ಬೆಂಗಳೂರು: ಸಿವಿಲ್ ವ್ಯಾಜ್ಯಕ್ಕೆ ಕ್ರಿಮಿನಲ್ ಪ್ರಕರಣ ದಾಖಲಿಸಿರುವ ಪೊಲೀಸರ ಕ್ರಮವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್, “ಈ ರೀತಿ ಏಕೆ ಮಾಡಿದ್ದೀರಿ’ ಎಂದು ಲಿಖಿತ ವಿವರಣೆ ನೀಡುವಂತೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಸೋಮವಾರ ತಾಕೀತು ಮಾಡಿತು.
ಕಂಪನಿ ಷೇರುಗಳ ಹಂಚಿಕೆ ವಿಚಾರದ ಗೊಂದಲ ಸಂಬಂಧ ತಮ್ಮ ವಿರುದ್ಧ ಬಸವನಗುಡಿ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಡಿ.ವೆಂಕಟೇಶ್ ಗುಪ್ತಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪೊಲೀಸರ ಕಾರ್ಯವೈಖರಿ, ಅನಗತ್ಯ ಹಸ್ತಕ್ಷೇಪಕ್ಕೆ ಅಸಮಧಾನ ವ್ಯಕ್ತಪಡಿಸಿತು. ವಿಚಾರಣೆ ವೇಳೆ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಡಾ. ಶರಣಪ್ಪ ಖುದ್ದು ಹಾಜರಿದ್ದರು.
ತಾವು ದೂರು ದಾಖಲಿಸಿಕೊಂಡಿರುವುದನ್ನು ಪೊಲೀಸ್ ಅಧಿಕಾರಿಗಳು ಸಮರ್ಥಿಸಿಕೊಳ್ಳಲು ಮುಂದಾದರು. ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಪೀಠ, ಮೇಲ್ನೋಟಕ್ಕೆ ಪ್ರಕರಣ ಸಂಪೂರ್ಣವಾಗಿ ಸಿವಿಲ್ ವ್ಯಾಜ್ಯದಂತೆ ಕಾಣುತ್ತಿದೆ. ಇಂತಹ ವ್ಯಾಜ್ಯದಲ್ಲಿ ಪೊಲೀಸರ ಮಧ್ಯಪ್ರವೇಶ ಸರಿಯಲ್ಲ.
ಅದರಲ್ಲೂ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದು ಹೇಗೆ ಎಂದೇ ಗೊತ್ತಾಗುತ್ತಿಲ್ಲ ಎಂದು ಹೇಳಿತು. ಇದಕ್ಕೆ ವಿವರಣೆ ನೀಡಿದ ಸರ್ಕಾರಿ ಅಭಿಯೋಜಕರು, ಪ್ರಕರಣದಲ್ಲಿ ವಂಚನೆ ಹಾಗೂ ಬೆದರಿಕೆ ಅಂಶಗಳಿವೆ. ಹಾಗಾಗಿ ಇಷ್ಟೊಂದು ವಿವರವಾದ ದೂರು ನೀಡಲಾಗಿದೆ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.
ಇದಕ್ಕೆ ಅಸಮಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಕೇವಲ ಬೆದರಿಕೆ ಪ್ರಕರಣ ಆಗಿದ್ದರೆ ಯಾರಾದರೂ 30 ಪುಟಗಳ ದೂರು ಕೊಡುತ್ತಾರಾ ಎಂದು ಪ್ರಶ್ನಿಸಿತು. ಕಾನೂನಿನಲ್ಲಿ ದೂರು ದಾಖಲಿಸಲು ಅವಕಾಶವಿದೆ ಎಂದು ಸರ್ಕಾರಿ ಅಭಿಯೋಜಕರು ವಾದಿಸಿದರು. ಹಾಗಾದರೆ, ನೀವು ಮಾಡಿದ್ದ ಸರಿ ಎಂದಾದರೆ, ಅಫಿಡವಿಟ್ ಮೂಲಕ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಎಂದು ಹೇಳಿ ವಿಚಾರಣೆಯನ್ನು ಅ.5ಕ್ಕೆ ಮುಂದೂಡಿತು.