೆಯು ಟೋಕೀಯೋ ಸಂಸ್ಥೆಯೊಂದಿಗೆ ಕೂಡಿ ಆರಂಭಿಸಿರುವ ವಿಮಾ ಯೋಜನೆಯಡಿ ಅತ್ಯಂತ ಕಡಿಮೆ ಪ್ರಮಾಣದ ಕಂತಿನಲ್ಲಿ ಅಧಿಕ ವಿಮೆ ಸೌಲಭ್ಯ ಸಿಗಲಿದೆ ಎಂದರು. 

ಕೆಸಿಸಿ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಪಿ. ಶೆಲ್ಲಿಕೇರಿ ಮತ್ತು ಇಪ್ಕೋ-ಟೋಕಿಯೋ ಜನರಲ್‌ ಇನ್ಸುರನ್ಸ್‌ ಕಂಪನಿಯ ಅಧಿಕಾರಿ ಜಿ.ಪಿ. ವರ್ಣೇಕರ ನೂತನ ಯೋಜನೆಯ ಒಡಂಬಡಿಕೆಗೆ ಸಹಿ ಹಾಕಿದರು. ಬ್ಯಾಂಕ್‌ನ ನಿರ್ದೇಶಕರು, ಸಹಕಾರ ಸಂಘಗಳ ಉಪ ನಿಬಂಧಕರಾದ ಸಾವಿತ್ರಿ ಕಡಿ, ವಸೂಲಾಧಿಕಾರಿ ಬಿ.ಬಿ. ನಾಯಕ ಇತರರಿದ್ದರು. ಈಶ್ವರ ಮಾದರ ಪ್ರಾರ್ಥಿಸಿದರು.

ಶಿವಾನಂದ ಹೂಗಾರ ಸ್ವಾಗತಿಸಿದರು. ಎಂ.ಜಿ. ಪಾಟೀಲ ನಿರೂಪಿಸಿದರು. ಪ್ರಧಾನ ವ್ಯವಸ್ಥಾಪಕ ವಿ.ಬಿ. ಪಾಟೀಲ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next