ಅಜೇಯ್ ರಾವ್ ಅಭಿನಯದ “ತಾಯಿಗೆ ತಕ್ಕ ಮಗ’ ಚಿತ್ರದ ನಿರ್ದೇಶಕ ಮತ್ತೂಮ್ಮೆ ಬದಲಾಗಿದ್ದಾರೆ. ಮುಂಚೆ ರಘು ಕೋವಿ ಎನ್ನುವವರು ಆ ಚಿತ್ರವನ್ನು ನಿರ್ದೇಶಿಸುತ್ತಾರೆ ಎಂದು ಹೇಳಲಾಗಿತ್ತು. ಆ ನಂತರ ನಿರ್ದೇಶಕರು ಕಾರಣಾಂತರಗಳಿಂದ ಬದಲಾಗಿ, ಆ ಜಾಗಕ್ಕೆ ವೇದ್ ಗುರು ಎನ್ನುವವರು ಬಂದರು. ಈಗ ಮತ್ತೂಮ್ಮೆ ನಿರ್ದೇಶಕರು ಬದಲಾಗಿದ್ದು, ಈಗ ಶಶಾಂಕ್ ಅವರೇ ಚಿತ್ರದ ನಿರ್ದೇಶನವನ್ನು ಮಾಡಲಿದ್ದಾರೆ.
ಹೌದು, ಇದಕ್ಕೂ ಮುನ್ನ “ತಾಯಿಗೆ ತಕ್ಕ ಮಗ’ ಚಿತ್ರಕ್ಕೆ ಶಶಾಂಕ್ ಬರೀ ನಿರ್ಮಾಪಕರಾಗಿದ್ದರು. ಈಗ ಅವರೇ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಈಗಾಗಲೇ ಚಿತ್ರದ ಮುಹೂರ್ತ ನಡೆದಿದೆ. ಇನ್ನು ಚಿತ್ರೀಕರಣವಾಗುವುದಷ್ಟೇ ಬಾಕಿ ಇದ್ದು, ಫೆಬ್ರವರಿ ಆರರಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಇಷ್ಟಕ್ಕೂ ನಿರ್ದೇಶಕರು ಬದಲಾಗಿದ್ದು ಏಕೆ ಎಂಬ ಪ್ರಶ್ನೆ ಬರಬಹುದು.
ಈ ಕುರಿತು ಉತ್ತರಿಸುವ ಶಶಾಂಕ್, “ಆರೋಗ್ಯದ ಸಮಸ್ಯೆಯಿಂದ ವೇದ್‌ಗುರು ಅವರಿಗೆ ಚಿತ್ರದ ಬಗ್ಗೆ ಗಮನ ಕೊಡುವುದಕ್ಕೆ ಸಾಧ್ಯವಾಗಲಿಲ್ಲ. ಹಾಗಾಗಿ ಬೇರೆ ಯಾರಿಂದ ಚಿತ್ರ ಮುಂದುವರೆಸುವುದು ಎಂದು ಯೋಚಿಸುತ್ತಿದ್ದಾಗ, ಪುನೀತ್ ಅಭಿನಯದಲ್ಲಿ ನಾನು ನಿರ್ದೇಶಿಸಬೇಕಿದ್ದ ಚಿತ್ರ ಸ್ವಲ್ಪ ಮುಂದಕ್ಕೆ ಹೋಯಿತು. ಹಾಗಾಗಿ ನಾನೇ ಈ ಚಿತ್ರವನ್ನು ಕೈಗೆತ್ತಿಕೊಂಡೆ. ಈ ಚಿತ್ರವನ್ನು ಮುಗಿಸಿದ ನಂತರ, ಪುನೀತ್ ರಾಜಕುಮಾರ್ ಅಭಿನಯದ ಚಿತ್ರವನ್ನು ಕೈಗೆತ್ತಿಕೊಳ್ಳುತ್ತೇನೆ’ ಎನ್ನುತ್ತಾರೆ ಶಶಾಂಕ್.
ಈ ಚಿತ್ರವನ್ನು ನಿರ್ದೇಶಿಸಬೇಕಾಗಿ ಬಂದಿದ್ದು ಅನಿವಾರ್ಯ ಎನ್ನುತ್ತಾರೆ ಶಶಾಂಕ್. “ನನ್ನ ನಿರ್ಮಾಣದ ಮೊದಲ ಚಿತ್ರ ಇದು. ನೀವೇ ಏಕೆ ನಿರ್ದೇಶಿಸಬಾರದು ಎಂದು ನನ್ನ ಸ್ನೇಹಿತರು ಮುಂಚಿನಿಂದ ಹೇಳುತ್ತಿದ್ದರು. ಆದರೆ, ಆ ಸಂದರ್ಭದಲ್ಲಿ ಆ ಯೋಚನೆ ಇರಲಿಲ್ಲ. ಈಗ ಆ ಚಿತ್ರಕ್ಕೂ ನಿರ್ದೇಶಕರಿರಲಿಲ್ಲ, ಹಾಗೆಯೇ ನನ್ನ ಚಿತ್ರವೂ ಮುಂದಕ್ಕೆ ಹೋಯಿತು. ಹಾಗಾಗಿ ಅನಿರೀಕ್ಷಿತವಾಗಿ ನಾನೇ ನಿರ್ದೇಶಕನಾಗಬೇಕಾಯಿತು.
ಇದೊಂದು ಕಾಕತಾಳೀಯ ಅಷ್ಟೇ’ ಎನ್ನುತ್ತಾರೆ ಶಶಾಂಕ್. ಚಿತ್ರದಲ್ಲಿ ಅಜೇಯ್ ರಾವ್, ಆಶಿಕಾ ಮತ್ತು ಸುಮಲತಾ ಅಂಬರೀಶ್ ಅವರ ಜೊತೆಗೆ ಲೋಕಿ, ಕೃಷ್ಣ ಹೆಬ್ಟಾಳ್, ಅಚ್ಯುತ್ ಕುಮಾರ್ ಮತ್ತು ಜಹಾಂಗೀರ್ ನಟಿಸುತ್ತಿದ್ದಾರೆ. ಈ ಪೈಕಿ “ಭಜರಂಗಿ’ ಲೋಕಿ ಮತ್ತು ಕೃಷ್ಣ ಹೆಬ್ಟಾಳ್ ಅವರದ್ದು ನೆಗೆಟಿವ್ ಪಾತ್ರಂತಗಳಂತೆ. ಚಿತ್ರಕ್ಕೆ ಶೇಖರ್ ಚಂದ್ರು ಅವರ ಛಾಯಾಗ್ರಹಣ ಮತ್ತು ಜೂಡಾ ಸ್ಯಾಂಡಿ ಅವರ ಸಂಗೀತವಿದೆ.