ವಾಷಿಂಗ್ಟನ್: ಇನ್ಸ್ ಸ್ಟಾಗ್ರಾಮ್ ಸಹ ಸಂಸ್ಥಾಪಕ ಸಿಇಒ ಕೇವಿನ್ ಸೈಸ್ಟೋಮ್ ಮತ್ತು ಸಿಟಿಒ(ಚೀಫ್ ಟೆಕ್ನಾಲಜಿ ಆಫೀಸರ್) ಮೈಕ್ ಕ್ರೈಗೆರ್ ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್ ಬುಕ್ ಸಂಸ್ಥೆಯಿಂದ ಹೊರನಡೆದಿದ್ದಾರೆ ಎಂದು ದ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ತಾವು ಫೇಸ್ ಬುಕ್ ಸಂಸ್ಥೆಯಿಂದ ನಿರ್ಗಮಿಸುತ್ತಿರುವುದಕ್ಕೆ ಯಾವುದೇ ಕಾರಣವನ್ನು ನೀಡಿಲ್ಲ. ಮಂಗಳವಾರ ತಾವು ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದು, ಕೆಲವೇ ವಾರಗಳಲ್ಲಿ ಕಂಪನಿಯಿಂದ ನಿರ್ಗಮಿಸಲಿದ್ದಾರೆ ಎಂದು ವರದಿ ವಿವರಿಸಿದೆ.
ಕಾರಣ ಏನು?
ಟೆಕ್ ಕ್ರಂಚ್ಸ್ ಮೂಲಗಳ ಪ್ರಕಾರ, ಫೇಸ್ ಬುಕ್ ಸ್ಥಾಪಕ, ಸಿಇಒ ಮಾರ್ಕ್ ಝುಕರ್ ಬರ್ಗ್ ಹಾಗೂ ಇನ್ಸ್ ಸ್ಟಾಗ್ರಾಮ್ ಸಹಸಂಸ್ಥಾಪಕ ಕೇವಿನ್ ನಡುವೆ ಜಟಾಪಟಿ ನಡೆಯುತ್ತಿತ್ತು ಎಂದು ವರದಿ ಹೇಳಿದೆ.
ಇನ್ಸ್ ಸ್ಟಾಗ್ರಾಮ್ ಹಾಗೂ ಫೇಸ್ ಬುಕ್ ನಡುವಿನ ವ್ಯವಹಾರದಲ್ಲಿ ಇನ್ಸ್ ಸ್ಟಾಗ್ರಾಮ್ ಸ್ವಾಯತ್ತತೆ ಬಗ್ಗೆ ದಿನದಿಂದ ದಿನಕ್ಕೆ ಅಸಮಾಧಾನ ಹೆಚ್ಚಾಗಿತ್ತು. 2012ರಲ್ಲಿ ಇನ್ಸ್ ಸ್ಟಾಗ್ರಾಮ್ ಅನ್ನು ಝುಕರ್ ಬರ್ಗ್ ಒಂದು ಶತಕೋಟಿ ಡಾಲರ್ ಗೆ ಖರೀದಿಸಿತ್ತು. ಅಲ್ಲದೇ ಈ ಸಂದರ್ಭದಲ್ ಇನ್ಸ್ ಸ್ಟಾಗ್ರಾಮ್ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಬಗ್ಗೆ ಒಪ್ಪಂದ ಕೂಡಾ ಮಾಡಿಕೊಂಡಿದ್ದರು ಎಂದು ವರದಿ ತಿಳಿಸಿದೆ.
ಇದೀಗ ಫೇಸ್ ಬುಕ್ ನ ಫೋಟೋ ಶೇರಿಂಗ್ ಆ್ಯಪ್ ನ ಸಿಟಿಒ ಮೈಕ್ ಕ್ರೈಗೆರ್ ಕೂಡಾ ರಾಜೀನಾಮೆ ನೀಡಿದ್ದಾರೆ. ಇಬ್ಬರ ರಾಜೀನಾಮೆ ಬಗ್ಗೆ ಫೇಸ್ ಬುಕ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಏತನ್ಮಧ್ಯೆ ತಾನು ಕಳೆದ ಆರು ವರ್ಷಗಳ ಕಾಲ ಇಬ್ಬರಿಂದಲೂ ಸಾಕಷ್ಟು ಕಲಿತಿದ್ದೇನೆ ಮತ್ತು ಖುಷಿಪಟ್ಟಿದ್ದೇನೆ ಎಂದು ಝುಗರ್ ಬರ್ಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.