ಕಲಬುರಗಿ: ಜೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಪಂನಿಂದ ನಿಗಮಕ್ಕೆ ಬರಬೇಕಾಗಿರುವ ಬೀದಿ ದೀಪ, ಕುಡಿಯುವ ನೀರು ಸರಬರಾಜು ನಿರ್ವಹಣೆ ಬಾಕಿ ವಿದ್ಯುತ್ ಕರ ಪಾವತಿಯಾಗುವಂತೆ ಕಂದಾಯ ವಸೂಲಾತಿ ಕಾರ್ಯ ಚುರುಕುಗೊಳಿಸುವಂತೆ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಾ| ಆರ್. ರಾಗಪ್ರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜೆಸ್ಕಾಂ ಕಚೇರಿಯಲ್ಲಿ ನಿಗಮ ವ್ಯಾಪ್ತಿಯ ಎಲ್ಲ ಜಿಲ್ಲೆಯ ಅಧಿಕಾರಿಗಳೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ವಿದ್ಯುತ್ ಯೋಜನೆಗಳ ಕಾಮಗಾರಿ ಹಾಗೂ ಕಂದಾಯ ವಸೂಲಾತಿ ಕುರಿತಂತೆ ಕಲಬುರಗಿ, ಬೀದರ, ಯಾದಗಿರಿ, ರಾಯಚೂರು, ಬಳ್ಳಾರಿ ಮತ್ತು
ಕೊಪ್ಪಳ ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ವಿದ್ಯುತ್ ಬೇಬಾಕಿ ಪಾವತಿಯಾಗುವಂತೆ ಆಯಾ ವಿಭಾಗದ ಕಾರ್ಯನಿವಾಹಕ ಅಭಿಯಂತರರು ಹೆಚ್ಚಿನ ಮುತುವರ್ಜಿ ವಹಿಸುವ ಮೂಲಕ ನಿಗಮದ ಆರ್ಥಿಕ ಸ್ಥಿತಿ ಸುಧಾರಣೆಗೆ ಪ್ರಯತ್ನಿಸಬೇಕು ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ನಿರಂತರ ವಿದ್ಯುತ್ ಪೂರೈಕೆ ಕಲ್ಪಿಸುವ ದೀನ್ ದಯಾಳ್ ಉಪಾದ್ಯಾಯ ಗ್ರಾಮೀಣ ಜ್ಯೋತಿ ಯೋಜನೆ ಹಾಗೂ ಸಮಗ್ರ ಇಂಧನ ಅಭಿವೃದ್ಧಿ ಯೋಜನೆ ಪ್ರಗತಿ ಪರಿಶೀಲನೆ ವೇಳೆಯಲ್ಲಿ ಬಹುತೇಕ ಜಿಲ್ಲೆಗಳಲ್ಲಿ 11.ಕೆವಿ ರಿಕಂಡಕ್ಟಿಂಗ್ ಮತ್ತು 11.ಕೆವಿ ಲೈನ್(ರ್ಯಾಬಿಟ್) ವಿದ್ಯುತ್ ಲೈನ್ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ನಿಗ ದಿತ ಅವಧಿಯಲ್ಲಿ ವಿದ್ಯುತ್ ಕಾಮಗಾರಿ ಮುಗಿಸಬೇಕು. ಇದಕ್ಕಾಗಿ ಹೆಚ್ಚಿನ ಕಾರ್ಮಿಕರನ್ನು ನಿಯೋಜಿಸಿ ಫೆಬ್ರವರಿ ಅಂತ್ಯದೊಳಗೆ 100-200 ಕಿಮೀ ವರೆಗೆ ವಿದ್ಯುತ್ ಲೈನ್ ಅಳವಡಿಸುವ ಕಾಮಗಾರಿಯಲ್ಲಿ ಪ್ರಗತಿ ಸಾಧಿಸಬೇಕು. ಆರ್ಥಿಕ ವರ್ಷಾಂತ್ಯಕ್ಕೆ ಎಲ್ಲ ಕಾಮಗಾರಿಗಳು ಪೂರ್ಣಗೊಳಿಸುವ ಮೂಲಕ ಯಾವುದೇ ಹಣ ಲ್ಯಾಪ್ಸ್ ಆಗದಂತೆ ನೋಡಿಕೊಳ್ಳಿ ಎಂದು ಸೂಚಿಸಿದರು.
ಜಿಲ್ಲೆಗಳಲ್ಲಿ ವಿದ್ಯುತ್ ಲೈನ್ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಯಾವುದೇ ವಿಸ್ತರಣಾ ಕಾಮಗಾರಿ ಅಥವಾ ಹೆಚ್ಚುವರಿ ಕಾಮಗಾರಿ ಕೈಗೊಳ್ಳಬೇಕಾದಲ್ಲಿ ನಿಗಮಕ್ಕೆ ಮಾಹಿತಿ ಸಲ್ಲಿಸಿ ಅನುಮೋದನೆ ಪಡೆಯಬೇಕು. ಎನ್‌ಆರ್ ಡಿಡಬ್ಲೂಎಸ್ ಯೋಜನೆಯಡಿ ಕೈಗೊಂಡ ಮೂಲಸೌಕರ್ಯ ಕಾಮಗಾರಿಗಳ ಬಿಲ್ ಪಾವತಿಗೆ ಬಾಕಿಯಿದ್ದಲ್ಲಿ ನಿಗಮಕ್ಕೆ ಮಾಹಿತಿ ಸಲ್ಲಿಸಿ ಎಂದು ಹೇಳಿದರು.
ನಿಗಮದ ತಾಂತ್ರಿಕ ನಿರ್ದೇಶಕ ಅನಿಲ ಕುಮಾರ ಬಬಲೇಶ್ವರ, ಮುಖ್ಯ ಆರ್ಥಿಕ ಅಧಿಕಾರಿ ಅಬ್ದುಲ್ ವಾಜೀದ್ ಸೇರಿದಂತೆ ಜೆಸ್ಕಾಂನ ಎಲ್ಲ ಜಿಲ್ಲೆಗಳ ಅಧೀಕ್ಷಕ ಇಂಜಿನಿಯರರು(ವಿ), ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಹಾಗೂ ಇತರೆ ಅಧಿಕಾರಿಗಳು ಸಭೆಯಲ್ಲಿದ್ದರು.