Advertisement

ಬಿಎಸ್‌ವೈ ಪಟ್ಟು ಸಮಿತಿ ಬದಲು

08:03 AM Oct 11, 2017 | Team Udayavani |

ಬೆಂಗಳೂರು: ಎರಡು ವಾರದ ಹಿಂದೆಯಷ್ಟೇ ಬಿಡುಗಡೆಯಾಗಿದ್ದ ಬಿಜೆಪಿ ವಿವಿಧ ಸಮಿತಿಗಳು ಮಂಗಳವಾರ ದಿಢೀರ್‌ ಬದಲಾಗಿದ್ದು, ಎಲ್ಲಾ ಸಮಿತಿಗಳ ಅಧ್ಯಕ್ಷ ಸ್ಥಾನವನ್ನು ತಮ್ಮಲ್ಲಿಯೇ ಇರಿಸಿಕೊಂಡಿರುವ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೊಸ ಪಟ್ಟಿ ಸಿದ್ಧಪಡಿಸಿದ್ದಾರೆ. ಪಟ್ಟಿಯಲ್ಲಿ ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ, ಪ್ರಹ್ಲಾದ ಜೋಶಿ ಅವರು ಸ್ಥಾನ ಪಡೆದಿದ್ದರೂ ಯಾವುದೇ ಹೊಣೆಯನ್ನು ನೀಡಲಾಗಿಲ್ಲ.

Advertisement

ಇತ್ತೀಚೆಗೆ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಜಂಟಿ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅಂತಿಮಗೊಳಿಸಿದ್ದರು ಎನ್ನಲಾದ ಬೂತ್‌ ಸಮಿತಿ, ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಪಟ್ಟಿ ಬಹಿರಂಗವಾಗಿತ್ತು. ಆದರೆ, ಈ ಪಟ್ಟಿಯನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಗಮನಕ್ಕೆ ತಾರದೆ ಅಂತಿಮ ಗೊಳಿಸಲಾಗಿದೆ ಮತ್ತು ಬೂತ್‌ ಸಮಿತಿಯಲ್ಲಿ ಸಂತೋಷ್‌ ಕಡೆಯವರೇ ತುಂಬಿಕೊಂಡಿದ್ದಾರೆ ಎಂಬ ಕಾರಣಕ್ಕೆ ಪಕ್ಷದಲ್ಲಿ ಅಸಮಾಧಾನ ಹೊಗೆಯಾಡಿತ್ತು. ಈ ಹಿಂದೆ ಬಹಿರಂಗವಾದ 3 ಸಮಿತಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿರಲಿಲ್ಲ. ಬೂತ್‌ ಸಮಿತಿಗೆ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ವಿ.ಅರುಣ್‌ಕುಮಾರ್‌, ಸಾಂಪ್ರ ದಾಯಿಕ
ಪ್ರಚಾರ ಸಮಿತಿಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮತ್ತು ಅಸಾಂಪ್ರದಾಯಿಕ ಪ್ರಚಾರ ಸಮಿತಿಗೆ ಸಂಸದ ಪ್ರಹ್ಲಾದ ಜೋಶಿಗೆ ನೇತೃತ್ವ ನೀಡಲಾಗಿತ್ತು. ಆದರೆ, ಇದೀಗ ಸಮಿತಿಗಳ ಅಧ್ಯಕ್ಷ ಸ್ಥಾನವನ್ನು ಯಡಿಯೂರಪ್ಪ ಅವರೇ ಉಳಿಸಿ ಕೊಂಡಿದ್ದಾರೆ. ಬೂತ್‌ ಸಮಿತಿಯಲ್ಲಿ ಮಹತ್ವದ ಬದಲಾವಣೆಯಾಗಿದ್ದರೆ, ಇತರೆ 2 ಸಮಿತಿ ಗಳಲ್ಲಿ ತಿದ್ದುಪಡಿ ಮಾಡಿಲ್ಲ.

ಬೆಂಗಳೂರಿನಲ್ಲಿ ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಪ್ರಚಾರ ಸಮಿತಿ ಸಭೆ ನಡೆದಿತ್ತಾದರೂ ಸಭೆಯಲ್ಲಿ ಸದಾನಂದ ಗೌಡ ಮತ್ತು ಪ್ರಹ್ಲಾದ ಜೋಶಿ ಪಾಲ್ಗೊಂಡಿರಲಿಲ್ಲ. ಹೀಗಾಗಿ ಪಕ್ಷದಲ್ಲಿ ಅಸಮಾಧಾನ ಮುಂದುವರಿದಿರುವುದು ಸಾಬೀತಾಗಿತ್ತು. ಅಲ್ಲದೆ, ಈ ವಿಚಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ವರೆಗೂ ತಲುಪಿದ್ದು, ಈ ಕಾರಣಕ್ಕಾಗಿಯೇ ಅವರು ಅ. 4ರಂದು ಮಂಗಳೂರಿನಲ್ಲಿ ಕರೆದಿದ್ದ ಪಕ್ಷದ ಪ್ರಮುಖರ ಸಭೆಗಳನ್ನು ರದ್ದುಗೊಳಿಸಿದ್ದರು.

ಏನೇನು ಬದಲಾವಣೆ?: 38 ಮಂದಿಯ ಬೂತ್‌ ಸಮಿತಿ ಸದಸ್ಯರ ಸಂಖ್ಯೆಯನ್ನು 36ಕ್ಕೆ ಇಳಿಸಲಾಗಿದೆ. ಹಿಂದಿನ ಪಟ್ಟಿಯಲ್ಲಿ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ವಿ.ಅರುಣ್‌ಕುಮಾರ್‌ ನೇತೃತ್ವ ವಹಿಸಿದ್ದರೆ, ಈ ಹೊಸ ಪಟ್ಟಿಯಲ್ಲಿ ಬಿಎಸ್‌ವೈ ಅವರೇ ಅಧ್ಯಕ್ಷ. ಜತೆಗೆ ಆ ಪಟ್ಟಿಯಲಿದ್ದ ಗಿರೀಶ್‌ ಪಟೇಲ್‌, ಎಂ.ಬಿ. ನಂದೀಶ್‌, ಕೇಶವಪ್ರಸಾದ್‌ರನ್ನು ದೂರ ಇಡಲಾಗಿದೆ.

ಸಾಂಪ್ರದಾಯಿಕ ಪ್ರಚಾರ ಸಮಿತಿ ಸದಸ್ಯರ ಸಂಖ್ಯೆಯನ್ನು 28ರಿಂದ 34ಕ್ಕೆ ಹೆಚ್ಚಿಸಲಾಗಿದೆ. ಸಚಿವರಾದ ಅನಂತ ಕುಮಾರ್‌, ರಮೇಶ್‌ ಜಿಗಜಿಣಗಿ, ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್‌, ತಿಂಗಳೆ ವಿಕ್ರಮಾರ್ಜುನ ಹೆಗಡೆ, ನಿವೃತ್ತ ಐಎಎಸ್‌ ಅಧಿಕಾರಿ ಡಾ.ಸಿ.ಸೋಮಶೇಖರ್‌, ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಮತ್ತು ಡಿ.ಎಸ್‌.ವೀರಯ್ಯ ಹೆಸರು ಸೇರಿಸಲಾಗಿದೆ. ಈ ಸಮಿತಿ ಯಲ್ಲಿದ್ದ ಸಂಸದ ಪಿ.ಸಿ. ಮೋಹನ್‌ ಮತ್ತು ಬಿ.ಜೆ.ಪುಟ್ಟಸ್ವಾಮಿ ಅವರನ್ನು ಅಸಾಂಪ್ರದಾಯಿಕ ಪ್ರಚಾರ ಸಮಿತಿಗೆ ನೇಮಿಸಲಾಗಿದೆ. ಅಸಾಂಪ್ರದಾಯಿಕ ಪ್ರಚಾರ ಸಮಿತಿಯಲ್ಲಿ ಸದಸ್ಯರ ಸಂಖ್ಯೆಯನ್ನು 31ರಿಂದ 45ಕ್ಕೆ ಹೆಚ್ಚಿಸಲಾಗಿದ್ದು, ಹೊಸದಾಗಿ ಸಾಮಾಜಿಕ
ಜಾಲ ತಾಣದ ರಾಜ್ಯ ಸಹ ಸಂಚಾಲಕ ಸಿದ್ದು ಪುಂಡಿಕಾಳ್‌, ಮಾಹಿತಿ ತಂತ್ರಜ್ಞಾನ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಪ್ರದೀಪ್‌ ಕಾಕಡೆ, ಸುಬ್ಬನರಸಿಂಹ, ಲೆಹರ್‌ ಸಿಂಗ್‌, ಶಾಸಕ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಎಸ್‌.ಪ್ರಕಾಶ್‌, ಚನ್ನಮಲ್ಲಿಕಾರ್ಜುನ್‌, ಮಾಜಿ ಶಾಸಕ ನೆ.ಲ. ನರೇಂದ್ರಬಾಬು, ನಿವೃತ್ತ ಐಎಎಸ್‌ ಅಧಿಕಾರಿ ಮದನ್‌ ಗೋಪಾಲ್‌, ಮಾಜಿ ಸಚಿವ ರಾಜೂಗೌಡ, ಸ್ಲಂಮೋರ್ಚಾ ಅಧ್ಯಕ್ಷ ಜಯಪ್ರಕಾಶ್‌ ಅಂಬಾರ್‌ಕರ್‌ ಮತ್ತು ಜಯರಾಮ್‌ ಅವರನ್ನು ಸೇರಿಸಿಕೊಳ್ಳಲಾಗಿದೆ.

Advertisement

ಯಾರು ಔಟ್‌ ?
ಅರುಣ್‌ಕುಮಾರ್‌, ಗಿರೀಶ್‌ ಪಟೇಲ್‌, ಎಂ.ಬಿ.ನಂದೀಶ್‌ , ಕೇಶವಪ್ರಸಾದ್‌ 

ಯಾರು ಇನ್‌?
ಅನಂತಕುಮಾರ್‌, ರಮೇಶ್‌ ಜಿಗಜಿಣಗಿ, ವಿ.ಶ್ರೀನಿವಾಸ ಪ್ರಸಾದ್‌, ನೆ ಲ ನರೇಂದ್ರ ಬಾಬು, ಡಾ.ಸಿ.ಸೋಮ ಶೇಖರ್‌, ಕಟ್ಟಾ ಸುಬ್ರಮಣ್ಯ ನಾಯ್ಡು ಮತ್ತು ಡಿ.ಎಸ್‌.ವೀರಯ್ಯ

Advertisement

Udayavani is now on Telegram. Click here to join our channel and stay updated with the latest news.

Next