ಹುಕ್ಕೇರಿ: ಹುಕ್ಕೇರಿ ಹಾಗೂ ಸಂಕೇಶ್ವರ ಪಟ್ಟಣಗಳಲ್ಲಿ ಡಾ| ಬಾಬಾಸಾಹೇಬ ಅಂಬೇಡ್ಕರರ ಪ್ರತಿಮೆ ಸ್ಥಾಪಿಸಲು 15 ದಿನದೊಳಗೆ ನಿರ್ಣಯ ಕೈಗೊಳ್ಳುವಂತೆ ಡಾ|ಬಿ.ಆರ್. ಅಂಬೇಡ್ಕರ್ ಜನಜಾಗೃತಿ ವೇದಿಕೆ ಕಾರ್ಯಕರ್ತರು ಆಗ್ರಹಿಸಿದರು.
ಹುಕ್ಕೇರಿ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ರವಿವಾರ ಸಭೆ ನಡೆಸಿದ ವೇದಿಕೆಯ ಮುಖಂಡರು ಹಾಗೂ ಕಾರ್ಯಕರ್ತರು, ಒಂದು ವೇಳೆ ಈ ಕಾರ್ಯ ವಿಳಂಬವಾದರೆ ತಿಂಗಳಾಂತ್ಯದಲ್ಲಿ ಸಂಕೇಶ್ವರ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹುಕ್ಕೇರಿ ಮತ್ತು ಸಂಕೇಶ್ವರ ಪಟ್ಟಣಗಳಲ್ಲಿ ಡಾ| ಬಾಬಾಸಾಹೇಬ ಅಂಬೇಡ್ಕರ ಪ್ರತಿಮೆ ನಿರ್ಮಿಸಬೇಕೆಂದು ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದರೆ ಈ ಸಲ ಎರಡು ಪಟ್ಟಣಗಳಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲು ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡುವುದು ಅನಿವಾರ್ಯ ಎಂದು ಗುಡುಗಿದ್ದಾರೆ.
ಬಹುತೇಕ ಹಳ್ಳಿಗಳ ಪಜಾ-ಪಪಂ ಸಮುದಾಯಗಳಿಗೆ ಸ್ಮಶಾನ ಭೂಮಿ ಇಲ್ಲದಿರುವುದರಿಂದ ಅಂತ್ಯಕ್ರಿಯೆ ವೇಳೆ ಸಾಕಷ್ಟು ತೊಂದರೆಯಾಗುತ್ತಿದ್ದು ಅಂಥ ಹಳ್ಳಿಗಳಿಗೆ ಕೂಡಲೇ ಸ್ಮಶಾನ ಭೂಮಿ ಮಂಜೂರು ಮಾಡಬೇಕು. ತಾಲೂಕಿನ ವಿವಿಧ ಇಲಾಖೆಗಳ ಕಾಮಗಾರಿಗಳಲ್ಲಿ ಪಜಾ ಹಾಗೂ ಪಪಂ ಸಮುದಾಯದ ಗುತ್ತಿಗೆದಾರರಿಗೆ ಸರ್ಕಾರದ ನಿರ್ದೇಶನದಂತೆ ಕೆಲಸ ನೀಡಬೇಕು ಎಂದು ಆಗ್ರಹಿಸಿದರು.
ಆಂಧ್ರ ಪ್ರದೇಶದ ಸಿಎಂ ಜಗನ್ಮೋಹನ್ ರೆಡ್ಡಿ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆಯೊಂದಿಗೆ ಗೃಹ ಖಾತೆ ನೀಡಿರುವ ಕ್ರಮ ಸ್ವಾಗತಿಸಿದ ಕಾರ್ಯಕರ್ತರು, ಕರ್ನಾಟಕದಲ್ಲಿ ಬಿಜೆಪಿಯಿಂದ ಪಜಾ ಹಾಗೂ ಪಪಂ ಸಮುದಾಯದ 7 ಸಂಸದರು ಆಯ್ಕೆಯಾಗಿದ್ದಾರೆ. ಆದರೆ ನರೇಂದ್ರ ಮೋದಿ ಸರ್ಕಾರದಲ್ಲಿ ಈ ಸಮುದಾಯಗಳಿಗೆ ಸಚಿವ ಸ್ಥಾನ ನೀಡದಿರುವುದು ಖಂಡನೀಯ ಎಂದರು.
ಜಿಲ್ಲಾಧ್ಯಕ್ಷ ಉಮೇಶ ಭೀಮಗೋಳ ಅಧ್ಯಕ್ಷತೆ ವಹಿಸಿದ್ದರು. ಅಂಬೇಡ್ಕರ್ ಜನಜಾಗೃತಿ ವೇದಿಕೆಯ ಹುಕ್ಕೇರಿ ಬ್ಲಾಕ್ ಅಧ್ಯಕ್ಷರನ್ನಾಗಿ ಲಕ್ಷ್ಮಣ ಹೂಲಿ, ಸಂಕೇಶ್ವರ ಬ್ಲಾಕ್ ಅಧ್ಯಕ್ಷರನ್ನಾಗಿ ಪಿಂಟು ಸೂರ್ಯವಂಶಿ ಅವರನ್ನು ಆಯ್ಕೆ ಮಾಡಲಾಯಿತು.
ಪುರಸಭೆ ಸದಸ್ಯರಾದ ಜೀತು ಮರಡಿ, ಮಹಾಂತೇಶ ತಳವಾರ, ಬಸವರಾಜ ಕೋಳಿ, ಉದಯ ಹುಕ್ಕೇರಿ, ದಿಲೀಪ ಹೊಸಮನಿ, ಮಲ್ಲಿಕಾರ್ಜುನ ರಾಶಿಂಗೆ, ಪರಶುರಾಮ ತಳವಾರ, ಬಿ.ಕೆ. ಸದಾಶಿವ, ಅಪ್ಪಾಸಾಹೇಬ ಮೇಲಗಿರಿ, ಪ್ರಕಾಶ ಮೈಲಾಖೆ, ಮಾರುತಿ ತಳವಾರ, ಕಾಡೇಶ ಬಸಲಿಂಗಗೋಳ, ಕೆ.ವೆಂಕಟೇಶ, ಮಂಜು ಪಡದಾರ, ಸುಧಿಧೀರ ಹುಕ್ಕೇರಿ, ಲಗಮಣ್ಣ ಕಣಗಲಿ ಗೋಪಾಲ ತಳವಾರ ಇದ್ದರು.
ನ್ಯಾಯವಾದಿ ಆನಂದ ಕೆಳಗಡೆ ನಿರೂಪಿಸಿದರು. ಕೆಂಪಣ್ಣಾ ಶಿರಹಟ್ಟಿ ಸ್ವಾಗತಿಸಿದರು. ಸೋಮೇಶ ಜೀವಣ್ಣವರ ವಂದಿಸಿದರು.