Advertisement

ಸಾಗರೋತ್ಪನ್ನ ರಫ್ತು: ದೇಶದಲ್ಲಿ ಏರಿಕೆ; ರಾಜ್ಯದಲ್ಲಿ ಇಳಿಕೆ!

01:40 AM Jun 24, 2024 | Team Udayavani |

ಮಂಗಳೂರು: ದೇಶವು ಕಳೆದ ಆರ್ಥಿಕ ವರ್ಷದಲ್ಲಿ 17.81 ಲಕ್ಷ ಮೆಟ್ರಿಕ್‌ ಟನ್‌ ಸಾಗರೋತ್ಪನ್ನಗಳ ರಫ್ತಿನ ಮೂಲಕ ಏರಿಕೆ ದಾಖಲಿಸಿದ್ದರೆ, ರಾಜ್ಯದ ಸಾಗರೋತ್ಪನ್ನಗಳ ರಫ್ತಿನಲ್ಲಿ ಈ ಬಾರಿ ಇಳಿಕೆ ಕಂಡಿದೆ.

Advertisement

2022-23ರಲ್ಲಿ ರಾಜ್ಯದಿಂದ 3,12,347.18 ಟನ್‌ ಸಾಗರೋತ್ಪನ್ನಗಳು ರಫ್ತು ಆಗಿದ್ದರೆ, 2023-24ರಲ್ಲಿ ಇದು 3,01,183.43ಕ್ಕೆ ಇಳಿಕೆಯಾಗಿದೆ.

ಸಾಗರೋತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಕರ್ನಾಟಕ ಘಟಕದ ಅಂಕಿಅಂಶಗಳ ಪ್ರಕಾರ, ಈ ಬಾರಿಯ ರಫ್ತಿನಲ್ಲಿ ಸುಮಾರು ಶೇ. 3.57 ಪ್ರಮಾಣದಷ್ಟು ಇಳಿಕೆ ಕಂಡುಬಂದಿದೆ. ದಕ್ಷಿಣ ಕನ್ನಡ, ಉಡುಪಿ ಸಹಿತ ಕರಾವಳಿ ಭಾಗದಲ್ಲಿ ಮತ್ಸ್ಯಕ್ಷಾಮದ ಹಿನ್ನೆಲೆಯಲ್ಲಿ ಸಾಗರೋತ್ಪನ್ನಗಳಲ್ಲಿ ರಫ್ತು ಕಡಿಮೆ ಆಗಿದೆ ಎಂದು ವಿಶ್ಲೇಷಿಸಲಾಗಿದೆ.

ಈ ಬಾರಿ ರಾಜ್ಯದಿಂದ ರಫ್ತಾದ ಸಾಗರೋತ್ಪನ್ನಗಳ ಭಾರತೀಯ ಮೌಲ್ಯದಲ್ಲಿ ಮಾತ್ರ ಕೊಂಚ ಏರಿಕೆ ಕಾಣಲಾಗಿದೆ. ಕಳೆದ ವರ್ಷ ರಫ್ತಾದ ಸಾಗರೋತ್ಪನ್ನಗಳ ಮೌಲ್ಯ 4,73,722.95 ಲಕ್ಷ ರೂ.ಗಳಾಗಿದ್ದರೆ, 2023-24ನೇ ಸಾಲಿನಲ್ಲಿ ರಫ್ತಾದ ಸಾಗರೋತ್ಪನ್ನಗಳ ಮೌಲ್ಯ 4,78,504.60 ಲಕ್ಷ ರೂ.ಗಳಿಗೆ ಏರಿಕೆಯಾಗಿದೆ.

ರಾಜ್ಯದ ಸಾಗರೋತ್ಪನ್ನಗಳ ರಫ್ತಿನಲ್ಲಿ 2ನೆ ಅತಿ ದೊಡ್ಡ ಸಾಗರೋತ್ಪನ್ನವಾದ ಶೀತಲೀಕರಿಸಿದ ಮೀನುಗಳ ರಫ್ತಿನ ಪ್ರಮಾಣದಲ್ಲಿ ಶೇ. 20.34ರಷ್ಟು ಇಳಿಕೆಯಾಗಿದೆ. ಕಳೆದ ವರ್ಷ ಕರ್ನಾಟಕದಿಂದ 35,495.86 ಟನ್‌ ರಫ್ತಾಗಿದ್ದರೆ, ಈ ಬಾರಿ ಆ ಪ್ರಮಾಣ 27,241.99ಕ್ಕೆ ಕುಸಿದಿದೆ.

Advertisement

ಆದರೆ ಶೀತಲೀಕರಿಸಿದ ಸಿಗಡಿ ರಫ್ತಿನ ಪ್ರಮಾಣದಲ್ಲಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಳವಾಗಿದೆ. 2022-23ರಲ್ಲಿ 1,676.25 ಟನ್‌ ರಫ್ತಾಗಿದ್ದರೆ, ಈ ಬಾರಿ 2,431.70 ಟನ್‌ ಸಿಗಡಿ ರಾಜ್ಯದಿಂದ ರಫ್ತಾಗುವ ಮೂಲಕ ಶೇ. 45.07ರಷ್ಟು ಏರಿಕೆ ದಾಖಲಾಗಿದೆ. ಯುಎಸ್‌ಎ ಮತ್ತು ಚೀನದಲ್ಲಿ ಭಾರತದ ಶೀತಲೀಕರಿಸಿದ ಸಿಗಡಿಗೆ ಭಾರೀ ಬೇಡಿಕೆ ಇದ್ದ ಕಾರಣದಿಂದ ಇದರಲ್ಲಿ ಏರಿಕೆ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next