ನವದೆಹಲಿ: ಉತ್ತರಪ್ರದೇಶದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಭಯೋತ್ಪಾದಕರು ಸೈಕಲ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಆರೋಪಕ್ಕೆ ಕಿಡಿಕಾರಿರುವ ಅಖಿಲೇಶ್ ಯಾದವ್, ಸೈಕಲ್ ಅನ್ನು ಅಪಮಾನಿಸುವುದು ಇಡೀ ದೇಶವನ್ನೇ ಅಪಮಾನಿಸಿದಂತೆ ಎಂಬುದಾಗಿ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:ಸಚಿವ ಈಶ್ವರಪ್ಪರಿಂದ ಅಶಾಂತಿ ಸೃಷ್ಟಿಸುವ ಹೇಳಿಕೆ: ಬಿ.ಕೆ ಹರಿಪ್ರಸಾದ್ ಟೀಕೆ
ಸೈಕಲ್ ಸಮಾಜವಾದಿ ಪಕ್ಷದ ಚಿಹ್ನೆಯಾಗಿದೆ. ಇದು ಜನಸಾಮಾನ್ಯರ ಸವಾರಿಗೆ ಅನುಕೂಲವಾಗಿದ್ದು, ಹಳ್ಳಿಗರ ಹೆಮ್ಮೆಯ ಪ್ರತೀಕವಾಗಿದೆ ಎಂದು ಸಮಾಜವಾದಿ ಪಕ್ಷ ಪ್ರತಿಪಾದಿಸಿದೆ ಎಂದು ವರದಿ ತಿಳಿಸಿದೆ.
ಸೈಕಲ್ ರೈತರು ಮತ್ತು ಅವರ ಗದ್ದೆಗಳನ್ನು ಸಂಪರ್ಕಿಸುತ್ತದೆ. ಇದು ಸಮೃದ್ಧಿಯ ಅಡಿಪಾಯ ಹಾಕುತ್ತದೆ. ಸೈಕಲ್ ನಮ್ಮ ಹೆಣ್ಣುಮಕ್ಕಳಿಗೆ ಶಾಲೆಗೆ ಹೋಗಲು ಅನುಕೂಲವಾಗುತ್ತದೆ. ಸಾಮಾಜಿಕ ನಿರ್ಬಂಧಗಳನ್ನು ಮೀರಿಸುತ್ತದೆ. ಸೈಕಲ್ ಜನಸಾಮಾನ್ಯರ ಸವಾರಿಗೆ ಅನುಕೂಲ ಕಲ್ಪಿಸುವ ಮೂಲಕ ಗ್ರಾಮೀಣ ಭಾರತದ ಹೆಮ್ಮೆಯಾಗಿದೆ ಎಂದು ಅಖಿಲೇಶ್ ತಿಳಿಸಿದ್ದಾರೆ.
ಕೆಲವು ರಾಜಕೀಯ ಪಕ್ಷಗಳು ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉತ್ತರಪ್ರದೇಶದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ದೂರಿದ್ದು, ಸಮಾಜವಾದಿ ಪಕ್ಷದ ಚುನಾವಣೆ ಚಿಹ್ನೆ ಭಯೋತ್ಪಾದಕರದ್ದಾಗಿದೆ ಎಂದು ವಾಗ್ದಾಳಿ ನಡೆಸಿದ್ದರು.
2008ರಲ್ಲಿ ನಡೆದ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಆರಂಭೀಕವಾಗಿ ಬಾಂಬ್ ಗಳನ್ನು ಸೈಕಲ್ ನಲ್ಲಿ ಇಟ್ಟು ಸ್ಫೋಟಿಸಲಾಗಿತ್ತು. ಭಯೋತ್ಪಾದಕರು ಏಕೆ ಸೈಕಲ್ ನ್ನು ಆಯ್ಕೆ ಮಾಡಿಕೊಂಡರು ಎಂಬುದು ನನಗೆ ಅಚ್ಚರಿಯ ವಿಷಯವಾಗಿದೆ ಎಂದಿದ್ದರು.
2006ರಲ್ಲಿ ವಾರಣಾಸಿ ಮತ್ತು 2007ರಲ್ಲಿ ಅಯೋಧ್ಯೆ ಮತ್ತು ಲಕ್ನೋದಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಪ್ರಕರಣಗಳನ್ನು ಸಮಾಜವಾದಿ ಪಕ್ಷ ಹಿಂಪಡೆದಿತ್ತು ಎಂದು ಪ್ರಧಾನಿ ಆರೋಪಿಸಿದ್ದರು.