ಕಟಪಾಡಿ: ಮಣಿಪುರ- ಕಟಪಾಡಿ ಸಂಪರ್ಕದ ಪ್ರಮುಖ ರಸ್ತೆಯೊಂದರ ಮಣಿಪುರ ಹೊಳೆಯ ಮೇಲ್ಸೇತುವೆ ಬಳಿ ಸುರಕ್ಷತೆಗಾಗಿ ಲೋಕೋಪಯೋಗಿ ಇಲಾಖೆಯು ಒಂದು ಪಾರ್ಶ್ವದಲ್ಲಿ ತಡೆಬೇಲಿ (ಕ್ರಾಸ್ ಬ್ಯಾರಿಯರ್) ಅಳವಡಿಸಿದೆ.
2 ಕೋಟಿ ರೂ. ಅನುದಾನದಲ್ಲಿ ಪೇವರ್ ಫಿನಿಶಿಂಗ್ ಕಂಡಿದ್ದ ಕಟಪಾಡಿ, ಮಣಿಪುರ, ದೆಂದೂರುಕಟ್ಟೆ ಸಹಿತ ಇತರೇ ಪ್ರಮುಖ ಊರುಗಳನ್ನು ಸಂಪರ್ಕಿಸುವ ಈ ರಸ್ತೆಯು ಸದಾ ವಾಹನ ನಿಬಿಡ, ಜನ ಸಂಚಾರ ದಟ್ಟಣೆ ಹೊಂದಿದೆ. ಪ್ರಯಾಣಿಕರ ಬಸ್ ಕೂಡ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಮಣಿಪುರ ಹೊಳೆಯ ಮೇಲ್ಸೇತುವೆ ಬಳಿಯಲ್ಲಿ ಇಳಿಜಾರು ಪ್ರದೇಶವಾಗಿದ್ದು, ಅಪಾಯಕಾರಿ ತಿರುವು ಕೂಡ ಹೊಂದಿತ್ತು. ಹೊಳೆಯ ಭಾಗಕ್ಕೆ ರಸ್ತೆಯು ತೆರೆದುಕೊಂಡಂತಿತ್ತು.
ಅಗಲ ಕಿರಿದಾದ ಈ ಸೇತುವೆಯ ಪ್ರದೇಶದಲ್ಲಿ ವೇಗವಾಗಿ ವಾಹನಗಳು ಸಂಚರಿಸುವ ಸಂದರ್ಭ ವಾಹನಗಳು ಎದುರು ಬದುರಾದ ಸಮಯದಲ್ಲಿ ಆಕಸ್ಮಿಕವಾಗಿ ಸ್ವಲ್ಪ ಆಯ ತಪ್ಪಿದರೂ ಹೊಳೆಯ ಭಾಗದ ಪ್ರಪಾತಕ್ಕೆ ಅಥವಾ ಹೊಳೆಗೆ ಉರುಳಿ ಬೀಳುವ ಅಪಾಯ ಹೆಚ್ಚಿದೆ. ಪಾದಚಾರಿಗಳು ಇದೇ ಇಕ್ಕಟ್ಟಿನಲ್ಲಿ ಸಿಲುಕಿಕೊಂಡರೂ ಮತ್ತಷ್ಟು ಹೆಚ್ಚಿನ ಅಪಾಯದ ಸಾಧ್ಯತೆ ಇದೆ ಎಂದು ಉದಯವಾಣಿಯು 2021ರ ಅ. 1ರಂದು ಜನಪರ ಕಾಳಜಿಯ ವರದಿಯನ್ನು ಪ್ರಕಟಿಸಿತ್ತು.
2022ರ ಜು. 22ರಂದು ಈ ಭಾಗದಲ್ಲಿ ನಡೆದ ಅಪಘಾತದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದು ದ್ವಿಚಕ್ರ ವಾಹನ, ಸವಾರ ಗಾಯಗೊಳ್ಳುವಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದ ಬಗ್ಗೆ ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಆಗ್ರಹವನ್ನು ಉದಯವಾಣಿಯು ಲೋಕೋಪಯೋಗಿ ಇಲಾಖೆಯ ಎ.ಇ.ಇ. ಹಾಗೂ ಎಂಜಿನಿಯರ್ ಅವರ ಗಮನಕ್ಕೆ ತಂದಿದ್ದು, ಜು.25ರಂದು ಕೂಡ ಉದಯವಾಣಿಯು ಸಚಿತ್ರ ವರದಿ ಪ್ರಕಟಿಸಿತ್ತು.
ಇದೀಗ ಎಚ್ಚೆತ್ತ ಇಲಾಖೆಯು ಸೂಕ್ತ ಕ್ರಮ ಕೈಗೊಂಡು ಸುರಕ್ಷತೆಯನ್ನು ಕಲ್ಪಿಸಿದ್ದು, ವಾಹನ ಸವಾರರು, ಸಾರ್ವಜನಿಕರು ಉದಯವಾಣಿ, ಇಲಾಖೆಯ ಅಧಿಕಾರಿ ಗಳಿಗೆ ಕೃತಜ್ಞತೆ ಸಲ್ಲಿಸಿದ್ದು, ಸೇತುವೆಯ ಇನ್ನುಳಿದ ಮೂರು ಪ್ರದೇಶ ದಲ್ಲಿಯೂ ತಡೆಬೇಲಿ ಅಳವಡಿಸಿ ಮತ್ತಷ್ಟು ಸುವ್ಯವಸ್ಥೆ ಕಲ್ಪಿಸಲು ಆಗ್ರಹಿಸಿದ್ದಾರೆ.