Advertisement

ಪಟೇಲ್‌ ಮಾದರಿ ಬಸವ ಮೂರ್ತಿ ಸ್ಥಾಪನೆ: ಸಿಎಂ ಬೊಮ್ಮಾಯಿ 

10:21 PM Mar 15, 2023 | Team Udayavani |

ಬೆಳಗಾವಿ: ನರ್ಮದಾ ತಟದಲ್ಲಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಪ್ರತಿಮೆ ಮಾದರಿಯಲ್ಲಿ ಘಟಪ್ರಭಾ ನದಿ ಮಧ್ಯಭಾಗದಲ್ಲಿ 108 ಅಡಿ ಎತ್ತರದ ಜಗಜ್ಯೋತಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪಿಸಲಾಗುವುದು. ಅಲ್ಲದೇ ಈ ಪ್ರದೇಶವನ್ನು ವಿಶ್ವಮಟ್ಟದ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

Advertisement

ನಗರದ ಬಸವೇಶ್ವರ ವೃತ್ತದಲ್ಲಿ 15 ಅಡಿ ಎತ್ತರದ ಬಸವೇಶ್ವರ ಪ್ರತಿಮೆ ನಿರ್ಮಾಣಕ್ಕೆ ಬುಧವಾರ ಶಿಲಾನ್ಯಾಸ ಹಾಗೂ ಬಸವಾದಿ ಶರಣರ ಮತ್ತು ಅನುಭವ ಮಂಟಪದ ಥೀಮ್‌ ಪಾರ್ಕ್‌ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಘಟಪ್ರಭಾ ನದಿ ತಟದಲ್ಲಿ ಬಸವೇಶ್ವರ ಮೂರ್ತಿ ಸ್ಥಾಪನೆ ಶೀಘ್ರವೇ ಆದೇಶಿಸಲಾಗುವುದು. ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ವಿಶ್ವಮಟ್ಟದ ಪ್ರವಾಸಿ ತಾಣವನ್ನಾಗಿ ರೂಪಿಸಲಾಗುವುದು. ಇದರ ಮೂಲಕ ಬಸವ ತತ್ವದ ಸ್ಫೂರ್ತಿ ಎಲ್ಲ ಕಡೆಗೆ ಹರಡಲಿ ಎಂಬುದು ನಮ್ಮ ಆಶಯವಾಗಿದೆ ಎಂದರು.

ಅನುಭವ ಮಂಟಪ ವಿಶ್ವದ ಮೊದಲ ಪಾರ್ಲಿಮೆಂಟ್‌
ಎಲ್ಲಿಯವರೆಗೆ ಕಾಲ ಇದೆಯೋ ಅಲ್ಲಿಯವರೆಗೆ ಬಸವ ವಿಚಾರ ಇರುತ್ತದೆ. ಶುದ್ಧ ಕನ್ನಡದಲ್ಲಿ ವಚನಗಳು ಇವೆ. ಕನ್ನಡ ಭಾಷೆ ಇರುವವರೆಗೆ ವಚನಗಳು ಇರುತ್ತವೆ. ವಚನ ಇರುವವರೆಗೆ ಬಸವಣ್ಣನವರು ಇರುತ್ತಾರೆ. ಬಸವಣ್ಣನವರು 12ನೇ ಶತಮಾನದಲ್ಲಿ ಮಾಡಿದ ಕೆಲಸ ನೋಡಿದರೆ ಆಗ ಅವರಲ್ಲಿದ್ದ ದೂರದೃಷ್ಟಿ ಬಗ್ಗೆ ಆಶ್ಚರ್ಯವಾಗುತ್ತದೆ. ಬಸವಣ್ಣನವರ ವಿಚಾರಧಾರೆಗಳು ನಮ್ಮೆಲ್ಲರ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ಪಾಶ್ಚಿಮಾತ್ಯ ದೇಶದಲ್ಲಿ 10 ಕಮಾಂಡೆಂಟ್‌ ಇವೆ. ಆದರೆ ಅದಕ್ಕಿಂತ ಪೂರ್ವದಲ್ಲಿ ಬಸವಣ್ಣನವರು ಸಪ್ತ ಹಾದಿಗಳನ್ನು ನೀಡಿದ್ದಾರೆ. ಬದುಕಿನ ದಾರಿ ತೋರಿಸಿದ್ದಾರೆ. ವಿಶ್ವದ ಮೊದಲ ಪಾರ್ಲಿಮೆಂಟ್‌ ಎಂದರೆ ಅನುಭವ ಮಂಟಪ. ನೈಜವಾದ ಸಂಸತ್‌ ನಮ್ಮದಾಗಿದೆ. ಈಗಲೂ ಅದು ಪ್ರಸ್ತುತ ಆಗಿದೆ ಎಂದರು.

ನಿಡಸೋಸಿ ಮಠದ ಪಂಚಮಶಿವಲಿಂಗೇಶ್ವರ ಸ್ವಾಮೀಜಿ, ಗದಗ-ಡೊಂಬಳ ತೋಂಟದಾರ್ಯ ಮಠದ ಡಾ|ಸಿದ್ದರಾಮ ಸ್ವಾಮೀಜಿ, ಕಾರಂಜಿ ಮಠದ ಗುರುಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೀರಶೈವ ಮಹಾಸಭಾ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅಭಯ ಪಾಟೀಲ, ಲಕ್ಷ್ಮೀ ಹೆಬ್ಟಾಳ್ಕರ ಸೇರಿದಂತೆ ಇತರರು ಇದ್ದರು.

ಬೊಮ್ಮಾಯಿ ಮತ್ತೊಮ್ಮೆ ಸಿಎಂ ಆಗಲಿ: ಕೋರೆ
ಬಸವರಾಜ ಬೊಮ್ಮಾಯಿ ಮುಂದಿನ ಬಾರಿಯೂ ಮುಖ್ಯಮಂತ್ರಿಯಾಗಲಿ. ಅದಕ್ಕೆ ನಮ್ಮ ತಕರಾರು ಇಲ್ಲ. ನರ್ಮದಾ ತಟದಲ್ಲಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಪ್ರತಿಮೆ ಮಾದರಿಯಲ್ಲಿ ಘಟಪ್ರಭಾದಲ್ಲಿ ವಿಶ್ವಕ್ಕೆ ಮಾದರಿಯಾಗಿರುವ ಬಸವಣ್ಣನವರ ಮೂರ್ತಿ ಸ್ಥಾಪಿಸಬೇಕು ಎಂಬುದು ನಮ್ಮ ಇಚ್ಛೆ ಇದೆ. ಇದಕ್ಕೆ ಮುಖ್ಯಮಂತ್ರಿಗಳು ಸಹಕಾರ ಮಾಡಬೇಕು.ಬಸವೇಶ್ವರರ ಮೂರ್ತಿ 60 ವರ್ಷಗಳ ಹಿಂದೆ ನಿರ್ಮಾಣವಾಗಿದೆ. ವೀರಶೈವ ಮಹಾಸಭಾದವರೊಂದಿಗೆ ಚರ್ಚಿಸಿ ಕಂಚಿನ ಪ್ರತಿಮೆ ನಿರ್ಮಿಸಲಾಗುತ್ತಿದೆ ಎಂದು ಪ್ರಭಾಕರ ಕೋರೆ ಹೇಳಿದರು.
.

Advertisement
Advertisement

Udayavani is now on Telegram. Click here to join our channel and stay updated with the latest news.

Next