ಹುಬ್ಬಳ್ಳಿ: ಲಾಕ್‌ಡೌನ್ ಸಂದರ್ಭದಲ್ಲೂ ಸರಕಾರ ಹಲವು ನಿಯಮಗಳನ್ನು ಸಡಿಲಿಸಿ ನರೇಗಾದಡಿ ಕೆಲಸ ಆರಂಭಿಸಲು ಅನುಮತಿ ನೀಡಿದ್ದು, ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಆರಂಭಿಸುವಂತೆ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಮಿನಿವಿಧಾನಸೌಧದ ತಾಪಂ ಸಭಾಂಗಣದಲ್ಲಿ ಕೊವಿಡ್-19 ರ ನಿಯಂತ್ರಣ ಕಾರ್ಯಗಳು, ಮುನ್ನೆಚ್ಚರಿಕೆ ಕ್ರಮಗಳ ಅನುಷ್ಠಾನ ಮತ್ತು ಕೈಗೊಳ್ಳಬೇಕಿರುವ ಕಾರ್ಯಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮಗಳಲ್ಲಿ ನರೇಗಾದಡಿ ಉದ್ಯೋಗ ಸೌಲಭ್ಯ ಕಲ್ಪಿಸಲು ಕೋರಿದ ಪ್ರತಿಯೊಬ್ಬರಿಗೂ ಕೆಲಸ ನೀಡಿ. ಹೊಸದಾಗಿ ಕೆಲಸಕ್ಕಾಗಿ ಅರ್ಜಿ ನೀಡಿದವರಿಗೆ 24 ಗಂಟೆಗಳಲ್ಲಿ ಜಾಬ್ ಕಾರ್ಡ್ ಒದಗಿಸಿ ಕೆಲಸ ನೀಡಬೇಕು. ನಿಯಮಾನುಸಾರ ಕೆಲಸದ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಒಂದು ಸ್ಥಳದಲ್ಲಿ 5ಕ್ಕಿಂತ ಹೆಚ್ಚು ಕೆಲಸಗಾರರು ಇರಬಾರದು. ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ಬೇರೆ ಊರಿನಿಂದ ಬಂದವರಿಗೂ ನರೇಗಾದಡಿ ಕೆಲಸ ಕಲ್ಪಿಸಲು ಅವಕಾಶ ನೀಡಬೇಕು ಎಂದರು.
ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ಕಲ್ಪಿಸಬೇಕು. ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಗ್ರಾಮಗಳಿಗೆ ಆಗಮಿಸುವವರ ಮೇಲೆ ನಿಗಾ ಇಡಬೇಕು. ಅನಗತ್ಯವಾಗಿ ಪಾಸ್‌ಗಳನ್ನು ವಿತರಿಸಬಾರದು. ವ್ಯವಸಾಯಕ್ಕೆ ಬರುವರಿಗೆ ಪಾಸ್ ನೀಡುವ ಮುನ್ನಾ ಅವರು ಕಂಟೇನ್ಮೆಂಟ್ ಸ್ಥಳದಲ್ಲಿ ವಾಸುತ್ತಿಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಪ್ರತಿ ಹಳ್ಳಿಗಳಲ್ಲೂ ಜನಜಾಗೃತಿ ಸಭೆ ಆಯೋಜಿಸಿ ಕೊರೊನಾ ಸೋಂಕಿನ ಕುರಿತು ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 5985 ಆಹಾರ ಧಾನ್ಯ ಕಿಟ್ ಗಳನ್ನು ನೀಡಲಾಗಿದೆ. ಬಿಸಿಯೂಟದ ಆಹಾರ ಧಾನ್ಯಗಳನ್ನು ಸಹ ಮಕ್ಕಳ ಮನೆಗಳಿಗೆ ಮುಟ್ಟಿಸುವ ಕೆಲಸ ಆಗಿದೆ. 25,983 ವಿದ್ಯಾರ್ಥಿಗಳಿಗೆ ಪಡಿತರ ನೀಡಲಾಗಿದೆ. ಬರುವ ಮುಂಗಾರು ಹಂಗಾಮಿಗೆ ಬೀಜ, ರಸಗೊಬ್ಬರ ದಾಸ್ತಾನು ಇಡಲಾಗಿದೆ ಎಂದರು.
ನವಲಗುಂದ ಮತಕ್ಷೇತ್ರ ವ್ಯಾಪ್ತಿಯ ಹುಬ್ಬಳ್ಳಿ ಗ್ರಾಮೀಣ ತಾಲೂಕಿನ 446 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಇದರಲ್ಲಿ ಯಾರೂ ವಿದೇಶದಿಂದ ಹಾಗೂ ದೆಹಲಿ ತಬ್ಲಿಘಿನಲ್ಲಿ ಭಾಗವಹಿಸಿಲ್ಲ. ನವಲಗುಂದ ತಾಲೂಕಿನಲ್ಲಿ 24 ಜನರು ತಬ್ಲಿಘಿ ಜಮಾತ್‌ನಲ್ಲಿ ಭಾಗವಹಿಸಿದ್ದರು. ವಿದೇಶ, ಹೊರ ರಾಜ್ಯ ಹಾಗೂ ದೆಹಲಿಯಿಂದ ಬಂದವರಿಗೆ ಚಿಕಿತ್ಸೆ ನೀಡಲಾಗಿದೆ ಎಂದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಂದೂಡಲಾಗಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಆಗಬೇಕೆಂದರು.
ಕೋಳಿವಾಡದ ಸರಕಾರಿ ಪ್ರೌಢಶಾಲೆಯ ಯಶೋಧಾ ಕಳಸದ ಎಂಬುವರಿಗೆ ಕರೆ ಮಾಡಿ ಪರೀಕ್ಷೆ ತಯಾರಿ ನಡೆಸುವಂತೆ ಆತ್ಮಸ್ಥೈರ್ಯ ತುಂಬಿಸಿದರು. ತಾಪಂ ಅಧ್ಯಕ್ಷೆ ಚೆನ್ನಮ್ಮ ಗೊರ್ಲ, ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರರಾದ ಪ್ರಕಾಶ ನಾಶಿ, ತಾಪಂ ಪ್ರಭಾರಿ ಇಒ ಗಂಗಾಧರ ಕಂದಕೂರ, ಬಿಇಒ ಅಶೋಕಕುಮಾರ ಸಿಂದಗಿ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಶ್ರೀಧರ ಪತ್ತಾರ, ಗ್ರಾಮೀಣ ವೃತ್ತ ನಿರೀಕ್ಷಕ ಜಾಕ್ಸನ್ ಡಿಸೋಜಾ ಇನ್ನಿತರರಿದ್ದರು.