ತುಮಕೂರು: ನಗರ ಸೇರಿದಂತೆ ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ನೂರಾರು ಸ್ಟಾರ್ಟ್ ಅಪ್ ಕಂಪನಿ ಸ್ಥಾಪಿಸಿ ಒಂದೇ ಕಡೆ ಸ್ಟಾರ್ಟ್ ಅಪ್ ಇನ್ನೋವೇಷನ್ ಹಬ್ ಸ್ಥಾಪಿಸಲು ತುಮಕೂರು ಸ್ಮಾರ್ಟ್‌ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಸೂಚಿಸಿದರು.
ನಗರದ ಐಟಿ ಇಲಾಖೆಯ ಅಧಿಕಾರಿಗಳು ಮತ್ತು ಸ್ಮಾರ್ಟ್‌ಸಿಟಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಾಗಾರ ನಡೆಸಿ: ಕಳೆದ ಮುಂಗಡ ಪತ್ರದಲ್ಲಿ ರಾಜ್ಯ ಸರ್ಕಾರ 7 ಕೋಟಿ ರೂ. ಮೀಸಲಿಟ್ಟು ತುಮಕೂರಿನಲ್ಲಿ ಕೆ-ಟೆಕ್ ಇನ್ನೋವೇಷನ್ ಹಬ್ ಸ್ಥಾಪಿಸುವ ಸಂಬಂಧ ಮುಂದಿನ ಮೂರು ತಿಂಗಳಲ್ಲಿ ಕೆ-ಟೆಕ್ ಇನ್ನೋ ವೇಷನ್ ಹಬ್ ಸ್ಥಾಪನೆಯಾಗಲಿದೆ. ಸ್ಟಾರ್ಟ್ ಅಪ್ ಕಂಪನಿ ಸ್ಥಾಪಿಸಲು ಆಸಕ್ತ ಯುವ ಜನರಿಂದ ಅರ್ಜಿ ಆಹ್ವಾನಿಸಿ ಒಂದು ದಿನದ ಕಾರ್ಯಾಗಾರ ನಡೆಸಬೇಕು ಎಂದು ಶಾಸಕರು ಹೇಳಿದರು.
ಈ ಕಾರ್ಯಾಗಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಬಂಧಿಸಿದ ಎಲ್ಲಾ ಇಲಾಖೆಗಳು ಪಾಲ್ಗೊಂಡು ಯಾವ ಇಲಾಖೆಯಿಂದ ಯಾವ ಸೌಲಭ್ಯ ದೊರೆಯಲಿದೆ ಎಂಬ ಬಗ್ಗೆ ತಿಳಿಸಬೇಕು. ಕೂಡಲೇ ಈ ಕಾರ್ಯಾಗಾರ ಹಮ್ಮಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಉದ್ಯೋಗ ಸೃಷ್ಟಿಸಬೇಕಿದೆ: ಜಿಲ್ಲೆಯ ರೈತರು ಬೆಳೆಯುವ ಬೆಳೆಗಳಿಗೆ ಮೌಲ್ಯವರ್ಧಿತ ಬೆಲೆ ತರುವ ಇನ್ನೋವೇಷನ್ ಸ್ಟಾರ್ಟ್ ಅಪ್ ಕಂಪನಿ ಸ್ಥಾಪಿಸುವ ಮೂಲಕ ವಿನೂತನ ಯೋಜನೆ ಹಮ್ಮಿಕೊಳ್ಳಬೇಕು. ರೈತರ ಆದಾಯ 2022ರೊಳಗೆ ದುಪ್ಪಟ್ಟು ಮಾಡಲು ಮೋದಿ ಕರೆ ನೀಡಿದ್ದಾರೆ. ಸ್ಮಾರ್ಟ್ ಸಿಟಿಯಿಂದಲೂ ಉದ್ಯೋಗ ಸೃಷ್ಟಿಸಬೇಕಿದೆ ಎಂದರು.
ತುಮಕೂರು ಜಿಲ್ಲೆಯಲ್ಲಿರುವ ಎಲ್ಲಾ ಬ್ಯಾಂಕ್‌ಗಳು ಕನಿಷ್ಠ ಎರಡು ಸ್ಟಾರ್ಟ್ ಅಪ್ ಕಂಪನಿಗೆ ಸಾಲ ನೀಡಬೇಕು. ಕೆಐಡಿಬಿ ಮತ್ತು ಕೆಎಸ್‌ಎಸ್‌ಐಡಿಸಿ ಅಥವಾ ಖಾಸಗಿ ಕೈಗಾರಿಕಾ ವಸಾಹತುಗಳಲ್ಲಿ ಇನ್ನೋವೇಷನ್ ಹಬ್ ಸ್ಥಾಪಿಸಲು ಪೂರಕ ಕ್ರಮ ಕೈಗೊಳ್ಳುವ ಬಗ್ಗೆ ಎಲ್ಲಾ ಇಲಾಖೆಯ ಅಧಿಕಾರಿಗಳ ಸಭೆ ನಡೆಸಲು ಸೂಚಿಸಿದರು.
ಸ್ಟಾರ್ಟ್ ಅಪ್ ಕಂಪನಿ ಸ್ಥಾಪಿಸಲು ಇರುವ ಅವಕಾಶಗಳು ಸರ್ಕಾರದಿಂದ ದೊರೆಯುವ ಅನುದಾನದ ಬಗ್ಗೆ ಸತ್ಯನಾರಾಯಣ್ ವಿವರವಾಗಿ ತಿಳಿಸಿದರು. ಸ್ಮಾರ್ಟ್‌ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ, ಮುಖ್ಯ ಇಂಜಿನಿಯರ್ ಡಾ.ಶಾಂತ ರಾಜಣ್ಣ, ಕುಂದರನಹಳ್ಳಿ ರಮೇಶ್, ರಘೋತ್ತಮ ರಾವ್, ಚಂದ್ರಶೇಖರ್ ಇತರರು ಇದ್ದರು.