Advertisement

ಅವೈಜ್ಞಾನಿಕ ರಸ್ತೆಯಲ್ಲಿ ಸೂಚನ ಫಲಕ ಅಳವಡಿಕೆ

12:05 AM Jun 28, 2019 | mahesh |

ಸವಣೂರು: ಪುತ್ತೂರು-ಸುಬ್ರಹ್ಮಣ – ಮಂಜೇಶ್ವರ ರಾಜ್ಯ ಹೆದ್ದಾರಿ ಎಸ್‌.ಎಚ್. 100ರಲ್ಲಿ ಬರುವ ಸರ್ವೆ ಗ್ರಾಮದ ಭಕ್ತಕೋಡಿ ಎಂಬಲ್ಲಿನ ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದ ನಿರಂತರ ವಾಹನ ಅಪಘಾತಗಳಾಗುತ್ತಿದ್ದು, ಈ ಸ್ಥಳದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಸೂಚನ ಫಲಕ ಅಳವಡಿಸುವ ಮೂಲಕ ವಾಹನ ಸವಾರರಿಗೆ ಮುನ್ಸೂಚನೆ ನೀಡಿದಂತಾಗಿದೆ.

Advertisement

ಈ ಕುರಿತು ‘ಉದಯವಾಣಿ’ ಸುದಿನ ಮೇ 14ರಂದು ಸಚಿತ್ರ ವರದಿ ಪ್ರಕಟಿಸಿ ಇಲಾಖೆಯ ಗಮನ ಸೆಳೆದಿತ್ತು. ವರದಿಯಿಂದ ಎಚ್ಚೆತ್ತ ಲೋಕೋಪಯೋಗಿ ಇಲಾಖೆ ಸೂಚನ ಫಲಕ ಅಳವಡಿಸಿದೆ. ಭವಿಷ್ಯದಲ್ಲಿ ವಾಹನ ಸವಾರರ ಹಿತದೃಷ್ಟಿಯಿಂದ ರಸ್ತೆಯ ಉಬ್ಬುಗಳನ್ನು ಸರಿಪಡಿಸಬೇಕಿದೆ.

ಸಮಸ್ಯೆ ಹೀಗಿದೆ

ಪುತ್ತೂರು ಕಡೆಯಿಂದ ಬರುವ ವಾಹನಗಳ ಸವಾರರು ಭಕ್ತಕೋಡಿ ಪಶು ಚಿಕಿತ್ಸಾಲಯದ ಬಳಿ ಬಂದಾಗ ಸವಣೂರು ಕಡೆಯಿಂದ ಬರುವ ವಾಹನಗಳು ಕಾಣಿಸುವುದೇ ಇಲ್ಲ. ಅದೇ ರೀತಿ ಸವಣೂರು ಕಡೆಯಿಂದ ಬರುವ ವಾಹನಗಳು ಪುತ್ತೂರು ಕಡೆಯಿಂದ ಬರುವ ವಾಹನಗಳಿಗೆ ಕಾಣಿಸುವುದಿಲ್ಲ. ಇಲ್ಲಿ ರಸ್ತೆ ನೇರವಾಗಿ ಇದ್ದರೂ 20 ಮೀಟರ್‌ ಅಂತರದಲ್ಲಿ ಎದುರು-ಬದುರು ಬರುವ ವಾಹನಗಳು ಕಾಣಿಸದಷ್ಟು ರಸ್ತೆ ಎತ್ತರವಾಗಿದ್ದು, ಚಾಲಕರ ಅತಿಯಾದ ವೇಗ ಅಪಘಾತಗಳಿಗೆ ಕಾರಣವಾಗುತ್ತಿದೆ. ಇದೇ ಸ್ಥಳದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೂ ಇದ್ದು, ಮಕ್ಕಳು ರಸ್ತೆ ದಾಟಲು ಭಯ ಪಡುವಂತಾಗಿದೆ. ಪಾಲೆತ್ತಗುರಿ ಕಾಲನಿ ಹಾಗೂ ದೋಳ ರಸ್ತೆಗಳಿಗೆ ಇದೇ ಸ್ಥಳದಲ್ಲಿ ತಿರುವು ತೆಗೆದುಕೊಳ್ಳಬೇಕಾಗಿರುವ ಕಾರಣ ಮುಖ್ಯ ರಸ್ತೆಯಲ್ಲಿ ಅತೀ ವೇಗವಾಗಿ ಸಂಚರಿಸುವ ವಾಹನಗಳು ಅಪಘಾತಗಳಿಗೆ ಕಾರಣವಾಗುತ್ತಿವೆ.

3 ತಿಂಗಳಲ್ಲಿ 5 ಅಪಘಾತಗಳು

Advertisement

ಮೂರು ತಿಂಗಳಲ್ಲಿ ಇಲ್ಲಿ 5 ವಾಹನ ಅಪಘಾತಗಳು ನಡೆದಿದ್ದು, ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೆ ವಾಹನ ಸವಾರರು ಅಪಘಾತ ಭಯದಿಂದ ಸಂಚರಿಸುವಂತಾಗಿದೆ. ಇದೇ ರೀತಿ ಪುರುಷರಕಟ್ಟೆ ಹಾಗೂ ಗಡಿಪಿಲ ಎಂಬಲ್ಲಿ ರಸ್ತೆಗಳು ಎದುರು-ಬದುರು ಬರುವ ವಾಹನಗಳು ಚಾಲಕರಿಗೆ ಕಾಣದಂತೆ ಇದ್ದ ಅವೈಜ್ಞಾನಿಕ ಉಬ್ಬುಗಳನ್ನು ಸಮತಟ್ಟು ಮಾಡಿ ಸಮಸ್ಯೆಗಳನ್ನು ಲೋಕೋಪಯೋಗಿ ಇಲಾಖೆ ಕಳೆದ ವರ್ಷ ನಿವಾರಿಸಿತ್ತು. ಇದೇ ರೀತಿ ಭಕ್ತಕೋಡಿ ಹಾಗೂ ಮಾಂತೂರು ಅಂಬೇಡ್ಕರ್‌ ಭವನದ ಮುಂಭಾಗ ಇರುವ ಅವೈಜ್ಞಾನಿಕ ರಸ್ತೆಗಳ ದುರಸ್ತಿ ಶೀಘ್ರ ಗತಿಯಲ್ಲಿ ಮಾಡಲು ಇಲಾಖೆ ಮುಂದಾದರೆ ಸಾರ್ವಜನಿಕರ, ವಾಹನ ಸವಾರರ ನಿತ್ಯ ಸಂಕಷ್ಟಕ್ಕೆ ಪರಿಹಾರ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next