Advertisement
ಇದುವರೆಗೆ ಸುಮಾರು 100ಕ್ಕೂ ಹೆಚ್ಚು ಮುಖ ಚಿತ್ರಗಳನ್ನು ಮಾಡಿದ್ದಾರೆ ಉಲ್ಲಾಸ್. ಅದರಲ್ಲಿ ಮುಖ್ಯವಾಗಿ ಪಟ್ಲ ಸತೀಶ್ ಶೆಟ್ಟಿ, ತಲೈವ ವಿಜಯ್, ಸಾಯಿ ಪಲ್ಲವಿ, ಎ.ಪಿ.ಜೆ. ಅಬ್ದುಲ್ ಕಲಾಂ ಹೀಗೆ ಹಲವು. ಅವರು ಬಿಡಿಸಿರುವ ಚಿತ್ರಕ್ಕೆ ಪಟ್ಲ ಸತೀಶ್ ಶೆಟ್ಟಿ ಅಭಿನಂದನೆಗಳನ್ನು ತಿಳಿಸಿದ್ದಾರೆ. ಇಷ್ಟೇ ಅಲ್ಲದೆ ಬಣ್ಣಗಳನ್ನು ಬಳಸಿ ಸುಂದರ ಚಿತ್ರಗಳನ್ನು ಬರೆಯುತ್ತಾರೆ. ಬರೆದ ಚಿತ್ರಗಳಲ್ಲಿ ಕೆಲವೊಂದನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಾಕುತ್ತಾರೆ. ಅವುಗಳಿಗೆ ಹಲವಾರು ಸ್ನೇಹಿತರು ಪ್ರತಿಕ್ರಿಯೆ ಹಾಗೂ ಸಲಹೆಗಳನ್ನು ನೀಡುತ್ತಾರೆ. ಆ ಸಲಹೆಗಳನ್ನು ಹಾಗೂ ಬೇರೆಯವರು ಬರೆದ ಚಿತ್ರಗಳನ್ನು ನೋಡಿ ತಮ್ಮ ತಪ್ಪನ್ನು ತಿದ್ದಿಕೊಂಡು ಕಲಿಕೆಯನ್ನು ಮುಂದುವರಿಸುತ್ತಿದ್ದಾರೆ.
ಇವೆಲ್ಲದರ ಜತೆಗೆ ತಮ್ಮನ್ನು ತಾವು ಕೃಷಿಯ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ. ಆದರಲ್ಲಿಯೂ ನರ್ಸರಿ, ಹೂವಿನ ಬೀಜ ಮೊದಲಾದವುಗಳನ್ನು ಬೆಳೆಸುವುದು ಹಾಗೂ ಸಂಗ್ರಹಿಸುವುದು ಇವರ ನೆಚ್ಚಿನ ಕೆಲಸ. ತಮ್ಮ ವಿದ್ಯಾರ್ಥಿ ಜೀವನದಲ್ಲೇ ಚಿತ್ರಕಲೆ ಹಾಗೂ ಕೃಷಿಯಿಂದ ಸಂಪಾದಿಸಿ ತಮ್ಮ ಕಾಲಮೇಲೆ ನಿಂತಿದ್ದಾರೆ ಉಲ್ಲಾಸ್. ಉಮೇಶ್ ಕೆ. ಪೆರ್ಲ ಹಾಗೂ ಹರಿಣಾಕ್ಷಿ ಬಿ. ಅವರ ಪುತ್ರ ಉಲ್ಲಾಸ್. ತಂದೆ, ತಾಯಿ ಇಬ್ಬರೂ ಶಾಲಾ ಶಿಕ್ಷಕರು ಹಾಗೂ ಕೃಷಿಯಲ್ಲೂ ಆಸಕ್ತಿಯನ್ನು ಹೊಂದಿದವರು. ಚಿಕ್ಕಂದಿನಿಂದಲೂ ತಂದೆಯ ಕೃಷಿ ಚಟುವಟಿಕೆಗಳನ್ನು ನೋಡುತ್ತಾ ಬೆಳೆದ ಉಲ್ಲಾಸ್ ಅವರಿಗೂ ಕೃಷಿಯತ್ತ ಆಸಕ್ತಿ ಹೆಚ್ಚಾಯಿತು. ತನ್ನ ಆಸಕ್ತಿ ಕೃಷಿ ಎಂದು ನಿರ್ಧರಿಸಿದ ಅವರು ಪ್ರಸ್ತುತ ಕಾರಡ್ಕRದ ಜಿ.ವಿ.ಎಚ್.ಎಸ್.ಎಸ್. ಕಾಲೇಜಿನಲ್ಲಿ ಕೃಷಿ (ಐ.ಜಿ.ಎ.) ವಿಷಯದಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾರೆ.
Related Articles
Advertisement
ಗ್ರಾಫಿಕ್ ವಿನ್ಯಾಸದಲ್ಲೂ ಆಸಕ್ತಿಚಿತ್ರಕಲೆಗೆ ಮಾತ್ರ ತನ್ನನ್ನು ತಾನು ಸೀಮಿತಗೊಳಿಸಿಕೊಳ್ಳದೆ ಡಿಜಿಟಲ್ ಪೈಂಟಿಂಗ್, ಟ್ಯುಟೋರಿಯಲ್ಸ್, ಗ್ರಾಫಿಕ್ ವಿನ್ಯಾಸಗಳಲ್ಲೂ ಆಸಕ್ತಿಯನ್ನು ಇರಿಸಿಕೊಂಡಿದ್ದಾರೆ. ಅದರೊಂದಿಗೆ ಹಲವಾರು ಆಯಾಮಗಳಲ್ಲಿ ನಿಸರ್ಗದ ಆಗು-ಹೋಗುಗಳನ್ನು ಫೋಟೋ ಮೂಲಕ ಸೆರೆ ಹಿಡಿಯುವುದು ಅವರ ಇಷ್ಟದ ಕೆಲಸ. ಬದಿಯಡ್ಕದ ಪಿ.ಕೆ. ಆನಂದ ಅವರ ಬಳಿ ಪರ್ಪಲ್ ಬೆಲ್ಟ್ ತನಕ ಕರಾಟೆಯನ್ನು ಕಲಿತಿದ್ದಾರೆ. ಅದರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 5ಕ್ಕಿಂತ ಹೆಚ್ಚು ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದಾರೆ. ಎನ್‌ಸಿಸಿಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
-ಮೇಘಾ ಆರ್. ಸಾನಾಡಿ
ವಿವೇಕಾನಂದ ಕಾಲೇಜು ಪುತ್ತೂರು