Advertisement

ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕರಿಂದ ದಿಢೀರ್‌ ಭೇಟಿ

09:52 PM Apr 09, 2019 | Team Udayavani |

ಬಂಟ್ವಾಳ: ರೋಗಿಯೊಬ್ಬರಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗದಿರುವ ವಿಚಾರ ವಾಟ್ಸಾಪಿನಲ್ಲಿ ವೈರಲ್‌ ಆಗಿದ್ದು, ಮಾಹಿತಿ ಪಡೆದ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಎ. 9ರಂದು ದಿಢೀರಾಗಿ ಬಂಟ್ವಾಳ ಸಮುದಾಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಘಟನೆ ಸಂಭವಿಸಿದೆ.

Advertisement

ವಿಪರೀತ ಜ್ವರದಿಂದ ಬಳಲಿದ್ದ, ವಾಂತಿ ಮಾಡಿಕೊಂಡ ರೋಗಿಯೊಬ್ಬರನ್ನು ಆಸ್ಪತ್ರೆಯಲ್ಲಿ ವೈದ್ಯರು ತಪಾಸಣೆ ಬಳಿಕ ಅಡ್ಮಿಟ್‌ ಆಗುವಂತೆ ಚೀಟಿ ನೀಡಿದ್ದು, ಅದನ್ನು ಕೌಂಟರಲ್ಲಿ ನೀಡಿ ದಾಖಲಾಗಬೇಕಾಗಿತ್ತು. ಆ ಸಂದರ್ಭ ಸಂಬಂಧಪಟ್ಟ ಸಿಬಂದಿ ಬಾರದೆ ಕೌಂಟರ್‌ ತೆರೆದಿರಲಿಲ್ಲ. ಇದರಿಂದ ಏಳು ಗಂಟೆಗೆ ಬಂದಿದ್ದ ರೋಗಿಯು 9 ಗಂಟೆವರೆಗೆ ಕಾಯುವಂತಾಗಿತ್ತು ಎಂಬುದಾಗಿ ಹೇಳಲಾಗಿದೆ.

ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿ ಗುತ್ತು ಆಸ್ಪತ್ರೆಗೆ ಭೇಟಿ ನೀಡಿ ಎಲ್ಲ ಸಿಬಂದಿಯಲ್ಲಿ, ರೋಗಿಗಳಲ್ಲಿ ಘಟನೆ ಬಗ್ಗೆ ಮಾಹಿತಿಯನ್ನು ಪಡೆದರು. ಅಶುಚಿ ಅವ್ಯವಸ್ಥೆ ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಶೌಚಾಲಯವನ್ನು ಸ್ವತ್ಛಗೊಳಿಸದ ಕುರಿತು ಆರೋಗ್ಯಾಧಿಕಾರಿಯ ಗಮನಕ್ಕೆ ತಂದು ಕ್ರಮ ಕೈಗೊಳ್ಳಲು ಹೇಳಿದರು.

ತಾಲೂಕು ಆರೋಗ್ಯ ಅಧಿಕಾರಿ ಡಾ| ದೀಪಾ ಪ್ರಭು, ಆಸ್ಪತ್ರೆಯ ಆಡಳಿತಾಧಿಕಾರಿ ಡಾ| ಸದಾಶಿವ ಉಪಸ್ಥಿತರಿದ್ದರು. ಶಾಸಕರ ಜತೆ ಪ್ರಮುಖರಾದ ರಾಮ್‌ದಾಸ್‌ ಬಂಟ್ವಾಳ, ರಮಾನಾಥ ರಾಯಿ ಮತ್ತಿತರರಿದ್ದರು.

ದೂರು ವ್ಯಕ್ತವಾಗಿಲ್ಲ
ಶಾಸಕರು ಆಸ್ಪತ್ರೆಗೆ ಆಗಮಿಸಿ ಒಳ ರೋಗಿಗಳಲ್ಲಿ ಸಮಸ್ಯೆಯ ಬಗ್ಗೆ ಪ್ರಶ್ನಿಸಿದ್ದಾರೆ. ತಾಲೂಕು ವೈದ್ಯಾಧಿಕಾರಿಯಾಗಿ ಶಾಸಕರ ಆಗಮನದ ಸಂದರ್ಭ ಆಸ್ಪತ್ರೆಯಲ್ಲಿದ್ದೆ. ಯಾರೊಬ್ಬರಿಂದಲೂ ವಿಚಾರಣೆ ಸಂದರ್ಭ ದೂರು ವ್ಯಕ್ತವಾಗಿಲ್ಲ. ಮುಂದಕ್ಕೆ ಇಂತಹ ದೂರು ಬಾರದಂತೆ ಕ್ರಮ ಕೈಗೊಳ್ಳಲು ಶಾಸಕರು ಸಿಬಂದಿಗೆ ಎಚ್ಚರಿಸಿದ್ದಾರೆ. ಅಂತಹ ಅನಪೇಕ್ಷಿತ ಘಟನೆ ನಡೆದಲ್ಲಿ ನೊಂದವರು ಯಾರನ್ನು ಸಂಪರ್ಕಿಸಬೇಕು ಎಂದು ಅಧಿಕಾರಿಯ ಹೆಸರು, ಮೊಬೈಲ್‌ ನಂಬ್ರವನ್ನು ಆಸ್ಪತ್ರೆಯ ಕಚೇರಿಯ ಮುಂದೆ ಪ್ರಕಟಿಸಲಾಗುವುದು.
ಡಾ| ದೀಪಾ ಪ್ರಭು, ತಾಲೂಕು ಆರೋಗ್ಯ ಅಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next