Advertisement

6 ಲಕ್ಷ ವಾಹನಗಳಿಗೆ ಸುರಕ್ಷಾ ಉಪಕರಣ ಅಳವಡಿಕೆ

09:24 PM Nov 03, 2022 | Team Udayavani |

ಬೆಂಗಳೂರು: ಪ್ರಯಾಣಿಕರು, ಅದರಲ್ಲೂ ಮುಖ್ಯವಾಗಿ ಮಕ್ಕಳು ಹಾಗೂ ಮಹಿಳೆಯರ ಸುರಕ್ಷೆ ದೃಷ್ಟಿಯಿಂದ ಸಾರ್ವಜನಿಕ ಮತ್ತು ಖಾಸಗಿ ವಲಯದ ಪ್ರಯಾಣಿಕರ ಮತ್ತು ಸರಕು ಸಾಗಣೆಯ ಒಟ್ಟು 6.08 ಲಕ್ಷ ವಾಹನಗಳಿಗೆ  “ಸ್ಥಳಪತ್ತೆ ಹಚ್ಚುವ ಸಾಧನ ಮತ್ತು ತುರ್ತು ದಿಗಿಲು ಗುಂಡಿ’ (ಲೋಕೇಷನ್‌ ಟ್ರ್ಯಾಕಿಂಗ್‌ ಡಿವೈಸ್‌ ಹಾಗೂ ಎಮರ್ಜನ್ಸಿ ಪ್ಯಾನಿಕ್‌ ಬಟನ್‌) ಅಳವಡಿಸುವ ಯೋಜನೆಯನ್ನು ಜಾರಿಗೆ ತರಲು ರಾಜ್ಯ ಸರಕಾರ ನಿರ್ಧರಿಸಿದೆ.

Advertisement

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ. ಮಾಧುಸ್ವಾಮಿ, ಸಾರ್ವಜನಿಕ ಸೇವಾ ವಾಹನಗಳಿಗೆ  “ಸ್ಥಳಪತ್ತೆ ಹಚ್ಚುವ ಸಾಧನ ಮತ್ತು  ತುರ್ತು ದಿಗಿಲು ಗುಂಡಿ’ ಅಳವಡಿಸುವ ಯೋಜನೆಯನ್ನು 20.36 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಜಾರಿಗೊಳಿಸಲು ಸಚಿವ ಸಂಪುಟದಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.

ಯೋಜನೆ  ಕುರಿತು ವಿವರಿಸಿದ ಸಚಿವರು, ಇದೊಂದು ದೊಡ್ಡ ಯೋಜನೆ. ಇದಕ್ಕೆ ಕೇಂದ್ರ ಸರಕಾರದ ಸಹಕಾರವೂ ಸಿಗಲಿದೆ. 60:40 ಸಹಭಾಗಿತ್ವದಲ್ಲಿ ಯೋಜನೆ ಅನುಷ್ಠಾನ ಬರಲಿದೆ. ಕೇಂದ್ರ ಸರಕಾರದ ಮೋಟಾರು ಅಧಿನಿಯಮ ಮತ್ತು ಕೇಂದ್ರ ಸರಕಾರದ ಅಧಿಸೂಚನೆಗಳನ್ವಯ ಸಾರ್ವಜನಿಕ ಸೇವಾ ವಾಹನಗಳಲ್ಲಿ ಪ್ರಯಾಣಿಕರ ಸುರಕ್ಷೆ ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷೆ ದೃಷ್ಟಿಯಿಂದ ಸಾರ್ವಜನಿಕ ಮಜಲು ವಾಹನಗಳು, ಟ್ಯಾಕ್ಸಿಗಳಲ್ಲಿ ಕಡ್ಡಾಯವಾಗಿ ಸ್ಥಳಪತ್ತೆ ಹಚ್ಚುವ ಸಾಧನ ಮತ್ತು ತುರ್ತು ದಿಗಿಲು ಗುಂಡಿ  ಅಳವಡಿಸಬೇಕಾಗಿದೆ. ಅದರಂತೆ ಸರಕಾರ ಈ ತೀರ್ಮಾನ ಕೈಗೊಂಡಿದೆ ಎಂದರು.

ಯೋಜನೆಯ ಪ್ರಯೋಜನಗಳು :

Advertisement

ಸಾರ್ವಜನಿಕ ಮತ್ತು ಖಾಸಗಿ ಪ್ರಯಾಣಿಕ ಮತ್ತು ಸರಕು ಸಾಗಣೆ ವಾಹನಗಳು, ಸಾರ್ವಜನಿಕ ಮಜಲು ವಾಹನಗಳು, ಖಾಸಗಿ ಮಜಲು ವಾಹನಗಳು, ಪ್ರವಾಸಿ ವಾಹನಗಳು, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌ಗಳು ಸಹಿತ ಸಾರ್ವಜನಿಕ ಸೇವಾ ವಾಹನಗಳ ವೇಗ, ನಿಗದಿತ ನಿಲುಗಡೆ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆಯೇ? ನಿಗದಿತ ವೇಳೆಗೆ ಸ್ಥಳವನ್ನು ತಲುಪುತ್ತಿವೆಯೇ ಎಂಬುದನ್ನು ತಿಳಿದುಕೊಳ್ಳಬಹುದು. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ಭಾರೀ ಪ್ರಮಾಣದ ವಾಹನಗಳು ಅತಿ ವೇಗದಲ್ಲಿ ಚಲಾಯಿಸಿ ಅಪಘಾತಕ್ಕೆ ಒಳಗಾಗುವುದನ್ನು ತಡೆಯಬಹುದು. ನಿಯಮ ಉಲ್ಲಂ ಸಿ ಚಾಲಕರು ಬೇರೆ ಮಾರ್ಗದಲ್ಲಿ ವಾಹನಗಳನ್ನು ಚಲಾಯಿಸುವುದಕ್ಕೆ ಕಡಿವಾಣ ಹಾಕಬಹುದು. ಚಾಲಕರ ವರ್ತನೆಯಿಂದ ಪ್ರಯಾಣಿಕರಿಗೆ ಆಗುವ ಅನನುಕೂಲತೆಗಳ ಮೇಲೆ ನಿಗಾ ಇಡಬಹುದು. ಸಮಾಜಘಾತಕ ಶಕ್ತಿಗಳಿಂದ ವಾಹನ ಮತ್ತು ಪ್ರಯಾಣಿಕರನ್ನು ರಕ್ಷಿಸಬಹುದು ಎಂದು ಸಚಿವರು ವಿವರಿಸಿದರು.

ಕೇಂದ್ರೀಕೃತ ವ್ಯವಸ್ಥೆಯ ಮೂಲಕ ನಿರ್ವಹಣೆ :  

ಕ್ಯಾಬ್‌, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌ 4.51 ಲಕ್ಷ, ಶಾಲಾ ವಾಹನ ಮತ್ತು ಪ್ರಯಾಣಿಕರ ಬಸ್‌ಗಳು 16,432, ಖಾಸಗಿ ಮಜಲು ವಾಹನಗಳು 73,077, ಕೆಎಸ್‌ಆರ್‌ಟಿಸಿ ಮಜಲು ವಾಹನಗಳು 24,701, ಒಪ್ಪಂದ ವಾಹನಗಳು 5,138, ಅಖಿಲ ಭಾರತ ಪ್ರವಾಸಿ ವಾಹನಗಳು 1,940, ಬಸ್‌ಗಳು 71,248, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಯ ಸರಕು ವಾಹನಗಳು 85,944 ಸಹಿತ ಒಟ್ಟು 6,08,717 ವಾಹನಗಳಿಗೆ ಈ ಉಪಕರಣ ಅಳವಡಿಸಲಾಗುವುದು. ಎಲ್ಲ ವಾಹನಗಳಿಗೆ ಉಪಕರಣಗಳನ್ನು ಸಾರಿಗೆ ಇಲಾಖೆಯೇ ಅಳವಡಿಸಲಿದೆ. ಅಪಾಯದ ಸಂದರ್ಭದಲ್ಲಿ ಬಟನ್‌ ಒತ್ತುವ ವ್ಯವಸ್ಥೆ ಮಾಡಲಾಗುತ್ತಿದೆ. ಕೇಂದ್ರೀಕೃತ ವ್ಯವಸ್ಥೆಯ ಮೂಲಕ ಒಂದೇ ಕಡೆ ಎಲ್ಲವನ್ನೂ ನಿರ್ವಹಿಸಲಾಗುವುದು ಮತ್ತು ವಾಹನಗಳ ಮೇಲೆ ನಿಗಾ ಇಡಲಾಗುವುದು ಎಂದು ಸಚಿವರು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next