Advertisement

ಆಹಾರ ಕಲಬೆರಕೆ ನಿಯಂತ್ರಿಸಲು ಸೂಚನೆ

11:40 AM Apr 27, 2022 | Team Udayavani |

ಕುಷ್ಟಗಿ: ಜಿಲ್ಲೆಯಲ್ಲಿ ಆಹಾರ ಕಲಬೆರಕೆ ನಿಯಂತ್ರಿಸಬೇಕೆಂದು ಸಂಸದ ಸಂಗಣ್ಣ ಕರಡಿ ಅವರು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಅಲಕಾನಂದ ಮಾಳಗಿ ಅವರಿಗೆ ಸೂಚಿಸಿದರು.

Advertisement

ತಾಲೂಕು ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ 75ನೇ ವರ್ಷದ ಸ್ವಾತಂತ್ರ್ಯ ಮಹೋತ್ಸವದ ಪ್ರಯುಕ್ತ ನಡೆದ ತಾಲೂಕು ಮಟ್ಟದ ಆರೋಗ್ಯ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜನರು ಕಲಬೆರಕೆ ಆಹಾರ ಸೇವಿಸಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದು, ಇದನ್ನು ತಡೆದಾಗ ಮಾತ್ರ ಅನೇಕ ಕಾಯಿಲೆ ನಿಯಂತ್ರಿಸಲು ಸಾಧ್ಯವಿದೆ. ನಾವು ಬದುಕಲು ಆಹಾರ ಸೇವಿಸುತ್ತಿದ್ದೇವೆ. ಅದೇ ಆಹಾರ ಕಲಬೆರಕೆಯಾದರೆ ನಾವೇ ಕಾಯಿಲೆ ಆಹ್ವಾನಿಸುವ ವ್ಯವಸ್ಥೆಗೆ ಬಂದಂತಾಗುತ್ತಿದೆ ಎಂದರು.

ಶಾಸಕ ಅಮರೇಗೌಡ ಪಾಟೀಲ ಬಯ್ನಾಪುರ ಮಾತನಾಡಿ, ಕುಷ್ಟಗಿ ಸರ್ಕಾರಿ ಅಸ್ಪತ್ರೆಯಲ್ಲಿ ಸಿಬ್ಬಂದಿ, ಉಪಕರಣಗಳ ಸುವ್ಯವಸ್ಥೆ ಇದೆ. ಆದರೆ ಮನಃಪೂರ್ವಕ ಕೆಲಸ ಇಲ್ಲ. ಸಿಬ್ಬಂದಿ ಮನಸ್ಸು ಮತ್ತು ಉಪಕರಣಗಳಿಗೆ ತುಕ್ಕು ಹಿಡಿಯದಂತೆ ಕೆಲಸ ಮಾಡಬೇಕು. ಈ ಆರೋಗ್ಯ ಮೇಳದಲ್ಲಿ ಎಲ್ಲ ಸೌಲಭ್ಯ ಕೊಟ್ಟರೂ, ಮನಸ್ಸು ಕೊಟ್ಟು ಕೆಲಸ ಮಾಡದೇ ಇದ್ದರೆ ಮೇಳ ಯಶಸ್ವಿಯಾಗುವುದಿಲ್ಲ. ಸೌಲಭ್ಯದಲ್ಲಿ ನ್ಯೂನ್ಯತೆ ಇದ್ದರೆ ನನ್ನನ್ನು ಕೇಳಿ. ಔಷಧ, ಉಪಕರಣ ಏನೇ ತರಿಸಿಕೊಳ್ಳಿ ಅದಕ್ಕೆ ಹಣವಿದೆ, ಸರ್ಕಾರ ಎಂದು ಕೊರತೆ ಮಾಡಿಲ್ಲ. ಸಿಬ್ಬಂದಿ ಸೇವೆಯಲ್ಲಿ ಕೊರತೆಯಾಗಬಾರದು. ಕಳೆದ ವರ್ಷ ಜಿಲ್ಲೆಯ ಶಾಸಕರು ಹಾಗೂ ಸಂಸದರ ಅನುದಾನದಲ್ಲಿ 8 ಕೋಟಿ ಕೋವಿಡ್‌ಗೆ ನೀಡಲಾಗಿತ್ತು. ಇದರಲ್ಲಿ ಜಿಲ್ಲಾಧಿಕಾರಿಗಳು ಖರ್ಚು ಮಾಡದೇ 2 ಕೋಟಿ ಉಳಿಸಿದ್ದಾರೆ. ಇದನ್ನು ವಿಚಾರಿಸಿದರೆ ಅವರಿಗೆ ತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಆಮ್ಲಜನಕ ಘಟಕ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ 50 ಕಾನ್ಸೆಂಟರೇಟರ್‌ ಉಪಕರಣ ಉಪಯೋಗ ವಿಲ್ಲದಂತಾಗಿದೆ ಎಂದರು.

ಉಪಕರಣಗಳನ್ನು ಸರಿಯಾಗಿ ಬಳಸಿ ಉತ್ತಮ ಸೇವೆಯ ಮೂಲಕ ಜನರನ್ನು ಖುಷಿಗೊಳಿಸುವ ಕೆಲಸ ಮಾಡಿದರೆ ಮಾತ್ರ ಜಿಲ್ಲೆಯಲ್ಲಿ ಇನ್ನೊಂದು ಗಂಗಾವತಿ ಆಸ್ಪತ್ರೆಯಾಗಲು ಸಾಧ್ಯವಿದೆ. ಗಂಗಾವತಿ ಸರ್ಕಾರಿ ಆಸ್ಪತ್ರೆಯಂತೆ ಕುಷ್ಟಗಿ ಆಸ್ಪತ್ರೆಯಂತಾಗಲು ಆರೋಗ್ಯ ಇಲಾಖೆ ಸಿಬ್ಬಂದಿ ಇಚ್ಛಾಶಕ್ತಿ ಇರಬೇಕು. ಆರೋಗ್ಯ ಇಲಾಖೆಯವರೇ ನೇರ ಹೊಣೆಗಾರರು ಎಂದರು.

Advertisement

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಅಲಕಾನಂದ ಮಳಗಿ, ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ, ಉಪಾಧ್ಯಕ್ಷೆ ಹನುಮವ್ವ ಕೋರಿ, ಕುಷ್ಟಗಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ| ಕೆ.ಎಸ್‌. ರಡ್ಡಿ, ಡಾ| ರವೀಂದ್ರನಾಥ, ಡಾ| ಮಹೇಶ, ತಾಲೂಕು ವೈದ್ಯಾಧಿಕಾರಿ ಡಾ| ಆನಂದ ಗೋಟೂರು ಆರೋಗ್ಯ ಸುರಕ್ಷಾ ಸಮಿತಿಯ ರಾಜು ವಾಲೀಕಾರ ಶಕುಂತಲಾ ಹಿರೇಮಠ, ಜಗ್ಗನಗೌಡ ಪಾಟೀಲ, ಪುರಸಭೆ ಸದಸ್ಯರಾದ ರಾಜೇಶ ಪತ್ತಾರ, ಮಹಾಂತೇಶ ಕಲ್ಲಬಾವಿ, ಜೆ.ಜೆ. ಆಚಾರ್‌ ಮತ್ತೀತರಿದ್ದರು.

ಆರೋಗ್ಯ ಮೇಳದಲ್ಲಿ ಕಲಾವಿದ ಶರಣಪ್ಪ ವಡಿಗೇರಿ ಕಲಾ ತಂಡದಿಂದ ಜಾಗೃತಿ ಗೀತೆಗಳು, ವಿವಿಧ ಸೇವೆಗಳ ಆರೋಗ್ಯ ಮಳಿಗೆಗಳ ರೋಗಗಳ ಮುನ್ನೆಚ್ಚರಿಕೆ ಮಾಹಿತಿ, ರೋಗಿಗಳ ಉಚಿತ ತಪಾಸಣೆ, ಔಷಧ, ಆರೋಗ್ಯ ಕಾರ್ಡ್‌ ವಿತರಿಸಲಾಯಿತು.

ಕುಷ್ಟಗಿ ಸರ್ಕಾರಿ ಆಸ್ಪತ್ರೆಗೂ ಗಂಗಾವತಿ ಆಸ್ಪತ್ರೆಗೂ ಸೇವೆಯಲ್ಲಿ ವ್ಯತ್ಯಾಸವಿಲ್ಲ. ಎರಡೂ ಉತ್ತಮ ಸೇವೆಯಲ್ಲಿವೆ. ಕುಷ್ಟಗಿ ಸರ್ಕಾರಿ ಆಸ್ಪತ್ರೆ ಸೇವೆಯಿಂದ ಗುರುತಿಸಿಕೊಂಡಿದ್ದು, ಸೇವೆಯೂ ಪ್ರದರ್ಶಿತಗೊಂಡಿಲ್ಲ. -ಡಾ| ಅಲಕಾನಂದ ಮಳಗಿ, ಡಿಎಚ್‌ಒ

Advertisement

Udayavani is now on Telegram. Click here to join our channel and stay updated with the latest news.

Next