Advertisement

ತಂತ್ರಾಂಶದಲ್ಲಿ ಕಾಮಗಾರಿಗಳ ವಿವರ ಅಳವಡಿಸಿ

03:17 PM Aug 09, 2019 | Suhan S |

ಕೋಲಾರ: ಜಿಲ್ಲೆಯಲ್ಲಿ ಭೌತಿಕವಾಗಿ ಕಾಮಗಾರಿಗಳು ಪೂರ್ಣಗೊಂಡಿದ್ದರೂ ಅದರ ಮಾಹಿತಿಯನ್ನು ತಂತ್ರಾಂಶದಲ್ಲಿ ಅಳವಡಿಸಿಲ್ಲ. ಇದರಿಂದ ಡೆಪಾಸಿಟ್ ಹಣ ಗುತ್ತಿಗೆದಾರರಿಗೆ ನೀಡದೇ, ಆರ್ಥಿಕ ಪ್ರಗತಿ ಹಿನ್ನಡೆಯಾಗಿದೆ ಎಂದು ಯೋಜನೆ, ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯೀಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌ ತಿಳಿಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಭಿವೃದ್ಧಿ ಕಾಮಗಾರಿಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಾರದೊಳಗೆ ಪೂರ್ಣಗೊಂಡಿರುವ ಕಾಮಗಾರಿಗಳ ವಿವರವನ್ನು ತಂತ್ರಾಂಶದಲ್ಲಿ ಅಳವಡಿಸಿ ಡೆಪಾಸಿಟ್ ಹಣವನ್ನು ಸಂಬಂಧಿಸಿದವರಿಗೆ ನೀಡಲು ಕ್ರಮವಹಿಸುವಂತೆ ತಿಳಿಸಿದರು.

ಕಾಮಗಾರಿಗಳು ಪೂರ್ಣಗೊಂಡ ತಕ್ಷಣ ಆ ಕುರಿತು ವರದಿ ನೀಡಬೇಕು. ಇಲ್ಲದಿದ್ದರೆ ಶೇ.30 ಡೆಪಾಸಿಟ್ ಹಣ ಹಾಗೆಯೇ ಉಳಿಯುತ್ತದೆ. ಈ ರೀತಿ ಉಳಿಯುವುದರಿಂದ ಆರ್ಥಿಕ ಪ್ರಗತಿಗೆ ಅಡ್ಡಿಯಾಗುತ್ತದೆ ಎಂದರು.

ಕಾಮಗಾರಿಗಳ ಪ್ರಾರಂಭಿಸಿ: ಬರ ಪರಿಸ್ಥಿತಿ ಹಿನ್ನೆಲೆ ಜಿಲ್ಲೆಯ ಪ್ರತಿ ವಿಧಾನಸಭೆ ಶಾಸಕರಿಗೆ ಹಾಗೂ ವಿಧಾನಪರಿಷತ್‌ ಸದಸ್ಯರಿಗೆ ತಲಾ 50 ಲಕ್ಷ ರೂ. ಅನುದಾನದಂತೆ ಜಿಲ್ಲೆಗೆ ಒಟ್ಟು 4.5 ಕೋಟಿ ರೂ. ಅನುದಾನ ನೀಡಲಾಗಿದೆ. ಶಾಸಕರಿಂದ ಉಳಿದ ಕಾಮಗಾರಿಗಳಿಗೆ ಪತ್ರಗಳನ್ನು ಪಡೆದು ತಕ್ಷಣ ಆಡಳಿತಾತ್ಮಕ ಅನುಮೋದನೆ ನೀಡಿ ಕಾಮಗಾರಿಗಳನ್ನು ಪ್ರಾರಂಭಿಸಿ, 1 ತಿಂಗಳೊಳಗೆ ಕಾರ್ಯಾದೇಶ ನೀಡಿ 2 ರಿಂದ 3 ತಿಂಗಳೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ಎಂದು ಅಧಿಕಾರಿಗ‌ಳಿಗೆ ಸೂಚಿಸಿದರು.

ಮಣ್ಣು ಪರೀಕ್ಷಾ ಕೇಂದ್ರ ತೆರೆಯಿರಿ: ಕಾಮಗಾರಿಗಳನ್ನು ಪ್ರಾರಂಭಿಸಲು ಮಣ್ಣು ಪರೀಕ್ಷೆ ಮಾಡಿಸಲು ಎಂಜಿನಿಯರಿಂಗ್‌ ಕಾಲೇಜಿಗೆ ಕಳುಹಿಸುವುದರಿಂದ ವಿಳಂಬವಾಗುತ್ತಿವೆ. ಇದರ ಬದಲು 1.25 ಲಕ್ಷ ರೂ.ನಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿಯಲ್ಲಿ ಮಣ್ಣು ಪರೀಕ್ಷೆ ಕೇಂದ್ರಗಳನ್ನು ಸ್ಥಾಪಿಸಿಕೊಳ್ಳುವಂತೆ ಸಂಬಂಧಿಸಿದ ಎಂಜಿನಿಯರ್‌ಗಳಿಗೆ ಸೂಚಿ ಸಿದರು. ಬಯಲು ಸೀಮೆ ಪ್ರದೇಶಾಭಿವೃದ್ಧಿ ಯೋಜನೆಯಡಿ ನೀರಿನ ಸಂರಕ್ಷಣಾ ಕಾಮಗಾರಿಗಳು, ಚೆಕ್‌ಡ್ಯಾಂ ಗಳು, ಅಂತರ್ಜಲ ಅಭಿವೃದ್ಧಿ ಕಾಮಗಾರಿ ಗಳು, ಶಾಲೆ, ಅಂಗನವಾಡಿ ಹಾಗೂ ಆಸ್ಪತ್ರೆಯ ಕಟ್ಟಡಗಳ ಕಾಮಗಾರಿಗಳನ್ನು ಹೆಚ್ಚಾಗಿ ತೆಗೆದುಕೊಳ್ಳು ವಂತೆ ತಿಳಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ , ಜಿಪಂ ಸಿ ಇಒ ಜಿ.ಜಗದೀಶ್‌, ಎಡೀಸಿ ಎಚ್.ಪುಷ್ಪಲತಾ, ಎಸಿ ಸೋಮಶೇಖರ್‌, ಪಿಡಬ್ಲೂಡಿ ಎಂಜಿನಿಯರ್‌, ಗ್ರಾಮೀಣ ಕುಡಿಯುವ ನೀರು ಇಲಾಖೆ ಎಂಜಿನಿಯರ್‌, ತಹಶೀಲ್ದಾರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next