ಉಡುಪಿ: ಮೃತ ವ್ಯಕ್ತಿಗೆ ಪರಿಹಾರ ನೀಡಲು ವಿಮಾ ಸಂಸ್ಥೆ ಸೇವಾ ನ್ಯೂನತೆ, ವಿಳಂಬ ಧೋರಣೆ ಅನುಸರಿಸಿದೆ ಎಂದು ಬಡ್ಡಿ ಸಹಿತ 10 ಲಕ್ಷ ರೂ. ವಿಮಾ ಮೊತ್ತ ನೀಡಲು ಜಿಲ್ಲಾ ಗ್ರಾಹಕ ನ್ಯಾಯಾಲಯವು ಆದೇಶಿಸಿದೆ.
ಹೆಬ್ರಿಯ ನಿವಾಸಿ ದಿ| ಸಂತೋಷ್ ಶೆಟ್ಟಿ ಅವರು 2018ರ ಡಿ.24ರಂದು ವೈಯಕ್ತಿಕ ಅಪಘಾತ ವಿಮೆ ಯುನಿವರ್ಸಲ್ ಸೊಂಪೊ(ಕೆಬಿಎಲ್ ಸುರಕ್ಷಾ) ವಿಮಾ ಸಂಸ್ಥೆಯಲ್ಲಿ ಮಾಡಿಸಿದ್ದರು.
ಸಂತೋಷ್ ಅವರು 2019 ನ.1ರಂದು ಚಾರ ಬಳಿ ನದಿಯಲ್ಲಿ ಸ್ನಾನ ಮಾಡುವಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಮೃತ ವ್ಯಕ್ತಿಯ ವಾರಸುದಾರರಾದ ಪುಷ್ಪಾ ಶೆಟ್ಟಿ, ದಿವ್ಯಾ ಶೆಟ್ಟಿ ಅವರು ಪಾಲಿಸಿಯ ಕ್ಲೇಮ್ ಮೊತ್ತ ನೀಡುವಂತೆ ವಿಮಾ ಕಂಪೆನಿಗೆ ಅರ್ಜಿ ಸಲ್ಲಿಸಿದ್ದರು. ಮಾಹಿತಿ, ಕ್ಲೈಮ್ ಅರ್ಜಿಯನ್ನು ವಿಳಂಬವಾಗಿ ನೀಡಿದ ಕಾರಣ ನೀಡಿ ಕಂಪೆನಿಯು ವಿಮಾ ಮೊತ್ತ ನೀಡಲು ನಿರಾಕರಿಸಿತ್ತು.
ಈ ಬಗ್ಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ನ್ಯಾಯಾಲಯಕ್ಕೆ ವಕೀಲರ ಮೂಲಕ ದೂರು ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಾದ ಪ್ರತಿವಾದ ಆಲಿಸಿ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯವು ದೂರುದಾರರ ವಕೀಲರು ನೀಡಿರುವ ಇನ್ಸುರೆನ್ಸ್ ರೆಗ್ಯುಲೇಟರಿ ಅಥೋರಿಟಿ ಆಫ್ ಇಂಡಿಯಾ ಸರ್ಕ್ನೂಲರ್, ರಾಷ್ಟ್ರೀಯ ಆಯೋಗ ನೀಡಿರುವ ತೀರ್ಪನ್ನು ಆಧರಿಸಿ ಅಪಘಾತ ವಿಮಾ ಮೊತ್ತ 10 ಲಕ್ಷ ರೂ. ಕ್ಲೇಮ್ ಮೊತ್ತ ನೀಡಬೇಕು. ಕ್ಲೇಮ್ ನೀಡಲು ನಿರಾಕರಿಸಿದ ದಿನಾಂಕದಿಂದ ಪಾವತಿಸುವಲ್ಲಿಯವರೆಗೆ ಶೇ.10 ಬಡ್ಡಿಯಂತೆ 25 ಸಾವಿರ ರೂ. ಪರಿಹಾರ ಮೊತ್ತವಾಗಿಯೂ, 10 ಸಾವಿರ ರೂ. ದಾವೆ ಖರ್ಚಾಗಿಯೂ ಮೃತ ವಾರಸುದಾರರಿಗೆ ನೀಡಬೇಕು. ತೀರ್ಪು ಪ್ರಕಟಗೊಂಡ ದಿನದಿಂದ 30 ದಿನದ ಒಳಗೆ ಎಲ್ಲ ಮೊತ್ತವನ್ನು ನೀಡುವಂತೆ ಜಿಲ್ಲಾ ಗ್ರಾಹಕ ನ್ಯಾಯಾಲಯದ ಅಧ್ಯಕ್ಷ ಸುನೀಲ್ ತಿ. ಮಾಸ ರಡ್ಡಿ, ಸದಸ್ಯರಾದ ಸುಜಾತಾ ಬಿ. ಕೋರಳ್ಳಿ, ಪ್ರೇಮಾ ಅವರನ್ನು ಒಳಗೊಂಡ ನ್ಯಾಯ ಪೀಠವು ಆದೇಶಿಸಿದೆ. ವಾರಸುದಾರರ ಪರವಾಗಿ ಕಾರ್ಕಳದ ವಕೀಲ ವಿವೇಕಾನಂದ ಮಲ್ಯ ವಾದ ಮಂಡಿಸಿದರು.