Advertisement

Insurance money; ಪತ್ನಿ ಮಾತ್ರವಲ್ಲ, ತಂದೆಗೂ ವಿಮೆ ಹಣ: ಧಾರವಾಡ ಗ್ರಾಹಕ ಆಯೋಗ ತೀರ್ಪು

06:13 PM Oct 05, 2023 | Team Udayavani |

ಧಾರವಾಡ: ವಿಮಾ ಹಣವನ್ನು ಮೃತಪಟ್ಟ ವ್ಯಕ್ತಿಯ ಪತ್ನಿಗೆ ನೀಡಿರುವ ವಿಮಾ ಕಂಪನಿಯ ಕ್ರಮಕ್ಕೆ ಆಕ್ಷೇಪಣೆ ಮಾಡಿರುವ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗವು, ವಿಮಾ ಪಾಲಸಿಯ ನಾಮಿನಿದಾರ ಆಗಿರುವ ಮೃತಪಟ್ಟ ವ್ಯಕ್ತಿಯ ತಂದೆಗೆ ವಿಮಾ ಹಣ ಪಾವತಿಸುವಂತೆ ಸೂಚಿಸಿದೆ.

Advertisement

2017 ರಲ್ಲಿ ಸರ್ವ ಸುರಕ್ಷಾ ಲಾಭದ ವಿಮಾ ಪಾಲಸಿಯನ್ನು ಎಚ್‌ಡಿಎಪ್‌ಸಿ ಎರಗೋ ವಿಮಾ ಕಂಪನಿಯಿಂದ ಹುಬ್ಬಳ್ಳಿಯ ಆನಂದ ನಗರ ನಿವಾಸಿಯಾಗಿದ್ದ ಆಶೀಫ್ ಮುಲ್ಲಾ ಪಡೆದಿದ್ದರು. ಅದು 10 ಲಕ್ಷ ಮೌಲ್ಯದ ಪಾಲಸಿಯಾಗಿತ್ತು. ಅದಕ್ಕೆ ವಿಮಾದಾರ 7,646 ರೂ. ಹಣ ಪ್ರೀಮಿಯಂ ಕಟ್ಟಿದ್ದರು. ಆದರೆ ಈ ಪಾಲಸಿಗೆ ವಿಮಾದಾರರಾಗಿದ್ದ ಆಶೀಪ್ ತಮ್ಮ ತಂದೆ ಅಲ್ಲಾಭಕ್ಷ ಮುಲ್ಲಾ ಅವರನ್ನು ನಾಮಿನಿಯನ್ನಾಗಿ ಮಾಡಿದ್ದರು. ಈ ಅವಧಿಯಲ್ಲಿ 19-12-2019 ರಂದು ಗದಗ ಹುಲಕೋಟಿ ಹತ್ತಿರ ಹೋಗುವಾಗ ಲಾರಿ ಮತ್ತು ಬೈಕಿಗೆ ಡಿಕ್ಕಿಯಾದ ಅಪಘಾತದಲ್ಲಿ ವಿಮಾದಾರ ಆಶೀಪ್ ಮೃತರಾಗಿದ್ದರು. ಈ ಬಗ್ಗೆ ಗದಗ ಪೊಲೀಸ್ ಠಾಣೆಯಲ್ಲಿ ಲಾರಿ ಚಾಲಕನ ಮೇಲೆ ಪ್ರಕರಣ ದಾಖಲಾಗಿತ್ತು. ಈ ಎಲ್ಲ ದಾಖಲೆಗಳನ್ನು ಪಡೆದು ನಾಮಿನಿಯಾದ ಆಗಿದ್ದ ತಂದೆ ಅಲ್ಲಾಭಕ್ಷ ಮುಲ್ಲಾ ಅವರು, ಮೃತನ ವಿಮಾ ಕ್ಲೇಮ ಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಕ್ಲೇಮ್ ಅರ್ಜಿಯನ್ನು ಪರಿಗಣಿಸದೆ ವಿಮಾ ಕಂಪನಿಯು ಮೃತನ ಹೆಂಡತಿ ನೂರಜಹಾನಬಿ ಅವರಿಗೆ 10 ಲಕ್ಷ  ವಿಮಾ ಹಣ ಸಂದಾಯ ಮಾಡಿತ್ತು.

ಈ ಹಿನ್ನೆಲೆಯಲ್ಲಿ ತಂದೆಯು ಮೃತನ ವಿಮಾ ಪಾಲಸಿಗೆ ನಾಮಿನಿ ಆಗಿರುವುದರಿಂದ ವಿಮಾ ಹಣವನ್ನು ತನಗೆ ಕೊಡಬೇಕಾಗಿತ್ತು. ಆದರೆ ವಿಮಾ ಕಂಪನಿ ಅವರು ತನ್ನ ಕ್ಲೇಮನ್ನು ಧಿಕ್ಕರಿಸಿ ಮೃತನ ಹೆಂಡತಿಗೆ ವಿಮಾ ಹಣ 10 ಲಕ್ಷ ಕೊಟ್ಟಿರುವುದು ತಪ್ಪು ಮತ್ತು ಅಂತಹ ವಿಮಾ ಕಂಪನಿಯವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆಯಾಗುತ್ತದೆ. ಹೀಗಾಗಿ ವಿಮಾ ಕಂಪನಿಯವರ ಮೇಲೆ ಕ್ರಮ ಕೈಗೊಂಡು ತನಗೆ ಪರಿಹಾರ ಕೊಡಿಸುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಈ ದೂರಿನ ಬಗ್ಗೆ ವಿಚಾರಣೆ ಕೈಗೊಂಡ ಅಧ್ಯಕ್ಷರಾದ ಈಶಪ್ಪ ಭೂತೆ ಮತ್ತು ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ, ಪ್ರಭು ಹಿರೇಮಠ ಒಳಗೊಂಡ ಆಯೋಗವು, ದೂರುದಾರ ಅಲ್ಲಾಭಕ್ಷ ಮೃತ ಆಸೀಪ್ ಮುಲ್ಲಾರವರ ತಂದೆ ಇದ್ದು, ವಿಮಾ ಪಾಲಸಿಗೆ ನಾಮಿನಿಯೂ ಆಗಿದ್ದಾರೆ. 2015 ರಲ್ಲಿ ಆಗಿರುವ ವಿಮಾ ಕಾಯ್ದೆಯ ತಿದ್ದುಪಡಿಯಂತೆ ವಿಮಾದಾರ ಮೃತನಾದ್ದಲ್ಲಿ ವಿಮಾ ಪಾಲಸಿಯ ಹಣ ಪಡೆಯಲು ನಾಮಿನಿ ಮಾತ್ರ ಅರ್ಹರಿದ್ದಾರೆ. ಆದರೆ ಈ ಪ್ರಕರಣದಲ್ಲಿ ನಾಮಿನಿಯನ್ನು ಬದಿಗಿಟ್ಟು ಮೃತನ ಹೆಂಡತಿ ನೂರಜಹಾನಬಿಗೆ ವಿಮಾ ಕಂಪನಿಯವರು ಹಣ ಸಂದಾಯ ಮಾಡಿರುವುದು ವಿಮಾ ನಿಯಮಕ್ಕೆ ವಿರುದ್ಧವಾಗಿದೆ. ಈ ಕಾರಣ ವಿಮಾ ಕಂಪನಿಯವರ ಅಂತಹ ನಡಾವಳಿಕೆ ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ತೀರ್ಪು ನೀಡಿದೆ. ಇದಲ್ಲದೇ ತಮ್ಮದೇ ವಿಮಾ ನಿಯಮಕ್ಕೆ ವ್ಯತಿರಿಕ್ತವಾಗಿ ಮೃತನ ಹೆಂಡತಿಗೆ ವಿಮಾ ಹಣ ನೀಡಿರುವುದನ್ನು ಆಯೋಗ ಒಪ್ಪಿಕೊಂಡಿಲ್ಲ. ವಿಮಾ ನಿಯಮದಂತೆ ನಾಮಿನಿಯಾದ ದೂರುದಾರ ವಿಮಾ ಪಾಲಸಿ ಮೊತ್ತ 10 ಲಕ್ಷ ಪಡೆಯಲು ಅರ್ಹರಿದ್ದಾರೆ ಎಂದು ಆಯೋಗ ತೀರ್ಪಿನಲ್ಲಿ ತಿಳಿಸಿದೆ.

ಈ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ನಾಮಿನಿಯಾದ ದೂರುದಾರನಿಗೆ ವಿಮಾ ಮೊತ್ತ 10 ಲಕ್ಷ ಕೊಡುವಂತೆ ವಿಮಾ ಕಂಪನಿಗೆ ಆಯೋಗ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ 50 ಸಾವಿರ ಪರಿಹಾರ ಮತ್ತು 05 ಸಾವಿರ ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ತಿಳಿಸಿದೆ. ಒಂದು ತಿಂಗಳ ಒಳಗಾಗಿ ಮೇಲೆ ಹೇಳಿದ ವಿಮಾ ಮೊತ್ತ ಕೊಡಲು ಎದುರುದಾರರು ವಿಫಲರಾದಲ್ಲಿ ತೀರ್ಪು ನೀಡಿದ ದಿನಾಂಕದಿಂದ 10 ಲಕ್ಷ ಮೇಲೆ ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ಕೊಡುವಂತೆ ಆಯೋಗ ಎದುರುದಾರರಿಗೆ ಆಯೋಗವು ಆದೇಶಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next