Advertisement
ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಮೆಂಟಲ್ ಹೆಲ್ತ್ ಅಕ್ಟ್-2017 ಮಸೂದೆ ಅನುಮೋದನೆಯಾಗಿದ್ದು, ಮೇ 29, 2018 ಸೆಕ್ಷನ್ 21(4) ಕಾಯ್ದೆ ಅನ್ವಯ ತುರ್ತು ಅದೇಶ ಹೊರಡಿಸುವಂತೆ ಕೇಂದ್ರ ಸರ್ಕಾರ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಆದೇಶ ನೀಡಿತ್ತು. ಈ ಕುರಿತು ಆದೇಶ ಹೊರಡಿಸಲಾಗಿದ್ದು, ಮಾನಸಿಕ ಆರೋಗ್ಯ ಚಿಕಿತ್ಸೆಗೂ ವಿಮಾ ಸೌಲಭ್ಯ ನೀಡುವಂತೆ ಸೂಚಿಸಿದೆ. ಮೇ 29ರಿಂದಲೇ ಈ ಆದೇಶ ಜಾರಿಯಾಗುವಂತೆ ತಾಕೀತು ಮಾಡಲಾಗಿದೆ. ಸಾಮಾನ್ಯವಾಗಿ ಭಾರತದಲ್ಲಿರುವ ಪ್ರತಿಷ್ಠಿತ ವಿಮಾ ಕಂಪನಿಗಳು ಇಷ್ಟು ದಿನ ತಮ್ಮ ಷರತ್ತುಗಳಲ್ಲಿ ಮಾನಸಿಕ ಕಾಯಿಲೆಗೆ ಸಂಬಂಧಿಸಿದಂತೆ ಯಾವುದೇ ವೆಚ್ಚ ಭರಿಸಲಾಗುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳುತ್ತಿದ್ದವು.ಇದರಿಂದ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿತ್ತು. ಆರೋಗ್ಯ ವಿಮೆ ಪಡೆಯುವಾಗ ಈ ಕುರಿತು ಹೆಚ್ಚಾಗಿ ತಲೆಕೆಡಿಸಿಕೊಳ್ಳದ ಗ್ರಾಹಕರು, ಸಮಸ್ಯೆ ಎದುರಾದಾಗ ಪರಿತಪಿಸುವಂತಾಗಿತ್ತು. ಅಪಘಾತ ಸಂಭವಿಸಿದಾಗ ರೋಗಿಗಳು ತಾತ್ಕಾಲಿಕ, ಕೆಲವೊಮ್ಮೆ ಶಾಶ್ವತ ಮಾನಸಿಕ ಆಘಾತಕ್ಕೊಳಗಾಗುತ್ತಾರೆ. ಅಂತಹ ಸಂದರ್ಭ ದಲ್ಲಿ ರೋಗಿಯನ್ನು ಮನೋರೋಗ ತಜ್ಞರ ಬಳಿ ಚಿಕಿತ್ಸೆಗಾಗಿ ಕಳುಹಿಸಿ ಕೊಡಲಾಗುತ್ತದೆ. ಇಂಥ ಸಂದರ್ಭದಲ್ಲಿ ವಿಮಾ ಕಂಪನಿಗಳು ಸಹಾಯಕ್ಕೆ ಬರುತ್ತಿರಲಿಲ್ಲ. ಸಾಮಾನ್ಯ ಆರೋಗ್ಯ ವಿಮೆ ಮಾತ್ರ ಭರಿಸುವುದಾಗಿ ಹೇಳುತ್ತಿದ್ದವು. ಮನೋರೋಗ ತಜ್ಞರ ಬಳಿ ತಗಲುವ ವೆಚ್ಚ ಸಾಮಾನ್ಯವಾಗಿ ಸ್ವಲ್ಪ ಹೆಚ್ಚೇ ಇರುವುದರಿಂದ ಗ್ರಾಹಕರು ಮತ್ತಷ್ಟು ತಲೆಕೆಡಿಸಿಕೊಳ್ಳುತ್ತಿದ್ದರು.
ಹೀಗಾಗಿ ಕೇಂದ್ರ ಸರ್ಕಾರ ದೇಶದ ಎಲ್ಲ ಆರೋಗ್ಯ ವಿಮೆ ಕಂಪನಿಗಳಿಗೆ ನೂತನ ಕಾಯ್ದೆ ಮೂಲಕ ಮಾನಸಿಕ ಕಾಯಿಲೆ ಚಿಕಿತ್ಸೆಗೂ ಅನ್ವಯಿಸುವಂತೆ ಸೂಚಿಸಿದೆ.
● ಡಾ. ಶಿವಕುಮಾರ ಹಿರೇಮಠ, ಮನೋರೋಗ ತಜ್ಞ ● ಸೋಮಶೇಖರ ಹತ್ತಿ