Advertisement

Panic Button ಅಳವಡಿಕೆ ಕಡ್ಡಾಯ: ಸಾರ್ವಜನಿಕ ಸಂಪರ್ಕ ವಾಹನಗಳಿಗೆ ವಿಎಲ್‌ಟಿಯೂ ಅಗತ್ಯ

01:07 AM Jun 29, 2024 | Team Udayavani |

ಮಂಗಳೂರು: ಸಾರ್ವಜನಿಕ ಸೇವಾ ವಾಹನಗಳಿಗೆ ಸುರಕ್ಷೆ ದೃಷ್ಟಿಯಿಂದ ವೆಹಿಕಲ್‌ ಲೊಕೇಶನ್‌ ಟ್ರಾÂಕಿಂಗ್‌ ಡಿವೈಸ್‌ ಮತ್ತು ಪ್ಯಾನಿಕ್‌ ಬಟನ್‌ ಅಳವಡಿಕೆ ಕಡ್ಡಾಯಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ಜತೆಗೆ ಸೆಪ್ಟಂಬರ್‌ ತಿಂಗಳೊಳಗೇ ಅಳವಡಿಸಬೇಕು ಎಂದು ಗಡುವು ವಿಧಿಸಿದೆ.

Advertisement

ಆದರೆ ಕರಾವಳಿಯಲ್ಲಿ ವಾಹನ ಮಾಲಕರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಪೆಟ್ರೋಲ್‌, ಡಿಸೇಲ್‌ ದರ ಏರಿಕೆ ಹೊತ್ತಿಗೆ ವಿಎಲ್‌ಟಿ ಅಳವಡಿಕೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ ಎನ್ನುವ ಆಕ್ರೋಶ ವಾಹನ ಮಾಲಕರಿಂದ ಕೇಳಿಬಂದಿದೆ.

ಸರಕಾರ ತನ್ನ ನಿಲುವಿಗೆ ಬದ್ಧವಾಗಿದ್ದು, ಪ್ರಯಾಣಿಕರ ಸುರಕ್ಷೆಗೆ ವಿಎಲ್‌ಟಿ ಅಳವಡಿಕೆ ಮಾಡಲೇಬೇಕೆಂದು ಹೇಳಿದೆ.

ನಿಯಮದ ಪ್ರಕಾರ ವೆಹಿಕಲ್‌ ಲೊಕೇಶನ್‌ ಟ್ರಾÂಕಿಂಗ್‌ ಡಿವೈಸ್‌ ಹಾಗೂ ಎಮರ್ಜೆನ್ಸಿ ಪ್ಯಾನಿಕ್‌ ಬಟನ್‌ ಅಳವಡಿಕೆಗೆ ಸೆ. 10ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಪ್ಯಾನಿಕ್‌ ಬಟನ್‌ ಅಳವಡಿಕೆಗೆ ಕೇಂದ್ರ ಸರಕಾರ ಗೊತ್ತುಪಡಿಸಿರುವುದು 7,500 ರೂಪಾಯಿ. ಆದರೆ ರಾಜ್ಯದಲ್ಲಿ ಪ್ಯಾನಿಕ್‌ ಬಟನ್‌ ವಿತ್‌ ಜಿಪಿಎಸ್‌ ಅಳವಡಿಕೆಗೆ ಸರಿಸುಮಾರು 9,500ರಿಂದ 11,000 ರೂ. ತನಕ ಪಡೆಯಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.

ತುರ್ತು ಸಂದೇಶ ರವಾನೆ
ವಾಹನಗಳಲ್ಲಿ ಪ್ರಯಾಣಿಕರು ತೆರಳುವ ವೇಳೆಯಲ್ಲಿ ಯಾವುದೇ ಅಪಾಯದ ಮುನ್ಸೂಚನೆ ಇದ್ದಲ್ಲಿ, ಅನಾರೋಗ್ಯ, ಲೈಂಗಿಕ ದೌರ್ಜನ್ಯದಂತಹ ತೊಂದರೆ ಎದುರಾದಲ್ಲಿ ವಾಹನದಲ್ಲಿರುವ ಪ್ಯಾನಿಕ್‌ ಬಟನ್‌ ಒತ್ತಿದರೆ, ತತ್‌ಕ್ಷಣ ಕಮಾಂಡ್‌ ಸೆಂಟರ್‌ ಮೂಲಕ ಸಮೀಪದ ಪೊಲೀಸ್‌ ಠಾಣೆಗೆ ಮಾಹಿತಿ ರವಾನೆಯಾಗುತ್ತದೆ. ವಾಹನದ ಪೂರ್ಣ ಮಾಹಿತಿ ಹಾಗೂ ಇರುವ ಲೊಕೇಶನ್‌ ತಿಳಿಯುತ್ತದೆ. ಪೊಲೀಸರಿಗೆ ಅಂತಹ ವಾಹನಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ. ದಿಲ್ಲಿಯ ನಿರ್ಭಯ ಪ್ರಕರಣವನ್ನು ಆಧಾರವಿರಿಸಿಕೊಂಡು ಇದನ್ನು ಕಡ್ಡಾಯಗೊಳಿಸಲಾಗಿದೆ.

Advertisement

ಫಿಟ್‌ನೆಸ್‌ ಸರ್ಟಿಫಿಕೆಟ್‌ (ಎಫ್‌ಸಿ) ಸಿಗದು
ಮಹಿಳಾ ಮತ್ತು ಮಕ್ಕಳ ಸುರಕ್ಷೆ ದೃಷ್ಟಿಯಿಂದ ಜಾರಿಗೆ ತಂದಿರುವ ವೆಹಿಕಲ್‌ ಲೊಕೇಶನ್‌ ಟ್ರಾÂಕಿಂಗ್‌ ಡಿವೈಸ್‌ ಮತ್ತು ಪ್ಯಾನಿಕ್‌ ಬಟನ್‌ ಹಳೆ ವಾಹನಗಳಿಗೆ ಅಳವಡಿಸುವುದು ಕಡ್ಡಾಯವಾಗಿದೆ. ಒಂದೊಮ್ಮೆ ಅಳವಡಿಸದಿದ್ದಲ್ಲಿ ಅಂತಹ ವಾಹನಗಳಿಗೆ ಫಿಟ್‌ನೆಸ್‌ ಸರ್ಟಿಫಿಕೆಟ್‌ (ಎಫ್‌ಸಿ) ನೀಡುವುದಿಲ್ಲ ಎನ್ನುವ ಎಚ್ಚರಿಕೆಯನ್ನು ಸಾರಿಗೆ ಇಲಾಖೆ ನೀಡಿದೆ. 8 ವರ್ಷಗಳ ತನಕ ಪ್ರತಿ 2 ವರ್ಷಕ್ಕೊಮ್ಮೆ ಹಾಗೂ ಆ ಬಳಿಕ ವರ್ಷಂಪ್ರತಿ ಎಫ್ಸಿ ಮಾಡಬೇಕು.

ಯಾವೆಲ್ಲ ವಾಹನಗಳು
ಸಾರ್ವಜನಿಕ ಸಂಪರ್ಕದ ಬಸ್‌ಗಳು, ಸ್ಕೂಲ್‌ ಬಸ್‌ಗಳು, ಟ್ರಾವೆಲರ್‌ಗಳು, ಕಾರು ಹಾಗೂ ಗೂಡ್ಸ್‌ ವಾಹನಗಳಿಗೂ ಇದನ್ನು ಕಡ್ಡಾಯಗೊಳಿಸಲಾಗಿದೆ. ಹಳದಿ ನಂಬರ್‌ ಪ್ಲೇಟ್‌ ಹೊಂದಿದ್ದು, ಸಾರ್ವಜನಿಕರು ಪ್ರಯಾಣಿಸುವ ವಾಹನಗಳಲ್ಲಿ ಪ್ಯಾನಿಕ್‌ ಬಟನ್‌ ಕಡ್ಡಾಯಗೊಳಿಸಲಾಗಿದೆ.

ಪ್ಯಾನಿಕ್‌ ಬಟನ್‌ ಅಳವಡಿಕೆ ಮೂಲಕ ಸರಕಾರ ಹಣ ಮಾಡುವ ತಂತ್ರ ಅನುಸರಿಸುತ್ತಿದೆ. ಸರಕಾರ ಸೂಚಿಸುವ ಏಜೆನ್ಸಿಗಳಲ್ಲಿ ಮಾತ್ರವೇ ಅಳವಡಿಸಬೇಕು ಎನ್ನುತ್ತಿದ್ದಾರೆ. ಆದರೆ ಅಲ್ಲಿ ಶುಲ್ಕ ದುಬಾರಿಯಾಗಿದೆ. ಬೇರೆಡೆ ಅಲ್ಪ ಕಡಿಮೆ ದರದಲ್ಲಿ ಇದ್ದರೂ ಅದಕ್ಕೆ ಅವಕಾಶವಿಲ್ಲ. ಕರಾವಳಿ ಭಾಗದಲ್ಲಿ ಹೊಟ್ಟೆಪಾಡಿಗಾಗಿ ದುಡಿಯುವವರಿಗೆ ಬಾಡಿಗೆ ಸಿಗುವುದೇ ಕಷ್ಟ. ಅಂಥ ಸಂದರ್ಭದಲ್ಲಿ ಚಾಲಕರ ಹೊಟ್ಟೆಗೆ ಹೊಡೆಯುವ ಕೆಲಸವನ್ನು ಸರಕಾರ ಮಾಡುತ್ತಿದೆ. ಇಲಾಖೆ ಮೂಲಕವೇ ಉಚಿತ ಅಥವಾ ರಿಯಾಯಿತಿ ದರದಲ್ಲಿ ಹಾಕಿಸುವುದಾದರೆ ನಾವು ಸಮ್ಮತಿಸುತ್ತೇವೆ. ಇಲ್ಲವಾದಲ್ಲಿ ಸಾವಿರಾರು ರೂ. ವ್ಯಯಿಸಿ ಅಳವಡಿಸಲು ನಮ್ಮಿಂದ ಸಾಧ್ಯವಿಲ್ಲ.
-ಆನಂದ್‌ ಕೆ., ಅಧ್ಯಕ್ಷರು ದ.ಕ. ಜಿಲ್ಲಾ ಟ್ಯಾಕ್ಸಿಮನ್ಸ್‌ ಮ್ಯಾಕ್ಸಿಕ್ಯಾಬ್‌ ಅಸೋಸಿಯೇಶನ್‌

ಸರಕಾರದ ಆದೇಶವನ್ನು ಎಲ್ಲರೂ ಪಾಲಿಸಬೇಕು. ಸಾರ್ವಜನಿಕರ ಸುರಕ್ಷೆ ದೃಷ್ಟಿಯಿಂದ ಸರಕಾರ ಇದನ್ನು ಜಾರಿಗೆ ತಂದಿದೆ. 12 ಏಜೆನ್ಸಿಗಳನ್ನು ಗೊತ್ತುಪಡಿಸಲಾಗಿದ್ದು, ಅವುಗಳ ಮೂಲಕವೇ ಪ್ಯಾನಿಕ್‌ ಬಟನ್‌ ಅಳವಡಿಸಬೇಕು. ತಪ್ಪಿದಲ್ಲಿ ಎಫ್‌ಸಿ ನವೀಕರಣ ಮಾಡಲಾಗುವುದಿಲ್ಲ. ಹೊಸ ವಾಹನಗಳಿಗೆ ಆರಂಭದಲ್ಲೇ ಅಳವಡಿಸಲಾಗುತ್ತಿದೆ.
-ಶ್ರೀಧರ್‌ ಮಲ್ಲಾಡ್‌, ಆರ್‌ಟಿಒ ಮಂಗಳೂರು

-ಸಂತೋಷ್‌ ಮೊಂತೇರೊ

Advertisement

Udayavani is now on Telegram. Click here to join our channel and stay updated with the latest news.

Next