Advertisement

ಅಡಕೆ ಬೆಳೆಗಾರರಿಗೆ ಅಪಮಾನ: ಆಕ್ರೋಶ

07:04 PM Feb 04, 2021 | Team Udayavani |

ಶಿರಸಿ: ಹಿಂದುಗಳ ಧಾರ್ಮಿಕ ಮತ್ತು ಸಾಂಸ್ಕೃತಿ ಬದುಕಿನಲ್ಲಿ ಪೂಜ್ಯ ಭಾವನೆ ಹಾಗೂ ಔಷಧೀಯ ಗುಣ ಹೊಂದಿರುವ ಅಡಕೆಯನ್ನು ಡ್ರಗ್ಸ್‌ ಪಟ್ಟಿಗೆ ಸೇರಿಸಿ, ಅಡಕೆ ಬೆಳೆಗಾರರಿಗೆ ಅಪಮಾನ ಮಾಡಿದ ರಾಜ್ಯ ಸರ್ಕಾರ ಅಡಕೆ ಬೆಳೆಗಾರರಿಗೆ ಕ್ಷಮೆ ಯಾಚಿಸಬೇಕು  ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಪ್ರೀಂಕೋರ್ಟಿಗೆ ಅಡಕೆ ಆರೋಗ್ಯಕ್ಕೆ ಹಾನಿಕರವಲ್ಲವೆಂದು ವೈಜ್ಞಾನಿಕ ಸಂಶೋಧನೆ ದಾಖಲೆಯೊಂದಿಗೆ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಕೇಂದ್ರ   ಮತ್ತು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Advertisement

ದೇಶದ 13 ರಾಜ್ಯಗಳಲ್ಲಿ ಅಡಕೆ ಪ್ರಧಾನ ವಾಣಿಜ್ಯ ಬೆಳೆಯಾಗಿದ್ದು, ಅವುಗಳಲ್ಲಿ 3.2 ಲಕ್ಷ ಹೆಕ್ಟೇರ್‌ ಅಂದರೆ ದೇಶದ ಅಡಕೆ  ಬೆಳೆಯುವ ಪ್ರದೇಶದಲ್ಲಿ ಶೇ.58 ರಷ್ಟು ಕರ್ನಾಟಕದಲ್ಲಿನ 16 ಜಿಲ್ಲೆಯಲ್ಲಿ ಅಡಕೆ ಬೆಳೆಯುತ್ತಿದ್ದಾರೆ. ಇತ್ತೀಚೆಗೆ ರಾಜ್ಯ ಸರ್ಕಾರದ ಕೃಷಿ   ಇಲಾಖೆ ದಾಖಲೆಯಾದ ಅಡಕೆ ಕೃಷಿ ಮಾರಾಟ ವಾಹಿನಿಯಲ್ಲಿ ಅಡಕೆ ಕುರಿತು ದಾಖಲಿಸಿದ ಮಾಹಿತಿಯಿಂದ ಬೆಳೆಗಾರರಲ್ಲಿ  ಗೊಂದಲ ಉಂಟಾಗಿದ್ದು, ಅಡಕೆ ಏರಿಕೆಯ ಬೆಲೆಯ ಮೇಲೆ ತೀವ್ರ ಪರಿಣಾಮ ಮಾಡುವ ಸಂದರ್ಭ ಉಂಟಾಗಬಹುದು. ಆದ್ದರಿಂದ ಸರ್ಕಾರ ಈ ದಿಸೆಯಲ್ಲಿ ಅಡಕೆ ಬೆಳಗಾರರ ಪರ ನಿಲುವು ಪ್ರಕಟಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಇತ್ತೀಚಿನ 20 ವರ್ಷದಿಂದ ಅಡಕೆಯ ಗುಣಮಟ್ಟದ ಬಗ್ಗೆ ವ್ಯತಿರಿಕ್ತ ನಿಲುವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತಿ ರುವುದು ಖಂಡನಾರ್ಹ. 2001 ರಲ್ಲಿ ಅಟಲ್‌ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯ ರಚಿಸಿದ ಪಿ. ರಾಮ ಭಟ್ಟರ ನೇತೃತ್ವದ ಸಮಿತಿ ವರದಿ ಅಡಕೆ ಕ್ಯಾನ್ಸರ್‌ ಕಾರಕವೆಂದು ಹಾಗೂ ಅಡಕೆಯನ್ನು ಅಗಿಯುವ ಉದ್ದೇಶಕ್ಕಾಗಿ ಹಾಗೂ ಮಾದಕ ವಸ್ತುವನ್ನಾಗಿ ಉಪಯೋಗಿಸುವುದಾಗಿ ಉಲ್ಲೇಖೀಸಿರುವುದು ಪ್ರಸ್ತುತ ಅಡಕೆಯ ಆತಂಕಕ್ಕೆ ಮೂಲ ಕಾರಣವಾಗಿದೆ.  ರಾಜ್ಯದ 16 ಜಿಲ್ಲೆಗಳಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ಅಡಕೆಯನ್ನು, 2020ರ ನರೇಂದ್ರ ಮೋದಿ ಕೇಂದ್ರ ಸರ್ಕಾರದ ಬಜೆಟ್‌ನ ಪ್ರಮುಖ ಯೋಜನೆಯಾದ ಒಂದು ಜಿಲ್ಲೆ-ಒಂದು ಉತ್ಪನ್ನ ಈ ಯೋಜನೆಯಡಿ ಅಡಕೆ ಬೆಳೆಸುವ ರಾಜ್ಯದ ಯಾವ ಜಿಲ್ಲೆಯನ್ನೂ ಸೇರಿಸದೇ ಇರುವುದು ವಿಷಾದಕರ. ಈ ರೀತಿಯಾಗಿ ಕೇಂದ್ರ ಸರ್ಕಾರ ಅಡಕೆ ಬೆಳೆಗಾರರ ವಿರೋಧ ನೀತಿ ಪ್ರಕಟಿಸಿದೆ ಎಂದು ಅವರು ಹೇಳಿದ್ದಾರೆ.

 ಇದನ್ನೂ ಓದಿ :ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ಕ್ರಮ ಖಂಡನೀಯ: ಸಚಿವ ಅರವಿಂದ ಲಿಂಬಾವಳಿ

2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿನ ಚುನಾವಣಾ ಪ್ರಚಾರದಲ್ಲಿ ಉನ್ನತ ಮಟ್ಟದ ಅಡಕೆ ಸಂಶೋಧನಾ ಕೇಂದ್ರ 500  ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗಾದಲ್ಲಿ ಪ್ರಾರಂಭಿಸಲಾಗುವುದು ಎಂಬ ಇಂದಿನ ಗೃಹ ಸಚಿವ ಅಮಿತ್‌ ಶಾ ಆಶ್ವಾಸನೆ ಇಂದಿಗೂ ಈಡೇರದೇ ಇರುವುದು, ತದನಂತರ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆರೋಗ್ಯ ಸಚಿವ  ಅನುಪ್ರಿಯಾ ಪಟೇಲ್‌ ಹಾಗೂ ಅಶ್ವಿ‌ನ್‌ಕುಮಾರ ಬೌಬೆ ಅವರು 2017 ಮತ್ತು 2019 ರಲ್ಲಿ ಸಂಸತ್‌ ಅಧಿವೇಶನದಲ್ಲಿಯೇ ಅಡಕೆ ಕ್ಯಾನ್ಸರ್‌ ಮಾರಕವೆಂಬ ಹೇಳಿಕೆ ನೀಡಿರುವುದು ವಿಷಾದಕರ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು 7 ವರ್ಷ ಕಳೆದರೂ ಸುಪ್ರೀಂಕೋರ್ಟ್‌ನಲ್ಲಿ ಅಂಕುರ ಗುಟಕಾ ಕಂಪನಿ ವಿರುದ್ಧ ಇಂಡಿಯನ್‌ ಅಸ್ತಮ ಕೇರ್‌ ಸೊಸೈಟಿ ಪ್ರಕರಣದಲ್ಲಿ ಅಡಕೆ ಹಾನಿಕಾರವಲ್ಲ ಎಂದು ಪ್ರಮಾಣಪತ್ರ ಸಲ್ಲಿಸದೇ ಇರುವುದು ಅಡಕೆ ಬೆಳೆಗಾರರಿಗೆ ಕೇಂದ್ರ ಸರ್ಕಾರ ಎಸಗಿದ ದ್ರೋಹವಾಗಿದೆ ಎಂದು ಅವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next