ಶಿವಮೊಗ್ಗ: ಕೋವಿಡ್ 19 ಸೋಂಕು ಹಿನ್ನೆಲೆಯಲ್ಲಿ ಎಲ್ಲಾ ಖಾಸಗಿ ಆಸ್ಪತ್ರೆಗಳು ಜಿಲ್ಲಾಡಳಿತದ ನಿರ್ದೇಶನದಂತೆ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಸೂಚನೆ ನೀಡಿದರು.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ವಿವಿಧ ಖಾಸಗಿ ಆಸ್ಪತ್ರೆ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಅವರು ಮಾತನಾಡಿದರು. ಜ್ವರ, ಸೋಂಕು ಸೇರಿದಂತೆ ಒಂದಕ್ಕಿಂತ ಹೆಚ್ಚು ರೋಗ ಲಕ್ಷಣಗಳನ್ನು ಹೊಂದಿರುವವರನ್ನು ನೇರವಾಗಿ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಇನ್ನುಳಿದ ರೋಗಗಳಿಗೆ ಚಿಕಿತ್ಸೆಯನ್ನು ಯಾವುದೇ ಕಾರಣಕ್ಕೂ ಖಾಸಗಿ ಆಸ್ಪತ್ರೆಗಳಲ್ಲಿ ನಿರಾಕರಿಸಬಾರದು. ಮೆಗ್ಗಾನ್ ಆಸ್ಪತ್ರೆಯನ್ನು ಕೋವಿಡ್ 19 ಚಿಕಿತ್ಸೆಗಾಗಿ ಮಾತ್ರ ನಿಗದಿಪಡಿಸಲಾಗಿದ್ದು, ಇನ್ನುಳಿದ ಒಳರೋಗಿ ಚಿಕಿತ್ಸೆಗಳಿಗೆ ಸುಬ್ಬಯ್ಯ ಮೆಡಿಕಲ್ ಕಾಲೇಜನ್ನು ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ಜ್ವರ, ಸೋಂಕು ಹೊರತುಪಡಿಸಿ ಎಲ್ಲಾ ರೋಗಿಗಳಿಗೆ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.
ಮೆಗ್ಗಾನ್ ಆಸ್ಪತ್ರೆಯಲ್ಲಿ ಜ್ವರ ಪೀಡಿತ ವ್ಯಕ್ತಿಗಳನ್ನು ದಾಖಲು ಮಾಡದೆ ಬೇರೆ ಆಸ್ಪತ್ರೆಗಳಿಗೆ ಕಳುಹಿಸಿರುವ ಬಗ್ಗೆ ದೂರುಗಳು ಬಾರದಂತೆ ನೋಡಿಕೊಳ್ಳಬೇಕು. ಸೇವೆಯಲ್ಲಿ ಲೋಪ ಎಸಗದೆ ಕರ್ತವ್ಯ ನಿರ್ವಹಿಸುವಂತೆ ಅವರು ಮನವಿ ಮಾಡಿದರು.
ಸುತ್ತೋಲೆ: ಶಾಲೆಗಳಿಗೆ ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ಬಿಸಿಯೂಟದ ಬದಲು, ಆಯಾ ವಿದ್ಯಾರ್ಥಿಗಳ ಮನೆಗೆ ಅಕ್ಕಿ, ಬೇಳೆ ತಲುಪಿಸುವಂತೆ ಶಿಕ್ಷಕರಿಗೆ ಸೂಚಿಸಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೆ ಪ್ರಾಯೋಗಿಕವಾಗಿ ಇದು ಕಷ್ಟವಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಗ್ರಾಪಂ ಚುನಾವಣೆ ಮುಂದಕ್ಕೆ: ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಮೇ ತಿಂಗಳಲ್ಲಿ ನಡೆಯಬೇಕಾಗಿತ್ತು. ಕೋವಿಡ್ 19 ಹಿನ್ನೆಲೆಯಲ್ಲಿ ಚುನಾವಣೆ ಮುಂದಕ್ಕೆ ಹಾಕುವಂತೆ ಕೋರಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ. ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿಗೆ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಮುಂದಿನ ಚುನಾವಣೆಯಲ್ಲಿ ಈ ತಿದ್ದುಪಡಿ ಅನ್ವಯವಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು, ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತೇಶ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಎಲ್. ವೈಶಾಲಿ ಮತ್ತಿತರರು ಇದ್ದರು.