ಕಲಬುರಗಿ: ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 2018-19ನೇ ಸಾಲಿಗಾಗಿ ಮಂಡಳಿ ವ್ಯಾಪ್ತಿಯಲ್ಲಿ ಒಟ್ಟು 4422 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು, ಕಾಮಗಾರಿಗಳನ್ನು ಶೀಘ್ರ ಗತಿಯಲ್ಲಿ ಪ್ರಾರಂಭಿಸಿ ಪೂರ್ಣಗೊಳಿಸಬೇಕೆಂದು ಹೈ.ಕ.ಪ್ರ.ಅ. ಮಂಡಳಿ ಕಾರ್ಯದರ್ಶಿ ಸುಬೋಧ ಯಾದವ ಕಲಬುರಗಿ ವಿಭಾಗದ ಅನುಷ್ಠಾನ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಹೈ.ಕ.ಪ್ರ.ಅ. ಮಂಡಳಿಯ ವ್ಯಾಪ್ತಿಯ 6 ಜಿಲ್ಲೆಗಳ ಅನುಷ್ಠಾನಾಧಿಕಾರಿಗಳ ಸಭೆ ಕರೆದು ಕಾಮಗಾರಿಗಳ ಪ್ರಗತಿ ಪರಿಶೀಲಿಸಿ 2013-14ರಿಂದ 2017-18ರವರೆಗೆ ಅನುಮೋದನೆ ನೀಡಲಾದ ಒಟ್ಟು 13,364 ಕಾಮಗಾರಿಗಳ ಪೈಕಿ 543 ಕಾಮಗಾರಿಗಳನ್ನು ಈವರೆಗೆ ಪ್ರಾರಂಭಿಸಿಲ್ಲ.
ಈ ಕಾಮಗಾರಿಗಳ ವಿವರವನ್ನು ಆಯಾ ಜಿಲ್ಲೆ ಜಿಲ್ಲಾಧಿಕಾರಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತರಬೇಕು. ಪ್ರಾರಂಭವಾಗದ ಕಾಮಗಾರಿಗಳ ಪೈಕಿ ಯಾವುದಾದರೂ ಕಾಮಗಾರಿ ಕೈಬಿಡಬೇಕಾದಲ್ಲಿ ಮಂಡಳಿಗೆ ಮಾಹಿತಿ ಸಲ್ಲಿಸಬೇಕು ಎಂದರು.
ಹೈ.ಕ. ಪ್ರ.ಅ. ಮಂಡಳಿ ವ್ಯಾಪ್ತಿಯ ಎಲ್ಲ ಜಿಲ್ಲೆಗಳಲ್ಲಿ ಮಂಡಳಿ ಕಾಮಗಾರಿಗಳ ಪರಿಶೀಲನೆಗೆ ತಾಂತ್ರಿಕ ಶಾಖೆ ಪ್ರಾರಂಭಿಸಲಾಗಿದೆ. ಈ ಶಾಖೆಯಲ್ಲಿರುವ ಅಧಿಕಾರಿಗಳು ಮುತುವರ್ಜಿ ವಹಿಸಿ ಮಂಡಳಿ ಕಾಮಗಾರಿಗಳು ಶೀಘ್ರ ಗತಿಯಲ್ಲಿ ಪ್ರಾರಂಭವಾಗಿ ಪೂರ್ಣಗೊಳ್ಳುವ ಹಾಗೆ ನೋಡಿಕೊಳ್ಳಬೇಕು. ತಾಂತ್ರಿಕ ಶಾಖೆ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದಿದ್ದರೆ ಮುಂದಿನ ದಿನಗಳಲ್ಲಿ ವೇತನ ದೊರೆಯುವುದು ಕಷ್ಟಸಾಧ್ಯವಾಗುತ್ತದೆ. ಮಂಡಳಿಯಿಂದ ಕೈಗೊಳ್ಳಲಾದ ಕಾಮಗಾರಿ ಪೂರ್ಣಗೊಂಡ ನಂತರ ಅಂತಿಮ ಬಿಲ್ ಸಲ್ಲಿಸಿದಾಗ, ಅದರ ಜೊತೆಗೆ ಕಾಮಗಾರಿ ಪೂರ್ಣಗೊಂಡಿರುವ ಬಗ್ಗೆ ಹಾಗೂ ಸಂಬಂಧಿಸಿದ ಇಲಾಖೆಗೆ ಕಾಮಗಾರಿ ಹಸ್ತಾಂತರಿಸಿದ ಬಗ್ಗೆ ಪ್ರಮಾಣಪತ್ರದೊಂದಿಗೆ ಬಿಲ್‌ಗಳನ್ನು ಜಿಲ್ಲಾಧಿಕಾರಿ, ಜಿಪಂ ಸಿಇಒ ಮುಖಾಂತರ ಮಂಡಳಿಗೆ ಸಲ್ಲಿಸಬೇಕು ಎಂದು ತಿಳಿಸಿದರು.
ಮಂಡಳಿಯಿಂದ ಪ್ರಾರಂಭಿಸಲಾದ ಕಾಮಗಾರಿಗಳು ವಿವಿಧ ಹಂತಗಳನ್ನು ತಲುಪಿದಾಗ ಆ ಹಂತದ ಬಿಲ್‌ಗಳನ್ನು ಸಲ್ಲಿಸಬೇಕು. ಇದರಿಂದ ಆರ್ಥಿಕ ಪ್ರಗತಿ ಕಂಡುಬರುತ್ತದೆ. ಈ ನಿಟ್ಟಿನಲ್ಲಿ ಮುಖ್ಯ ಇಂಜಿನಿಯರ್ ಎಲ್ಲ ಅನುಷ್ಠಾನ ಸಂಸ್ಥೆಗಳಿಗೆ ನಿರ್ದೇಶನ ನೀಡಬೇಕು. ಕೆಲವು ಕಾಮಗಾರಿಗಳು ಸ್ಥಳಾವಕಾಶ ಇಲ್ಲದ ಕಾರಣ ಪ್ರಾರಂಭಗೊಂಡಿಲ್ಲ. ಅಂತಹ ಕಾಮಗಾರಿಗಳನ್ನು ಕೈಬಿಡುವ ಸಂದರ್ಭದಲ್ಲಿ ಅದರೊಂದಿಗೆ ಬೇರೆ ಸ್ಥಳದಲ್ಲಿ ಕೈಗೊಳ್ಳಬಹುದಾದ ಕಾಮಗಾರಿ ವಿವರ ಸಲ್ಲಿಸಿದಲ್ಲಿ ಅನುಮೋದನೆ ನೀಡಲಾಗುವುದು ಎಂದು ತಿಳಿಸಿದರು.
2015-16ರಲ್ಲಿ ಪ್ರಾರಂಭಗೊಂಡ ಕಾಮಗಾರಿಗಳು ಇಲ್ಲಿಯವರೆಗೆ ಪೂರ್ಣಗೊಂಡಿಲ್ಲ. ಇದಕ್ಕೆ ಸಂಬಂಧಿಸಿದ ಕಾರ್ಯನಿರ್ವಾಹಕ ಇಂಜಿನಿಯರ್‌ನ್ನು ನೇರವಾಗಿ ಹೊಣೆಗಾರರನ್ನಾಗಿಸಿ ಅಸಮರ್ಪಕ ಸೇವೆ ಎಂದು ಪರಿಗಣಿಸಲಾಗುವುದು. ಪೂರ್ಣಗೊಳ್ಳದ ಕಾಮಗಾರಿಯನ್ನು ಕೈಬಿಡಲಾಗುತ್ತಿದೆ ಎಂದು ಎಲ್ಲ ಜನಪ್ರತಿನಿಧಿಗಳಿಗೆ, ಮೇಲಾಧಿಕಾರಿಗಳಿಗೆ ತಿಳಿಸಲಾಗುವುದು. ಈ ವರ್ಷದ ಮಾರ್ಚ್ ಅಂತ್ಯದೊಳಗಾಗಿ ಇಂತಹ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಏಪ್ರಿಲ್ ತಿಂಗಳಿನಿಂದ ಕಾಮಗಾರಿಗಳಿಗೆ ಅನುದಾನ ನೀಡಲಾಗುವುದಿಲ್ಲ ಎಂದು ಎಚ್ಚರಿಸಿದರು.
ಸೇಡಂ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರರು ಕಾಮಗಾರಿಗಳ ಅಂಕಿ-ಅಂಶಗಳನ್ನು ಸಭೆಗೆ ಸರಿಯಾಗಿ ನೀಡಿಲ್ಲ, ಮುಖ್ಯ ಇಂಜಿನಿಯರ್‌ಗಳು ಸೇಡಂ ಕಾಮಗಾರಿಗಳ ಪ್ರಗತಿ ವರದಿ ಪರಿಶೀಲಿಸಬೇಕು ಎಂದರು.
ಹೈ.ಕ.ಪ್ರ.ಅ. ಮಂಡಳಿ ಜಂಟಿ ನಿರ್ದೇಶಕ ಬಸವರಾಜ, ಕಲಬುರಗಿ, ಬೀದರ, ಯಾದಗಿರಿ, ರಾಯಚೂರ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಲೋಕೋಪಯೋಗಿ, ಪಂಚಾಯತ್‌ರಾಜ್ ಇಂಜಿನಿಯರಿಂಗ್, ಕೆ.ಆರ್.ಐ.ಡಿ.ಎಲ್., ಗ್ರಾಮೀಣ ಕುಡಿಯುವ ನೀರು ಇಲಾಖೆಗಳ ಅಧಿಕಾರಿಗಳು ಹಾಗೂ ಇನ್ನಿತರ ಅನುಷ್ಠಾನ ಸಂಸ್ಥೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.