ಬೆಂಗಳೂರು: ರಾಜಧಾನಿ ಬೆಂಗಳೂರಿನ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಬೆಂಗಳೂರು ನಗರಕ್ಕೆ ಲಿಂಗನಮಕ್ಕಿ ಜಲಾಶಯದಿಂದ ನೀರು ತರುವ ಬೃಹತ್ ಯೋಜನೆಗೆ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸೂಚಿಸಿದರು.
ಲಿಂಗನಮಕ್ಕಿ ಡ್ಯಾಂನಿಂದ ನೀರು ತರುವ ಯೋಜನೆ ರೂಪುರೇಷೆಗಳ ಕುರಿತು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿಎಂಆರ್‌ಡಿಎ)ನಲ್ಲಿ ಅಧಿಕಾರಿ ಗಳೊಂದಿಗೆ ಗುರುವಾರ ಸಭೆ ನಡೆಸಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಕಾವೇರಿಯಿಂದ 1,400 ದಶಲಕ್ಷ ಲೀ.ನಷ್ಟು ನೀರನ್ನು ನಗರಕ್ಕೆ ಹರಿಸಲಾಗುತ್ತಿದೆ. ಆದರೂ, ನೀರಿನ ಸಮಸ್ಯೆ ಕಂಡುಬರುತ್ತಿದೆ. ಕೆಲವೆಡೆ ಕಾವೇರಿ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಕಾವೇರಿ 5ನೇ ಹಂತದ ಯೋಜನೆಯಿಂದ 800 ದಶಲಕ್ಷ ಲೀ. ನೀರು ತರಬಹುದು. ಆದರೂ ನೀರಿನ ಸಮಸ್ಯೆ ಬಗೆಹರಿಯುವುದಿಲ್ಲ. ಅಲ್ಲದೇ ಕಾವೇರಿ ಮೊದಲ ಹಾಗೂ 2ನೇ ಹಂತದಿಂದಲೂ ನೀರಿನ ಪ್ರಮಾಣ ಇಳಿಕೆಯಾಗಿದೆ. ಎತ್ತಿನಹೊಳೆ ಯೋಜನೆ ಮೂಲಕ 2.5 ಟಿಎಂಸಿ ನೀರು ತರಲಾಗುತ್ತದೆ. ಆದರೂ ಬೆಂಗಳೂರಿಗೆ ಸಾಲದು. ಹೀಗಾಗಿ, ಇತರೆ ಮೂಲದಿಂದ ನೀರು ತರುವ ಅನಿವಾರ್ಯತೆ ಇದೆ ಎಂದರು.
ಈ ಹಿಂದೆ ತ್ಯಾಗರಾಜ್ ಸಮಿತಿಯು ಲಿಂಗನಮಕ್ಕಿಯಿಂದಲೂ ನೀರು ಹರಿಸಬಹುದು ಎಂದು ವರದಿ ನೀಡಿತ್ತು. ಈ ವರದಿ ಅಧ್ಯಯನ ನಡೆಸಿ ನೀರು ತರುವ ಸಾಧ್ಯತೆಯನ್ನು ಕಂಡುಕೊಳ್ಳಲಾಗಿದೆ. ಹೀಗಾಗಿ ಡಿಪಿಆರ್ ಸಿದ್ಧಪಡಿಸಲು ಸೂಚಿಸಲಾಗಿದೆ. ಡಿಪಿಆರ್ ಸಿದ್ಧವಾದ ಬಳಿಕ ಪರಿಸರ, ನೀರು ಪಂಪ್ ಮಾಡಲು ಇರುವ ಸವಾಲುಗಳ ಒಟ್ಟಾರೆ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಅವಲೋಕಿಸಲಾಗುವುದು ಎಂದರು.
ಲಿಂಗನಮಕ್ಕಿಯು ಬೆಂಗಳೂರಿಗೆ 300ಕಿ.ಮೀ. ದೂರವಿದ್ದು, ಯೋಜನೆಗೆ 12 ಸಾವಿರ ಕೋಟಿ ರೂ.ವೆಚ್ಚ ಅಂದಾಜಿಸಲಾಗಿದೆ. ಆದರೆ ವೆಚ್ಚದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಮೊದಲ ಹಂತದಲ್ಲಿ 10 ಟಿಎಂಸಿ ನೀರನ್ನು ತರಲು ಯೋಜಿಸಲಾಗಿದೆ. ಲಿಂಗನಮಕ್ಕಿ ಕೇವಲ ವಿದ್ಯುತ್ ಉತ್ಪಾದನೆಗಷ್ಟೇ ಬಳಕೆಯಾಗುತ್ತಿದೆ. ಬಳಿಕ ಈ ನೀರು ಸಮುದ್ರದ ಪಾಲಾಗುತ್ತಿದೆ. ಈ ಜಲಾಶಯದಿಂದ ಯಾವುದೇ ನೀರಾವರಿ ಯೋಜನೆ ಕೈಗೊಂಡಿಲ್ಲ. ಹೀಗಾಗಿ, ಈ ಮೂಲದಿಂದ ನೀರು ತರುವುದರಿಂದ ಯಾವುದೇ ರೈತರಿಗೂ ಸಮಸ್ಯೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಭೈರತಿ ಬಸವರಾಜ್, ಪ್ರಸಾದ್ ಅಬ್ಬಯ್ಯ, ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಉಪಸ್ಥಿತರಿದ್ದರು.