ಬಾಗಲಕೋಟೆ: ಕೋವಿಡ್ ನಿಯಂತ್ರಣಕ್ಕಾಗಿ ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀಕ್ಷೆ ಮುಂದೂಡಲಾಗಿತ್ತು. ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ಕುರಿತು ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳಲಿದ್ದು, ಪರೀಕ್ಷೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಡಿಸಿಎಂ ಗೋವಿಂದ ಕಾರಜೋಳ ನಿರ್ದೇಶನ ನೀಡಿದರು.
ಜಿಲ್ಲಾಡಳಿತ ಭವನದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ ಹಾಗೂ ಪಿಯು ಒಂದು ವಿಷಯದ ಪರೀಕ್ಷೆ ನಡೆಸಬೇಕಿದೆ. ಕೋವಿಡ್ ಭೀತಿಯಿಂದ ಪರೀಕ್ಷೆ ಮುಂದೂಡಲಾಗಿದೆ. ಈ ಕುರಿತು ಸರ್ಕಾರ ಅಗತ್ಯ ತೀರ್ಮಾನ ಕೈಗೊಂಡ ತಕ್ಷಣ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, 30,829 ಜನ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪ್ರತಿ ಕೊಠಡಿಗೆ 20 ಜನ ವಿದ್ಯಾರ್ಥಿಗಳಂತೆ ಒಟ್ಟು 1550 ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ದ್ವಿತೀಯ ಪಿಯು ಇಂಗ್ಲಿಷ್ ವಿಷಯ ಮಾತ್ರ ಬಾಕಿ ಉಳಿದಿದ್ದು, ಆ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 23,185 ವಿದ್ಯಾರ್ಥಿಗಳು ಇಂಗ್ಲಿಷ್ ವಿಷಯ ಪರೀಕ್ಷೆ ಬರೆಯಲು 37 ಪರೀಕ್ಷಾ ಕೇಂದ್ರಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಬಸ್ ನಿಲ್ದಾಣಕ್ಕೆ ಭೇಟಿ: ಸಭೆಯ ಬಳಿಕ ನವನಗರದ ನೂತನ ಬಸ್ ನಿಲ್ದಾಣದಲ್ಲಿ ತೆರೆಯಲಾದ ತಾಲೂಕುವಾರು ಕೌಂಟರ್‌ಗಳಿಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತೆರಳಿ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸುವವರ ಮಾಹಿತಿಯನ್ನು ಅವರ ಆರೋಗ್ಯ ತಪಾಸಣೆ ಮಾಡುತ್ತಿರುವ ಕುರಿತು ಮಾಹಿತಿ ಪಡೆದರು. ಅಲ್ಲದೇ ಸೋಂಕು ಹೆಚ್ಚಿಗೆ ಕಾಣಿಸಿಕೊಂಡ ಬೇರೆ ರಾಜ್ಯಗಳಿಂದ ಆಗಮಿಸುವವರನ್ನು ಇನ್ಸ್ಟಿಟ್ಯೂಶನ್ ಕ್ವಾರಂಟೈನ್ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದರು. ಮಹಾರಾಷ್ಟ್ರದಿಂದ 1000 ಜನ ಜಿಲ್ಲೆಗೆ ಬರುವವರ ಪೈಕಿ ಈಗಾಗಲೇ 571 ಜನ ಜಿಲ್ಲೆಗೆ ಆಗಮಿಸಿದ್ದು, ಇನ್ನು 429 ಜನ ಮಾತ್ರ ಬರಲಿದ್ದಾರೆ. ಅವರೆಲ್ಲರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದರು.
ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ| ರಾಜೇಂದ್ರ, ಸಿಇಒ ಗಂಗೂಬಾಯಿ ಮಾನಕರ, ಎಸ್ಪಿ ಲೋಕೇಶ ಜಗಲಾಸರ, ಡಿಎಚ್‌ಒ ಡಾ|ಅನಂತ ದೇಸಾಯಿ, ಡಾ|ಪ್ರಕಾಶ ಬಿರಾದಾರ, ಶ್ರೀಶೈಲ ಕಂಕಣವಾಡಿ, ಎಸ್.ಬಿ. ಕೊಂಗವಾಡ, ಸಂಜೀವ ಸತ್ಯರಡ್ಡಿ ಉಪಸ್ಥಿತರಿದ್ದರು.