Advertisement

Mescom ವ್ಯಾಪ್ತಿಯಲ್ಲಿ 195 ಇವಿ ಚಾರ್ಜಿಂಗ್‌ ಕೇಂದ್ರ ಸ್ಥಾಪನೆ

01:17 AM Jun 19, 2023 | Team Udayavani |

ಮಂಗಳೂರು: ಎಲೆಕ್ಟ್ರಿಕ್‌ ವಾಹನಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವುಗಳ ಚಾರ್ಜಿಂಗ್‌ ಕೇಂದ್ರಗಳಿಗೂ ಬೇಡಿಕೆ ಏರುತ್ತಿದೆ. ಆದ್ದರಿಂದ ಮುಂದಿನ ಐದು ವರ್ಷಗಳಲ್ಲಿ 1 ಸಾವಿರ ಚಾರ್ಜಿಂಗ್‌ ಪಾಯಿಂಟ್‌ಗಳನ್ನು ನಿರ್ಮಿಸಲು ಮೆಸ್ಕಾಂ ಮುಂದಾಗಿದೆ. ಮೊದಲ ಹಂತದಲ್ಲಿ 195 ಕೇಂದ್ರಗಳನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆ.

Advertisement

ಕೇಂದ್ರಗಳ ನಿರ್ಮಾಣದ ಉಸ್ತುವಾರಿಯನ್ನು ರಾಜ್ಯದಲ್ಲಿ ಬೆಸ್ಕಾಂ ನೇರವಾಗಿ ವಹಿಸಿಕೊಂಡಿದ್ದು, ಮೆಸ್ಕಾಂ ವ್ಯಾಪ್ತಿಯ ದ.ಕ., ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ಗಳಲ್ಲಿ ಗುತ್ತಿಗೆಯನ್ನು ಬೆಂಗಳೂರು ಮೆಡಿಕಲ್‌ ಸಿಸ್ಟಂಸ್‌ ಕಂಪೆನಿಗೆ ನೀಡ ಲಾಗಿದೆ. ಉಡುಪಿ ಜಿಲ್ಲೆಯ ಟೆಂಡರ್‌ ಅನ್ನು ಇದು ವರೆಗೆ ಯಾರೂ ವಹಿಸಿಕೊಳ್ಳದ ಕಾರಣ ಇನ್ನೊಮ್ಮೆ ಟೆಂಡರ್‌ ಕರೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ಎಲೆಕ್ಟ್ರಿಕ್‌ ವಾಹನಗಳ ಚಾರ್ಜಿಂಗ್‌ ಅವಧಿ ಹೆಚ್ಚಿದ್ದು, ಆ ಅವಧಿಯಲ್ಲಿ ಚಾಲಕರ ವಿಶ್ರಾಂತಿ/ ವಿಹಾರಕ್ಕೆ ಪೂರಕ ಅವಕಾಶ ಇರುವಂತಹ ಸ್ಥಳಗಳಲ್ಲೇ ಕೇಂದ್ರ ನಿರ್ಮಿಸುವುದು ಸದ್ಯದ ಗುರಿ. ಮುಖ್ಯವಾಗಿ ಹೆದ್ದಾರಿ ಬದಿ ಮೆಸ್ಕಾಂನ ಜಮೀನು ಇರುವ 32 ಕಡೆಗಳಲ್ಲಿ, ಇತರ ಸರಕಾರಿ ಕಚೇರಿ ಆವರಣವಿರುವ 48 ಸ್ಥಳಗಳನ್ನು ಗುರುತಿಸಲಾಗಿದೆ. ಹೆದ್ದಾರಿ ಬಿಟ್ಟು ಉಳಿದಂತೆ ಮೆಸ್ಕಾಂ ಜಮೀನಿನಲ್ಲಿ 16 ಕಡೆ ಹಾಗೂ ಇತರ ಸರಕಾರಿ ಕಚೇರಿಗಳಿರುವ 75 ಕಡೆಗಳಲ್ಲಿಯೂ ಸ್ಥಳ ನಿಗದಿಪಡಿಸಿದೆ.

ಮೆಸ್ಕಾಂ ವ್ಯಾಪ್ತಿಯಲ್ಲಿವೆ
61 ಚಾರ್ಜಿಂಗ್‌ ಕೇಂದ್ರ
ಪ್ರಸ್ತುತ ಮೆಸ್ಕಾಂ 24 ಲಕ್ಷ ರೂ. ವೆಚ್ಚ ಮಾಡಿ 61 ಇವಿ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಸ್ಥಾಪಿಸಿದೆ. ದ.ಕ. ಜಿಲ್ಲೆಯಲ್ಲಿ 17 (ಮಂಗಳೂರಿನಲ್ಲಿ 3), ಉಡುಪಿಯಲ್ಲಿ 12, ಶಿವಮೊಗ್ಗ 17 ಹಾಗೂ ಚಿಕ್ಕ ಮಗಳೂರಿನಲ್ಲಿ 12 ಕಾರ್ಯ ವೆಸಗುತ್ತಿವೆ. ಇವೆಲ್ಲವೂ ಟೈಪ್‌-1 ಎಂದರೆ 3.3 ಕೆವಿ ಸಾಮರ್ಥ್ಯದ ಪಾಯಿಂಟ್‌ಗಳು. ಇಲ್ಲಿ ಆಟೊ, ದ್ವಿಚಕ್ರ ವಾಹನಗಳಷ್ಟೇ ಚಾರ್ಜ್‌ ಆಗುತ್ತವೆ. ಕಾರುಗಳಿಗೆ ಅಧಿಕ ಸಾಮರ್ಥ್ಯದ ಪಾಯಿಂಟ್‌ ಅಗತ್ಯವಾಗಿರುವುದರಿಂದ ಹೊಸ ದಾಗಿ ನಿರ್ಮಿ ಸುವ ಕೇಂದ್ರಗಳಲ್ಲಿ ಕಾರುಗಳನ್ನೂ ಚಾರ್ಜ್‌ ಮಾಡಲು ಅವಕಾಶವಿದೆ.

ಯೂನಿಟ್‌ಗೆ 50 ಪೈಸೆ ಇಳಿಕೆ
ಈ ಬಾರಿಯ ಹೊಸ ಶುಲ್ಕ ಪ್ರಕಟಿಸುವ ವೇಳೆ ಇವಿ ಚಾರ್ಜಿಂಗ್‌ ಶುಲ್ಕವನ್ನೂ 50 ಪೈಸೆ ಇಳಿಸಲಾಗಿದೆ. ಇದುವರೆಗೆ ಯುನಿಟ್‌ಗೆ 5 ರೂ. ವಿಧಿಸಲಾಗುತ್ತಿದ್ದರೆ ಪ್ರಸ್ತುತ 4.50 ರೂ. ಆಗಿದೆ. ಉಳಿದಂತೆ ಸೇವೆ, ಇತರ ಶುಲ್ಕ ಸೇರಿಕೊಂಡು ಒಂದು ಯುನಿಟ್‌ಗೆ 11 ರೂ.ನಷ್ಟು ವಿಧಿಸಲಾಗುತ್ತಿದೆ.

Advertisement

ಪರಿಸರ ಸ್ನೇಹಿ ವಾಹನಗಳಿಗೆ ಪ್ರೋತ್ಸಾಹ ನೀಡುವುದು ನಮ್ಮ ಆಶಯ. ಮುಂದಿನ ಐದು ವರ್ಷಗಳಲ್ಲಿ 1 ಸಾವಿರ ಚಾರ್ಜಿಂಗ್‌ ಸ್ಟೇಷನ್‌ ನಿರ್ಮಾಣದ ಗುರಿ ಹಾಕಿಕೊಂಡಿದ್ದು, ಹಂತ ಹಂತವಾಗಿ ಕೈಗೊಳ್ಳಲಿದ್ದೇವೆ.
– ಎಚ್‌.ಜಿ. ರಮೇಶ್‌,
ವ್ಯವಸ್ಥಾಪಕ ನಿರ್ದೇಶಕರು (ಪ್ರಭಾರ)

– ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next