Advertisement
ಸತತ ಐದು ವರ್ಷಗಳಿಂದ ನನೆಗುದಿಗೆ ಬಿದ್ದು ಕೊನೆಗೂ ಸ್ವಂತ ಕಟ್ಟಡ ಭಾಗ್ಯ ಪಡೆದುಕೊಂಡಿರುವ ಉನ್ನತ ಶಿಕ್ಷಣ ಅಕಾಡೆಮಿಯ ಸುಂದರ ಕಟ್ಟಡ ಕರ್ನಾಟಕ ವಿಶ್ವವಿದ್ಯಾಲಯ ಆವರಣದ ಹಳಿಯಾಳರಸ್ತೆ ಸಮೀಪ 27 ಎಕರೆ ಜಾಗದಲ್ಲಿ ತಲೆ ಎತ್ತುತ್ತಿದೆ. ಆದರೆ ಮೂಲ ನಕ್ಷೆಯನ್ನು ತಿದ್ದುಪಡಿ ಮಾಡಿದ್ದರಿಂದ ಮತ್ತು ಕಳೆದ ವರ್ಷ ತೀವ್ರ ಮಳೆಗಾಲ ಹಿಡಿದಿದ್ದರಿಂದ ಕ್ಯಾಂಪಸ್ ನಿರ್ಮಾಣ ಕಾರ್ಯ ಆಮೆಗತಿಯಲ್ಲಿ ಸಾಗಿದ್ದು ಪೂರ್ಣಗೊಳ್ಳಲು ಇನ್ನೂ ಒಂದು ವರ್ಷ ಕಾಯಬೇಕಿದೆ.
Related Articles
Advertisement
ಸದ್ಯಕ್ಕೆ ಇಲ್ಲಿ ಉನ್ನತ ಶಿಕ್ಷಣ ಅಕಾಡೆಮಿ ಪ್ರಧಾನ ಕಟ್ಟಡ, ಹೈಟೆಕ್ ಬೋಧನಾ ಕೊಠಡಿಗಳು, ಕಾರ್ಯಕ್ರಮ ಸಭಾಂಗಣ, ಕಂಪ್ಯೂಟರ್ ಹೈಟೆಕ್ ಲ್ಯಾಬೋರೆಟರಿ, ಸಿಬ್ಬಂದಿಗೆ ವಸತಿ ನಿಲಯಗಳು, ಕ್ರೀಡಾ ಸಮುಚ್ಛಯ, ಯೋಗ ಮತ್ತು ಜಿಮ್ ಹಾಲ್ ಸೇರಿದಂತೆ ಸುಸಜ್ಜಿತವಾದ ಪ್ರತ್ಯೇಕವಾಗಿ ಮತ್ತು ಸ್ವತಂತ್ರವಾಗಿ ಅಕಾಡೆಮಿ ಕಾರ್ಯನಿರ್ವಹಿಸಲು ಅಗತ್ಯವಾದ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ. ಈವರೆಗೂ ಅಕಾಡೆಮಿಯು ಧಾರವಾಡ ಮಾತ್ರವಲ್ಲ, ಕರ್ನಾಟಕದ ಇತರ ಜಿಲ್ಲೆಗಳಲ್ಲಿಯೂ ಕೂಡ ಬೋಧನಾ ಕೌಶಲ್ಯ ಮತ್ತು ಸಂಶೋಧನೆಗೆ ಅಗತ್ಯವಾದ ಮಾಹಿತಿ ಮತ್ತು ತರಬೇತಿಗಳನ್ನು ನಡೆಸಿಕೊಂಡು ಬಂದಿದೆ.
ಒಂದಿಷ್ಟು ವಿಳಂಬ: ಅಕಾಡೆಮಿಯ ಒಂದಿಷ್ಟು ಕಟ್ಟಡಗಳ ನಿರ್ಮಾಣ ಕಾರ್ಯ ಮುಗಿಯುವ ಹಂತದಲ್ಲಿದ್ದರೆ, ಇನ್ನಷ್ಟು ಕಟ್ಟಡಗಳ ನಿರ್ಮಾಣ ಕಾರ್ಯ ಇನ್ನೂ ಒಂದು ವರ್ಷ ವಿಳಂಬವಾಗುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಮೊದಲ ಹಂತದಲ್ಲಿ ವಿದ್ಯಾರ್ಥಿ ನಿಲಯ ಕಟ್ಟಡ ಪೂರ್ಣಗೊಂಡು ಇದೀಗ ಬಣ್ಣ ಬಳೆಯಲಾಗುತ್ತಿದೆ. ನಿರ್ಮಾಣ ಕಂಪನಿಗೆ ಗುತ್ತಿಗೆ ನೀಡುವ ಸಂದರ್ಭದಲ್ಲಿ 18 ತಿಂಗಳ ಕಾಲಾವಕಾಶ ನೀಡಲಾಗಿತ್ತು. ಆದರೆ ಇದೀಗ 18 ತಿಂಗಳು ಮುಗಿಯುತ್ತ ಬಂದರೂ ಅಕಾಡೆಮಿ ಕ್ಯಾಂಪಸ್ ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲ.
ಒಂದೂವರೇ ವರ್ಷದಲ್ಲಿ ಅಕಾಡೆಮಿಯ ನಿರ್ಮಾಣ ಕಾರ್ಯ ಮುಗಿಯಬೇಕಿತ್ತು. ಈಗ ಶೇ.50 ರಷ್ಟು ಕೆಲಸ ಮುಗಿದಿವೆ. ಆದರೆ ಆರಂಭದಲ್ಲಿಯೇ ಅಕಾಡೆಮಿಯ ಮೂಲನಕ್ಷೆ ಬದಲಿಸಿ ಹೊಸ ನಕ್ಷೆ ಸಿದ್ದಗೊಳಿಸಬೇಕಾಯಿತು. ಕಳೆದ ವರ್ಷ ತೀವ್ರ ಮಳೆಗಾಲದಿಂದ ನಿರ್ಮಾಣ ಕಾರ್ಯ ವಿಳಂಬವಾಯಿತು. ಹೀಗಾಗಿ ಇನ್ನು ಒಂದು ವರ್ಷದಲ್ಲಿ ಅಕಾಡೆಮಿ ಪರಿಪೂರ್ಣ ಕ್ಯಾಂಪಸ್ ಹೊಂದಲಿದೆ. – ಡಾ| ಎಸ್.ಎಂ. ಶಿವಪ್ರಸಾದ್, ನಿರ್ದೇಶಕರು,ಉನ್ನತ ಶಿಕ್ಷಣ ಅಕಾಡೆಮಿ
-ಬಸವರಾಜ ಹೊಂಗಲ್