ಬೀದರ: ನಾಡಗೀತೆ ತಿರುಚಿ ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಿದ ಹಾಗೂ ಪಠ್ಯದಲ್ಲಿ ಬಸವಣ್ಣನವರ ಇತಿಹಾಸ ತಿರುಚಿರುವುದನ್ನು ಖಂಡಿಸಿ ನಗರದಲ್ಲಿ ಶುಕ್ರವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕನ್ನಡಪರ-ಬಸವಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಜಿಲ್ಲಾ ಕಸಾಪ ಮತ್ತು ಸಂಘಟನೆಗಳ ಕಾರ್ಯಕರ್ತರು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪ್ರಮುಖ ರಸ್ತೆಗಳ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ಮೂಲಕ ತೆರಳಿ ಸಿಎಂ ಬಸವರಾಜ ಬೊಮ್ಮಾಯಿಗೆ ಬರೆದ ಮನವಿ ಪತ್ರವನ್ನು ಸಹಾಯಕ ಆಯುಕ್ತರಿಗೆ ಸಲ್ಲಿಸಿದರು. ಜಿಲ್ಲೆಯ ಮಠಾಧೀಶರು ಪ್ರತಿಭಟನೆಗೆ ಸಾಥ್ ನೀಡಿದರು.
ಸಾಹಿತಿಗಳು, ಕಲಾವಿದರು ನಾಡಿನ ಶಾಸಕರು ಇದ್ದಂತೆ. ಅವರನ್ನು ಅಪಮಾನಗೊಳಿಸುವುದು ಅಥವಾ ಅವರ ಚರಿತ್ರೆ ತಿರುಚಿ ಬರೆಯುವುದು ಅಕ್ಷಮ್ಯ ಅಪರಾಧ. ಆದರೆ, ಇತ್ತಿಚೆಗೆ ಪಠ್ಯ ಪುಸ್ತಕ ಪರಿಷ್ಕರಣೆ ಹೆಸರಿನಲ್ಲಿ ಸರ್ಕಾರ ಸಾಹಿತಿಗಳನ್ನು ಅಪಮಾನಗೊಳಿಸಿರುವುದು, ಅವರ ಚರಿತ್ರೆ ತಿರುಚಿ ಬರೆಸುವ ಮೂಲಕ ನಾಡಿನಲ್ಲಿ ಅರಾಜಕತೆ ಹುಟ್ಟು ಹಾಕುತ್ತಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ಈ ದಿಸೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರನ್ನು ನಿಂದಿಸಿ, ನಾಡಗೀತೆ ತಿರುಚಿ ಬರೆದವರ ವಿರುದ್ಧ ಸರ್ಕಾರ ತಡ ಮಾಡದೆ ಒಂದು ವಾರದೊಳಗೆ ಕ್ರಮ ಕೈಗೊಳ್ಳಬೇಕು. ಕುವೆಂಪು ಅವರ ಕುರಿತು ಅವಹೇಳನಕಾರಿ ಮಾತುಗಳು ಆಡಿರುವುದು ಹಾಗೂ ನಾಡಗೀತೆ ತಿರುಚಿ ಬರೆದಿರುವ ಕುರಿತು ಪತ್ರಿಕೆಗಳಲ್ಲಿ ಓದುವ ಹೀನಾಯ ಸ್ಥಿತಿ ತಲುಪಿರುವುದು ನಾಡಿನ ಜನಮಾನಸಕ್ಕೆ ಅತ್ಯಂತ ಖೇದದ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಪ್ರತಿಭಟನೆಯಲ್ಲಿ ಭಾಲ್ಕಿಯ ಡಾ| ಬಸವಲಿಂಗ ಪಟ್ಟದ್ದೇವರು, ಹುಲಸೂರಿನ ಡಾ| ಶಿವಾನಂದ ಸ್ವಾಮಿಗಳು, ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ತಾಯಿ, ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ, ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ, ಲಿಂಗಾಯತ ಬ್ರಿಗೇಡ್ ಅಧ್ಯಕ್ಷ ಬಸವರಾಜ ಪಾಟೀಲ ಹಾರೂರಗೇರಿ, ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ, ವಿವಿಧ ಸಂಘಟನೆಗಳ ಪ್ರಮುಖರಾದ ಆನಂದ ದೇವಪ್ಪ, ಶ್ರೀಕಾಂತ ಸ್ವಾಮಿ, ವಿರೂಪಾಕ್ಷ ಗಾದಗಿ, ಶಾಮರಾವ್ ಬಾವಗಿ, ಡಾ| ಎಂ.ಜಿ ದೇಶಪಾಂಡೆ, ವಿದ್ಯಾವತಿ ಬಲ್ಲೂರ, ವಿಜಯಲಕ್ಷ್ಮೀ ಕೊಡಗೆ, ಭಾರತಿ ವಸ್ತ್ರದ, ರೂಪಾ ಪಾಟೀಲ, ರಜಿಯಾ ಬಳಬಟ್ಟಿ, ಲಿಂಗಾರತಿ ಅಲ್ಲಮಪ್ರಭು, ಸಕಲೇಶ್ವರಿ ಚನಶೆಟ್ಟಿ, ಪಾರ್ವತಿ ಬಿರಾದಾರ, ಇಂದುಮತಿ, ಮಾರುತಿ ಬೌದ್ಧೆ, ಬಿ.ಜಿ. ಶೆಟಕಾರ, ಬಸವರಾಜ ಬಲ್ಲೂರ, ಮಹ್ಮದ್ ಅಸದುದ್ದೀನ್, ಇಸ್ಮಾಯಿಲ್ ಅಹ್ಮದ್, ಉಮಾಕಾಂತ ಮೀಸೆ ಇದ್ದರು.