Advertisement

ಕಂಪನಿಯಲ್ಲಿ ಆಳಾಗುವ ಬದಲು…

11:36 AM Jul 25, 2017 | |

“ಸಾಕಾಯ್ತು ಬೆಂಗ್ಳೂರು ಜೀವನ’ ಅಂತ ಎಲ್ಲರೂ ಹೇಳುವವರೇ… ಆದರೆ ಬಿಟ್ಟು ಹೋಗುವ ಧೈರ್ಯ ಮಾಡುವವರು ಕೆಲವೇ ಮಂದಿ. ಬಿಟ್ಟೆನೆಂದರೂ ಬಿಡದೀ ಮಾಯೆ ಎನ್ನುವಂತೆ ಯಾವುದಾದರೂ ನೆಪ ಹೇಳಿ ಕಡೆಯ ತನಕವೂ ಇಲ್ಲಿಯೇ ಉಳಿದು ಬಿಡುವವರೇ ಹೆಚ್ಚು. ಬೆಂಗ್ಳೂರು ಎಂಬ ಮಾಯೆಯನ್ನು ಬಿಟ್ಟು ಬಂದ ಕೆಲವರಲ್ಲಿ ಒಬ್ಬರು ಸುಳ್ಯದ ಅಕ್ಷಯ ರಾಮ. ಬೆಂಗಳೂರಿನ ಕಂಪನಿ ಉದ್ಯೋಗ ಬಿಟ್ಟು, ಪತ್ನಿ ಕೃತ್ತಿಕಾ ಜೊತೆ ಸದ್ಯ ಸುಳ್ಯದ ಬಾಳಿಲ ಗ್ರಾಮದಲ್ಲಿ ಕೃಷಿ ಮಾಡಿಕೊಂಡಿದ್ದಾರೆ. ಹುದ್ದೆ ತೊರೆಯುವ, ಮಹಾನಗರದ ಮೋಹದಿಂದ ಹೊರಬರುವ ಆ ಮನಃಸ್ಥಿತಿ ಹೇಗಿತ್ತೆಂಬುದರು ಕುರಿತು ಈ ಮಾತುಕತೆ ಬೆಳಕು ಚೆಲ್ಲುತ್ತದೆ…

Advertisement

ದಂಪತಿಯ ಆಗಿನ ಆದಾಯ: 65 ಸಾವಿರ ರೂ.
ಈಗಿನ ಗಳಿಕೆ: ಬೆಟ್ಟದಷ್ಟು ಸಂತಸ ಮತ್ತು ಸಂತೃಪ್ತಿ 

ಊರಿನೊಂದಿಗೆ ನಿಮಗಿದ್ದ ನಂಟಿನ ಬಗ್ಗೆ ಹೇಳುತ್ತೀರಾ? 
ನಾನು ಹುಟ್ಟಿ ಬೆಳೆದದ್ದು ಸುಳ್ಯ ತಾಲೂಕಿನ ಬಾಳಿಲ ಗ್ರಾಮದಲ್ಲಿ. ಕೃಷಿ ಕುಟುಂಬವೊಂದರಲ್ಲಿ ಬೆಳೆದ ನಮಗೆ ಕರಾವಳಿಯ ಹಳ್ಳಿಯ ಬದುಕು ಅತ್ಯಂತ ಆಪ್ತವಾಗಿತ್ತು. ಎಳವೆಯಲ್ಲಿ ಪ್ರಾಥಮಿಕ ಶಾಲೆಗೆ ದಿನವೂ ಮೂರ್ನಾಲ್ಕು ಕಿಲೋಮೀಟರ್‌ ನಡೆದು ಗೆಳೆಯರೊಂದಿಗೆ ಆಟವಾಡುತ್ತಾ ಕಲಿತದ್ದು ಇಂದಿಗೂ ಮನದಲ್ಲಿ ಹಸಿರಾಗಿದೆ. ಮಳೆಗಾಲದಲ್ಲಿ ನೀರಿನಲ್ಲಾಡುವ ಮೋಜು, ಬೇಸಿಗೆಯ ರಜಾಕಾಲದ ಆಟಗಳನ್ನು ಮರೆಯಲು ಹೇಗೆ ಸಾಧ್ಯ?

ಈ ಹಿಂದಿನ ನಿಮ್ಮ ಬೆಂಗಳೂರು ಲೈಫು ಹೇಗಿತ್ತು?
ಉನ್ನತ ವ್ಯಾಸಂಗ, ಉದ್ಯೋಗ ನಿಮಿತ್ತ ಬೆಂಗಳೂರೆಂಬ ಮಾಯಾನಗರಿಯನ್ನು ಅರಸಿ ಬರಬೇಕಾಯಿತು. ವೃತ್ತಿಯಲ್ಲಿ ಸಂತೃಪ್ತಿಯಂತೂ ಇರಲಿಲ್ಲ. ಸದಾ ವಾಹನ ಸಾಗರವೇ ಹರಿಯುತ್ತಿರುವ ರಸ್ತೆಗಳು ನಿತ್ಯ 2-3 ಗಂಟೆಗಳನ್ನು ನುಂಗಿ ಬಿಡುತ್ತಿದ್ದವು. ಹೊಗೆ, ಧೂಳುಗಳಲ್ಲಿ ಮಿಂದೇಳುವಾಗ ಏತಕ್ಕಾಗಿ ಈ ಜಂಜಾಟ? ಅನ್ನಿಸುತ್ತಿತ್ತು. ಕೈಗೆ ಉತ್ತಮ ಸಂಬಳವೇನೋ ಬರುತ್ತಿತ್ತು, ಆದರೆ, ಮನಸ್ಸು ಮಾತ್ರ ನೆಮ್ಮದಿಯನ್ನು ಅರಸುತ್ತಿತ್ತು. 

ಬೆಂಗಳೂರು ಬಿಡುವ ತುಡಿತ ಏಕೆ ಮತ್ತು ಹೇಗೆ ಸೃಷ್ಟಿಯಾಯಿತು? ಮನೆಯವರು, ಸ್ನೇಹಿತರು ಏನೆಂದರು?
ಸ್ವಂತಿಕೆಯ ಬದುಕು ಬಾಳಬೇಕೆಂಬ ಹಂಬಲ. ಪೇಟೆಯಲ್ಲಿ ಯಾವುದೋ ಕಂಪನಿಯಲ್ಲಿ ಆಳಾಗಿ ದುಡಿಯುವ ಬದಲು ಸ್ವಂತ ಊರಲ್ಲಿ ಸ್ವತಂತ್ರವಾಗಿ ಬದುಕುವ ಬಯಕೆ ಮೊದಲಿನಿಂದಲೂ ಇತ್ತು. ಅನಿವಾರ್ಯ ಕಾರಣಗಳಿಂದಾಗಿ ಸ್ವಲ್ಪ ಸಮಯ ಬೆಂಗಳೂರಲ್ಲಿ ದುಡಿಯುವಂತಾಯಿತು. ಬೆಂಗಳೂರು ಸಾಕು ಸಾಕೆನ್ನಿಸುವ ಭಾವ ಬಂದಾಗ ಮೊದಲು ಮಾತನಾಡಿದ್ದು ಜೀವನ ಸಾಥಿ ಕೃತ್ತಿಕಾ ಜೊತೆ. ಅವಳಂತೂ ಬೆಂಗಳೂರಿನ ಮೋಹದಲ್ಲಿ ಇದ್ದವಳಲ್ಲ. ಬೆಂಗಳೂರು ತೊರೆಯಲು ಖುಷಿಯಿಂದಲೇ ಒಪ್ಪಿದಳು. ಮನೆಯವರಂತೂ ಮತ್ತಷ್ಟು ಸಂತಸದಿಂದ ಎದುರುಗೊಂಡರು. ಬಂಧುಗಳು, ಸ್ನೇಹಿತರದ್ದು ಮಿಶ್ರ ಪ್ರತಿಕ್ರಿಯೆ. ಕೆಲವರು ಉತ್ತೇಜಿಸಿದರೆ ಕೆಲವರದ್ದು ಶಂಕೆ. ಬೆಂಗಳೂರಿನ ಆದಾಯ, ಒಳ್ಳೆಯ ಜೀವನ ಬಿಟ್ಟು ಹಳ್ಳಿಗೆ ಹೋಗುವ ರಿಸ್ಕ್… ಏಕೆ? ಎಂಬ ಪ್ರಶ್ನೆ ಹಲವರದ್ದು.
 
ಭವಿಷ್ಯದ ಯೋಜನೆಗಳನ್ನು ಸಿದ್ಧಪಡಿಸಿಟ್ಟುಕೊಂಡೇ ಊರಿಗೆ ಮರಳಿದಿರಾ? 
ಊರಿಗೆ ಮರಳಿ ಕೃಷಿಯಲ್ಲಿ ತೊಡಗಿಸಿಕೊಳ್ಳುವುದಷ್ಟೇ ನನ್ನ ಯೋಜನೆಯಾಗಿತ್ತು. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವ ಯೋಜನೆಗಳೂ ಮನದಲ್ಲಿ ಇದ್ದವು. ಕೃಷಿಯೊಡನೆ ಉದ್ಯಾನಗಳನ್ನು ವಿನ್ಯಾಸಗೊಳಿಸುವ ಉಪಕಸುಬನ್ನೂ ಮಾಡುವ ಬಯಕೆಯಿತ್ತು. 

Advertisement

ಊರಿಗೆ ಮರಳಿದ ಮೇಲೆ ಎದುರಾದ ಸವಾಲುಗಳು?
ನಾನಂತೂ ಹಳ್ಳಿಯಲ್ಲೇ ಹುಟ್ಟಿ ಬೆಳೆದವನು. ಹಳ್ಳಿಗೆ ಮರಳಿ ಬಂದದ್ದು ಖುಷಿಯ ವಿಚಾರವೇ ಹೊರತು ತೊಂದರೆಯಾಗಲಿಲ್ಲ. ಪತ್ನಿ ಕೃತ್ತಿಕಾ ಹೇಗೆ ಹೊಂದಿಕೊಳ್ಳುತ್ತಾಳ್ಳೋ ಎಂಬ ಸಂಶಯವಿತ್ತು. ಆದರೆ, ಈ ಎರಡು ವರ್ಷಗಳಲ್ಲಿ ನನಗಿಂತ ಮಿಗಿಲಾಗಿ ಆಕೆಯೇ ಹಳ್ಳಿ ಜೀವನಕ್ಕೆ ಹೊಂದಿಕೊಂಡಿದ್ದಾಳೆ. ಸಣ್ಣಪುಟ್ಟ ಸವಾಲುಗಳು ಇದ್ದಿದ್ದೇ. ವಿದ್ಯುತ್‌ ಸಮಸ್ಯೆ, ಮೊಬೈಲ… ಸಂಪರ್ಕದ ಕೊರತೆ, ಅಂತರ್ಜಾಲ ಸಿಗದಿರುವುದು ಇತ್ಯಾದಿ ಲೌಕಿಕ ಸಮಸ್ಯೆ, ಸವಾಲುಗಳು ಎದುರಾದರೂ ಅವ್ಯಾವುದೂ ದೊಡ್ಡದೆನಿಸಲಿಲ್ಲ.

ಈಗ ಹೇಗಿದೆ ಲೈಫ‌ು? 
ನಿಜ ಹೇಳಬೇಕೆಂದರೆ ಹಳ್ಳಿಯ ಜೀವನ ತುಂಬಾ ಚೆನ್ನಾಗಿದೆ. ಒಳ್ಳೆಯ ಗಾಳಿ, ಸ್ವಚ್ಛ ವಾತಾವರಣ, ಶುದ್ಧ ನೀರು, ನಮ್ಮದೇ ಹಸುಗಳು ಕೊಡುವ ಅಮೃತ ಸಮಾನವಾದ ಹಾಲು, ಮನೆಮಂದಿಯೆಲ್ಲರ ಒಡನಾಟ, ನೆಂಟರಿಷ್ಟರ ಸಂಪರ್ಕ ಇವೆಲ್ಲವೂ ಬದುಕಿನ ದಿಶೆಯನ್ನು ಉತ್ತಮಗೊಳಿಸಿವೆ. ಪೇಟೆಯ ವಾಹನ ದಟ್ಟಣೆ, ಮಾಲಿನ್ಯ ಇಲ್ಲ, ಕೆಲಸದೊತ್ತಡವಿಲ್ಲ, ರಜೆಗಾಗಿ ಮೇಲ—ಕಾರಿಗಳ ಬಳಿ ಹಲ್ಲು ಗಿಂಜಬೇಕಾಗಿಲ್ಲ. ನೆಮ್ಮದಿಯಾಗಿದ್ದೇನೆ. ಚೆನ್ನಾಗಿದೆ. ನಮ್ಮದು ಕೂಡು ಕುಟುಂಬ. ಮನೆಯವರೊಡನೆ ಕೃಷಿಯ ಉಸ್ತುವಾರಿಯಲ್ಲಿ ಪಾಲ್ಗೊಳ್ಳುತ್ತೇನೆ.

ಸಂದರ್ಶನ: ಹರ್ಷವರ್ಧನ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next