ಧಾರವಾಡ: ಪ್ರತಿದಿನ ಕನಿಷ್ಠ ಒಂದು ಸಾವಿರ ಪ್ರಯೋಗಾಲಯ ವರದಿಗಳನ್ನು ಸಿದ್ಧಪಡಿಸಲು ಪ್ರಯೋಗಾಲಯದ ಸಾಮರ್ಥ್ಯವನ್ನು ವೃದ್ಧಿಗೊಳಿಸಬೇಕು ಎಂದು ಡಿಸಿ ದೀಪಾ ಚೋಳನ್ ಸೂಚನೆ ನೀಡಿದರು.
ನಗರದ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಿಮ್ಸ್ ಮತ್ತು ಡಿಮ್ಹಾನ್ಸ್‌ನಲ್ಲಿರುವ ಕೋವಿಡ್ ಪ್ರಯೋಗಾಲಯಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ಅಗತ್ಯ ಮಾನವ ಸಂಪನ್ಮೂಲವನ್ನು ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಕೃಷಿ ವಿಶ್ವವಿದ್ಯಾಲಯಗಳ ಮೈಕ್ರೋಬಯೋಲಾಜಿ ವಿಭಾಗಗಳು, ಡಿಎನ್‌ಎ ಸಂಶೋಧನಾ ಸಂಸ್ಥೆಗಳಿಂದ ಪಡೆಯಬಹುದು. ಇದರ ಜೊತೆಗೆ ಎಸ್‌ಡಿಎಂ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹೊಸ ಪ್ರಯೋಗಾಲಯ ಸ್ಥಾಪನೆಗೆ ಕೂಡಲೇ ಎನ್ ಎಬಿಎಲ್ ಮಾನ್ಯತೆಗೆ ಪ್ರಸ್ತಾವನೆ ಸಲ್ಲಿಸುವಂತೆಯೂ ಸೂಚಿಸಿದರು.
ಕೋವಿಡ್ ಪತ್ತೆಗೆ ತಪಾಸಣೆ ಮಾಡುವ ಪ್ರಮಾಣದಲ್ಲಿ ಸಾಕಷ್ಟು ಹೆಚ್ಚಳವಾಗಲಿದೆ. ಹೀಗಾಗಿ ಜಿಲ್ಲೆಯಲ್ಲಿ ಸದ್ಯ ಇರುವ ಪ್ರಯೋಗಾಲಯಗಳಿಗೆ ಅಗತ್ಯವಿರುವ ಅತ್ಯಾಧುನಿಕ ಉಪಕರಣಗಳನ್ನು ಪೂರೈಸಲಾಗುವುದು. ತೀವ್ರ ಉಸಿರಾಟದ ತೊಂದರೆ (ಎಸ್‌ಎಆರ್‌ಐ) ಹಾಗೂ ಕೆಮ್ಮು, ನೆಗಡಿ ಹಾಗೂ ತೀವ್ರ ಜ್ವರ (ಐಎಲ್‌ಐ) ಪ್ರಕರಣಗಳನ್ನು ರ್ಯಾಪಿಡ್ ಟೆಸ್ಟ್ ಮೂಲಕ ಪತ್ತೆ ಮಾಡಲು ಅವಕಾಶವಿದೆ. ನಿಖರ ವರದಿಗೆ ಪಿಸಿಆರ್ ಅಗತ್ಯವಿದ್ದರೆ ಎಸ್‌ಡಿಆರ್‌ಎಫ್ ನಿಧಿ ಯಡಿ ಅಂತಹ ಉಪಕರಣಗಳನ್ನು ಖರೀದಿಸಲು ಅವಕಾಶ ನೀಡಲಾಗುವುದು ಎಂದರು.ಡಿಎನ್‌ಎ ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ| ಪ್ರಮೋದ ಗಾಯಿ ಮಾತನಾಡಿ, ಮೈಕ್ರೋಬಯೋಲಾಜಿ ಮತ್ತು ಜೈವಿಕ ತಂತ್ರಜ್ಞಾನ ವಿಷಯಗಳಲ್ಲಿ ಪರಿಣಿತರಾದ ಮಾನವ ಸಂಪನ್ಮೂಲ ಲಭ್ಯವಿದೆ. ಪ್ರಯೋಗಾಲಯ ಸಾಮರ್ಥ್ಯ ಹೆಚ್ಚಿಸಲು ಸರದಿ ಆಧಾರದಲ್ಲಿ ಸೇವೆಗೈಯಲು ಈ ಸಂಶೋಧಕರನ್ನು ಒದಗಿಸಲಾಗುವುದು ಎಂದರು.
ಜಿಪಂ ಸಿಇಒ ಡಾ| ಬಿ.ಸಿ. ಸತೀಶ್, ಪಾಲಿಕೆ ಆಯುಕ್ತ ಡಾ| ಸುರೇಶ್ ಇಟ್ನಾಳ, ಶಿವಾನಂದ ಕರಾಳೆ, ಡಾ| ಆಶಾ ಪಾಟೀಲ, ಡಾ| ರಾಘವೇಂದ್ರ ನಾಯ್ಕ, ಡಿಎಚ್‌ಒ ಡಾ| ಯಶವಂತ ಮದೀನಕರ ಇದ್ದರು.
ಕೃವಿವಿಗೆ ಭೇಟಿ: ಹೊರ ರಾಜ್ಯಗಳಿಂದ ಆಗಮಿಸುವ ವಲಸೆ ಕಾರ್ಮಿಕರನ್ನು ಗುರುತಿಸಿ ನೋಂದಣಿ ಮಾಡಿಕೊಳ್ಳಲು ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಸ್ಥಳ ಪರಿಶೀಲನೆಗಾಗಿ ಡಿಸಿ ದೀಪಾ ಚೋಳನ್ ಭೇಟಿ ನೀಡಿ ನೋಂದಣಿ, ವೈದ್ಯಕೀಯ ತಪಾಸಣೆ, ಕುಡಿಯುವ ನೀರು, ಆಹಾರ, ಶೌಚಾಲಯ, ಮೂಲ ಸೌಕರ್ಯಗಳ ಪರಿಶೀಲನೆ ಮಾಡಿದರು.
ಹೊರ ರಾಜ್ಯಗಳಿಂದ ಆಗಮಿಸುವ ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿ ಜಿಲ್ಲೆಯ ವಿವಿಧ ತಾಲೂಕುಗಳ ಸರ್ಕಾರಿ ಶಾಲೆ, ಹಾಸ್ಟೆಲ್, ಕಲ್ಯಾಣ ಮಂಟಪ ಮತ್ತಿತರ ಕಟ್ಟಡಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.
-ದೀಪಾ ಚೋಳನ್, ಜಿಲ್ಲಾಧಿಕಾರಿ