ದೇಶಾದ್ಯಂತ ಇರುವ ಸಹಕಾರ ಸಂಘಗಳಲ್ಲಿನ ಠೇವಣಿದಾರರ ಹಿತಾಸಕ್ತಿ ಕಾಪಾಡುವ ಸಲುವಾಗಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಠೇವಣಿದಾರರ ವಿಮೆ ಮತ್ತು ಸಾಲ ಖಾತರಿ(ತಿದ್ದುಪಡಿ) ಕಾಯ್ದೆ ಉತ್ತಮವಾದ ನಿರ್ಧಾರ. ಈಗ ನೂತನವಾಗಿ ಜಾರಿಗೊಳಿಸಲಾಗಿರುವ ಕಾಯ್ದೆಯಲ್ಲಿ ಠೇವಣಿದಾರರ ಹೂಡಿಕೆ ಮೇಲಿನ ವಿಮೆಯನ್ನು ಒಂದು ಲಕ್ಷ ರೂ.ಗಳಿಂದ ಐದು ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದ್ದು, ಬಹುತೇಕ ಠೇವಣಿದಾರರಿಗೆ ಅನುಕೂಲವಾಗಿ ಪರಿಣಮಿಸಲಿದೆ.
ಕಳೆದ ಆಗಸ್ಟ್‌ನಲ್ಲೇ ಕೇಂದ್ರ ಸರಕಾರ ಸಂಸತ್‌ನಲ್ಲಿ ಈ ತಿದ್ದುಪಡಿ ಕಾಯ್ದೆಗೆ ಒಪ್ಪಿಗೆ ಪಡೆದಿತ್ತು. ಇದರ ಅನ್ವಯ ರವಿವಾರವಷ್ಟೇ ಹೊಸ ಕಾಯ್ದೆಯಂತೆ ಠೇವಣಿದಾರರಿಗೆ ಹಣ ನೀಡುವ ಕಾರ್ಯ ಶುರುವಾಗಿದೆ. ಅಂದರೆ ಇದುವರೆಗೆ ನಷ್ಟಕ್ಕೀಡಾಗಿರುವ ಸಹಕಾರಿ ಸಂಘಗಳ ಠೇವಣಿದಾರರಿಗೆ ಮೊದಲ ಸುತ್ತಿನಲ್ಲಿ ವಿಮಾ ಹಣ ಬಿಡುಗಡೆ ಮಾಡಲಾಗಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿರುವಂತೆ ತೊಂದರೆಗೀಡಾಗಿ ಬಾಗಿಲು ಹಾಕಿಕೊಂಡಿರುವ ಸಹಕಾರ ಸಂಘಗಳ ಸುಮಾರು 1 ಲಕ್ಷ ಠೇವಣಿದಾರರಿಗೆ 1,300 ಕೋಟಿ ರೂ.ಗಳನ್ನು ನೀಡಲಾಗಿದೆ. ಇನ್ನು ಮೂರು ಲಕ್ಷ ಠೇವಣಿದಾರರೂ ಬಾಕಿ ಉಳಿದಿದ್ದು ಇವರೆಲ್ಲರೂ ವಿಮೆಯ ಅನುಕೂಲ ಪಡೆಯಲಿದ್ದಾರೆ ಎಂದು ಮೋದಿಯವರೇ ತಿಳಿಸಿದ್ದಾರೆ.
ಸದ್ಯ ಮಹಾರಾಷ್ಟ್ರದ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರ ಬ್ಯಾಂಕ್, ಯೆಸ್ ಬ್ಯಾಂಕ್, ಲಕ್ಷ್ಮೀ ವಿಲಾಸ ಬ್ಯಾಂಕ್, ಬೆಂಗಳೂರಿನ ಶ್ರೀಗುರುರಾಘವೇಂದ್ರ ಸಹಕಾರ ಸಂಘಗಳು ನಷ್ಟದ ಹಾದಿ ಹಿಡಿದಿದ್ದವು. ಈ ಸಹಕಾರ ಸಂಘಗಳ ನಷ್ಟದಿಂದಾಗಿ ಇವುಗಳಲ್ಲಿ ಹಣವಿಟ್ಟಿದ್ದ ಗ್ರಾಹಕರು ಚಿಂತೆಗೆ ಈಡಾಗಿದ್ದರು. ಇದನ್ನು ಮನಗಂಡೇ ಠೇವಣಿ ಮೇಲೆ ಮೊದಲು ಇದ್ದ ಒಂದು ಲಕ್ಷ ರೂ.ಗಳ ವಿಮಾ ಸೌಲಭ್ಯವನ್ನು 5 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಈ ತಿದ್ದುಪಡಿ ಕಾಯ್ದೆಯಂತೆ, ಒಂದು ಸಹಕಾರ ಸಂಘ ನಷ್ಟಕ್ಕೀಡಾಗಿ 90 ದಿನಗಳ ಒಳಗಾಗಿ ಠೇವಣಿದಾರರ ಕೈಗೆ ವಿಮಾ ಹಣ ಕೈಸೇರಲಿದೆ.
ಇತ್ತೀಚಿನ ದಿನಗಳಲ್ಲಿ ಸಹಕಾರಿ ಸಂಘಗಳು ಸೇರಿದಂತೆ ಕೆಲವು ಬ್ಯಾಂಕ್‌ಗಳು ದಿವಾಳಿ ಎದ್ದ ಪರಿಣಾಮ ಬ್ಯಾಂಕಿಂಗ್ ವಲಯದ ಮೇಲೆ ಅಡ್ಡಪರಿಣಾಮ ಉಂಟಾಗಿತ್ತು. ಅದರಲ್ಲೂ ಜನ ಬ್ಯಾಂಕ್‌ಗಳಲ್ಲಿ ಉಳಿತಾಯ ಠೇವಣಿ ಇಡಲು ಹಿಂದೆ ಮುಂದೆ ನೋಡುವ ಸ್ಥಿತಿ ಎದುರಾಗಿತ್ತು. ಜತೆಗೆ ಬ್ಯಾಂಕೊಂದು ನಷ್ಟಕ್ಕೀಡಾದ ಮೇಲೆ ಅದನ್ನು ಆರ್‌ಬಿಐ ಮುಚ್ಚಿದ ಮೇಲೆ ತಮ್ಮ ಠೇವಣಿ ಹಣವನ್ನು ಪಡೆಯಲು 8-10 ವರ್ಷಗಳ ವರೆಗೆ ಕಾಯುವ ಸ್ಥಿತಿಯೂ ಎದುರಾಗಿತ್ತು. ಹೀಗಾಗಿ ಬ್ಯಾಂಕ್‌ಗಳ ಮೇಲೆ ಹೂಡಿಕೆದಾರರು ದೃಢವಾದ ನಂಬಿಕೆ ಇಡಲಿ ಮತ್ತು ಉಳಿತಾಯ ಠೇವಣಿಯನ್ನು ಇಡುವಂಥ ಸ್ಥಿತಿ ಮುಂದುವರಿಯಲಿ ಎಂಬ ಕಾರಣದಿಂದ ಈ ಕಾಯ್ದೆ ಜಾರಿಗೆ ತರಲಾಗಿದೆ.
ಬ್ಯಾಂಕ್‌ಗಳು ಮತ್ತು ಸಹಕಾರಿ ಸಂಘಗಳ ಅಸ್ಥಿರ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಈ ತಿದ್ದುಪಡಿ ಕಾಯ್ದೆ ಠೇವಣಿದಾರರಿಗೆ ಧೈರ್ಯ ತಂದುಕೊಟ್ಟಿದೆ ಎಂದು ದೃಢವಾಗಿ ಹೇಳಬಹುದು. ಏಕೆಂದರೆ ಬ್ಯಾಂಕ್‌ಗಳ ಮೂಲ ಬಂಡವಾಳವೇ ಠೇವಣಿಗಳಾಗಿದ್ದರೆ, ಅವುಗಳಿಗೆ ಆಸ್ತಿ ರೂಪದಲ್ಲಿ ಸಿಗುವುದು ಸಾಲ. ಏಕೆಂದರೆ ಠೇವಣಿ ಇರಿಸಿಕೊಂಡು ಇದಕ್ಕೆ ಸುಖಾಸುಮ್ಮನೆ ಬಡ್ಡಿ ಕೊಡುವುದು ಕಷ್ಟಕರ.
ಹೀಗಾಗಿ ಸಾಲ ನೀಡಲೇಬೇಕಾಗುತ್ತದೆ. ಸಾಲದ ಮೇಲಿನ ಬಡ್ಡಿ ರೂಪದಲ್ಲಿ ಬಂದ ಆದಾಯವನ್ನು ಠೇವಣಿದಾರರಿಗೆ ನೀಡಲಾಗುತ್ತದೆ. ಹೀಗಾಗಿ, ಬ್ಯಾಂಕಿಂಗ್ ವ್ಯವಸ್ಥೆಯ ಸದೃಢತೆಗಾಗಿ ಇಂಥ ಕಾಯ್ದೆಗಳು ಜರೂರತ್ತಾಗಿ ಬೇಕಾಗಿದೆ.