ಚಿಕ್ಕೋಡಿ: ಚಿಕ್ಕೋಡಿ ವಿಭಾಗದಲ್ಲಿ 2019-20 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಈ ವರೆಗೆ ವಾಡಿಕೆ ಮಳೆಗಿಂತ ಶೇ.56.4 ರಷ್ಟು ಕಡಿಮೆಯಾಗಿದ್ದು, ರೈತರು ಮುಂಗಾರು ಹಂಗಾಮಿನ ಮಳೆ ನೋಡಿಕೊಂಡು ಬಿತ್ತನೆ ಮಾಡಬೇಕೆಂದು ಉಪ ಕೃಷಿ ನಿರ್ದೇಶಕ ಎಚ್.ಡಿ.ಕೋಳೆಕರ ಹೇಳಿದರು.
ನಗರದ ಉಪ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಚಿಕ್ಕೋಡಿ ವಿಭಾಗದ ಚಿಕ್ಕೋಡಿ, ಅಥಣಿ, ರಾಯಬಾಗ, ಹುಕ್ಕೇರಿ ಹಾಗೂ ಗೋಕಾಕ ತಾಲೂಕು ವ್ಯಾಪ್ತಿಯನ್ನು ಒಳಗೊಂಡಂತೆ ಕ್ಷೇತ್ರ ಬಿತ್ತನೆ ಗುರಿ 4,14,479 ಹೆಕ್ಟೇರ್‌ದಷ್ಟು ಇದ್ದು, ಅದರಲ್ಲಿ 1,82,303 ಹೆಕ್ಟೇರ್ ಬಿತ್ತನೆಯಾಗಿದೆ. ಕಬ್ಬು ಹೊರತುಪಡಿಸಿದರೆ ಕೇವಲ 16,796 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದ್ದು, ಎಲ್ಲ ಮುಖ್ಯ ಬೆಳೆಗಳ ಬೀಜಗಳನ್ನು ಜಿಲ್ಲಾದ್ಯಂತ 48,895 ಮೆ.ಟನ್‌ನಷ್ಟು ದಾಸ್ತಾನು ಮಾಡಲಾಗಿದೆ. ಅದರಲ್ಲಿ ಈಗಾಗಲೇ 20,815 ಮೆ.ಟನ್ ಬೀಜಗಳನ್ನು 122 ಕೇಂದ್ರಗಳ ಮೂಲಕ ವಿತರಣೆ ಮಾಡಲಾಗಿದೆ ಹಾಗೂ ಉಳಿದ 28,080 ಮೆ ಟನ್ ದಾಸ್ತಾನು ಬೀಜ ವಿವಿಧ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದೆ.
ಈ ಎಲ್ಲ ಬೆಳೆಗಳಿಗೆ ಬೇಕಾದ ರಸಗೊಬ್ಬರ ಜಿಲ್ಲಾದ್ಯಂತ 1,36,090 ಮೆ ಟನ್ ದಾಸ್ತಾನು ಮಾಡಲಾಗಿದ್ದು, ಅದರಲ್ಲಿ ಈಗಾಗಲೇ 34,000 ಮೆ ಟನ್ ವಿತರಣೆಯಾಗಿದೆ. ಉಳಿದ 1,02,090 ಮೆ ಟನ್ ರಸಗೊಬ್ಬರ ಪಿಕೆಪಿಎಸ್ ಹಾಗೂ ಖಾಸಗಿ ಮಾರಾಟ ಕೇಂದ್ರಗಳಲ್ಲಿ ಲಭ್ಯವಿದೆ ಎಂದರು.
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಜಾರಿಗೊಳಿಸಿದ್ದು. ಯೋಜನೆಯಡಿ ರೈತರ ನೋಂದಣೆ ಕಾರ್ಯ ಪ್ರಗತಿಯಲ್ಲಿದೆ. ಬೆಳೆ ಸಾಲ ಪಡೆಯುವ ಹಾಗೂ ಪಡೆಯದ ರೈತರು ತಮ್ಮ ವ್ಯಾಪ್ತಿಯಲ್ಲಿ ಬರುವ ಬ್ಯಾಂಕ್-ಸಹಕಾರಿ ಸಂಘ ಶಾಖೆಗಳು ಜೊತೆಗೆ ಸಾಮಾನ್ಯ ಸೇವಾ ಕೇಂದ್ರಗಳಿಗೂ ಸಹ ಭೇಟಿ ನೀಡಿ ತಮ್ಮ ತಾಲೂಕಿಗೆ ಅಧಿಸೂಚಿತ ಬೆಳೆಗಳಲ್ಲಿ ನಿರ್ದಿಷ್ಟ ಬೆಳೆಗಳಿಗೆ ಸೂಚಿಸಿದ ವಿಮೆ ಕಂತನ್ನು ಪಾವತಿಸಿ ಬೆಳೆ ವಿಮೆ ಯೋಜನೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಹಾಗೂ ಈ ಯೋಜನೆಯ ಸಂಪೂರ್ಣ ಲಾಭ ಪಡೆದುಕೊಳ್ಳಲು ರೈತರಿಗೆ ಅವಕಾಶ ಇದೆ.
2019-20 ನೇ ಸಾಲಿನಿಂದ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಪದ್ಧತಿಯ ಯೋಜನೆ ಅನುಷ್ಠಾನಗೊಳಿಸಲಾಗಿತ್ತಿದೆ. ಇದು ರಾಸಾಯನಿಕ ಕೃಷಿ ಹಾಗೂ ಸಾವಯವ ಕೃಷಿಗಿಂತ ಭಿನ್ನವಾಗಿದ್ದು ಅಲ್ಪ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ ಬೀಜಾಮೃತ, ಜೀವಾಮೃತ, ಬೆಳೆ ಹೊದಿಕೆಗಳು ಹಾಗೂ ವಾಫಾಸ-ಮಣ್ಣಿನ ಹ್ಯೂಮಸ್ ಹೆಚ್ಚಿಸುವ ತತ್ವಗಳನ್ನು ಹೊಂದಿರುತ್ತದೆ. ಈ ಪದ್ಧತಿ ಅನುಸರಿಸುವ ರೈತರ ಜಮೀನಿನ ಮಣ್ಣು ಮತ್ತು ನೀರು ಪರೀಕ್ಷೆ ಮಾಡಿಸಿ, ರೈತರಿಗೆ ತರಬೇತಿ ನೀಡಲಾಗುವುದು ಹಾಗೂ ಈ ಯೋಜನೆಯ ಎಲ್ಲ ಘಟಕಗಳಿಗೆ ಇಲಾಖೆಯಿಂದ ಸಹಾಯ ಧನ ನೀಡಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಮಂಜೂನಾಥ ಜನಮಟ್ಟಿ ಉಪಸ್ಥಿತರಿದ್ದರು.