ನವದೆಹಲಿ: ಮೆಟಾ (Meta) ಮಾಲೀಕತ್ವದ ಇನ್ಸ್ಟಾಗ್ರಾಮ್ (Instagram) ಭಾರತದಾದ್ಯಂತ ಸರ್ವರ್ ಡೌನ್ ಆಗಿದೆ. ಹಲವಾರು
ಬಳಕೆದಾರರಿಗೆ ಮಂಗಳವಾರ (ಅ.8ರಂದು) ಮುಂಜಾನೆ 11:15 ರಿಂದ ಇನ್ಸ್ಟಾಗ್ರಾಮ್ ಉಪಯೋಗಿಸುವ ವೇಳೆ ಸರ್ವರ್ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಕ್ರೌಡ್-ಸೋರ್ಸ್ ಔಟೇಜ್ ಟ್ರ್ಯಾಕಿಂಗ್ ಸರ್ವೀಸ್ ʼಡೌನ್‌ಡೆಕ್ಟರ್ʼ ವರದಿ ತಿಳಿಸಿದೆ.
64% ಕ್ಕಿಂತ ಹೆಚ್ಚು ಬಳಕೆದಾರರು ಅಪ್ಲಿಕೇಶನ್ ಲಾಗ್ ಇನ್ ಮಾಡುವಲ್ಲಿ ಸಮಸ್ಯೆಯನ್ನು ಎದುರಿಸಿದ್ದಾರೆ. 24% ಬಳಕೆದಾರರು ಸರ್ವರ್ ಸಂಪರ್ಕ ಸಮಸ್ಯೆಗಳನ್ನು ಎದುರಿಸಿದ್ದಾರೆ ಎಂದು ಡೌನ್‌ಡೆಕ್ಟರ್ ಡೇಟಾ ತಿಳಿಸಿದೆ.
ಅನೇಕ ʼಎಕ್ಸ್ʼ ಬಳಕೆದಾರರು ಇನ್ಸ್ಟಾಗ್ರಾಮ್ ಡೌನ್ ಕುರಿತು ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ. ‘Something went wrongʼ ಎನ್ನುವ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಓಪನ್ ಮಾಡಿದ್ರೆ ಹಳೆಯ ಫೀಡ್ ಗಳೇ ಕಾಣಿಸುತ್ತಿದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಜೂನ್ ತಿಂಗಳಿನಲ್ಲಿ ಜಗತ್ತಿನೆಲ್ಲೆಡೆ ಮೆಟಾ ಒಡೆತನದ ಇನ್ಸ್ಟಾಗ್ರಾಮ್ ಸರ್ವರ್ ಸಮಸ್ಯೆ ಕಾಣಿಸಿಕೊಂಡಿತ್ತು.
ಸದ್ಯ ಈಗಿನ ಸರ್ವರ್ ಡೌನ್ ಸಮಸ್ಯೆಯನ್ನು ದೆಹಲಿ, ಜೈಪುರ, ಲಕ್ನೋ, ಮುಂಬೈ, ಅಹಮದಾಬಾದ್, ಕೋಲ್ಕತ್ತಾ, ಹೈದರಾಬಾದ್, ಬೆಂಗಳೂರು, ಚೆನ್ನೈ ಮುಂತಾದ ಕಡೆಗಳಲ್ಲಿನ ಬಳಕೆದಾರರು ಅನುಭವಿಸಿದ್ದಾರೆ.
ಮಧ್ಯಾಹ್ನ 12.02 ಗಂಟೆಯವರೆಗೆ 6,500ಕ್ಕೂ ಹೆಚ್ಚಿನ ಬಳಕೆದಾರರು ಭಾರತದಲ್ಲಿ ಇನ್ಸ್ಟಾ ಬಳಸಲು ಸಮಸ್ಯೆ ಎದುರಿಸಿದ್ದಾರೆ ಎಂದು ಡೌನ್‌ಡೆಕ್ಟರ್ ವರದಿ ತಿಳಿಸಿದೆ.