ಚೆನ್ನೈ : ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ನಮಗೆ ತಿಳಿಯದ ಅದೆಷ್ಟೋ ಹಿಡನ್ ಸಮಸ್ಯೆಗಳಿರುತ್ತವೆ. ಇವುಗಳು ಬಳಕೆದಾರರ ಮಾಹಿತಿ ಸೋರಿಕೆಗೂ ಕಾರಣವಾಗುತ್ತದೆ. ಇಂತಹ ದೋಷವೊಂದನ್ನು ಪತ್ತೆ ಹಚ್ಚಿದ ಚೆನ್ನೈ ಟೆಕ್ಕಿಗೆ ಇದೀಗ ಭಾರೀ ಬಹುಮಾನ ಲಭಿಸಿದೆ.
ತಮಿಳುನಾಡಿನ ಲಕ್ಷ್ಮಣ್ ಮುತ್ತಯ್ಯ ಎಂಬ ಟೆಕ್ಕಿ ಇನ್ ಸ್ಟಾಗ್ರಾಂನಲ್ಲಿ ದೋಷವನ್ನು ಕಂಡುಹಿಡಿದ ವ್ಯಕ್ತಿ. ಇನ್ ಸ್ಟಾಗ್ರಾಂ ಲಾಗಿನ್ ನಲ್ಲಿ ಭಾರೀ ದೋಷವೊಂದನ್ನು ಪತ್ತೆ ಹಚ್ಚಿದ್ದು ಅದಕ್ಕಾಗಿ ಆತ ಪಡೆದ ಬಹುಮಾನದ ಮೊತ್ತ ಬರೋಬ್ಬರಿ 10,000 ಡಾಲರ್. (7,14,900 ರೂ.)
ಕಳೆದ ತಿಂಗಳು ಫೇಸ್ ಬುಕ್ ನಲ್ಲಿ ಕೂಡ ಇದೇ ರೀತಿಯ ದೋಷವೊಂದನ್ನು ಪತ್ತೆಹಚ್ಚಿದ್ದರು. ಇದಕ್ಕಾಗಿ ಫೇಸ್ ಬುಕ್ 30,000 ಡಾಲರ್ ಗಳನ್ನು (21,57, 060 ರೂ.) ಬಹುಮಾನದ ರೂಪವಾಗಿ ನೀಡಿತ್ತು.
ಲಾಗಿನ್ ದೋಷ ಹೇಗೆಂದರೆ ಇನ್ನೊಬ್ಬರ ಖಾತೆಯನ್ನು ಅವರ ಗಮನಕ್ಕೆ ಬಾರದಂತೆ ಹ್ಯಾಕ್ ಮಾಡಿ ಅದರಿಂದ ಖಾತೆಯ ಮಾಹಿತಿಯನ್ನು ಸಂಪೂರ್ಣವಾಗಿ ಕದಿಯಬಹುದಾಗಿತ್ತು. ಪಾಸ್ ವರ್ಡ್ ಬದಲಾಯಿಸಿದರೂ ಕೂಡ ಸುಲಭವಾಗಿ ಮಾಹಿತಿಗಳು ದೊರಕುತ್ತಿದ್ದವು. ಇದೇ ಮಾದರಿಯ ದೋಷವೊಂದನ್ನು ಕಳೆದ ತಿಂಗಳು ಕೂಡ ಪತ್ತೆಹಚ್ಚಿದ್ದರು.
ಈ ಬಗ್ಗೆ ಮಾಹಿತಿ ಸಂಗ್ರಹಿಸಿ ನೀಡಿದ್ದಕ್ಕೆ ಇನ್ ಸ್ಟಾಗ್ರಾಂ ಬಗ್ ಬೌಂಟಿ ಯೋಜನೆಯಡಿ ವಿಶೇಷ ಬಹುಮಾನ ನಿಡಲಾಗಿದೆ. ಅದರ ಜೊತೆಗೆ ಇನ್ ಸ್ಟಾಗ್ರಾಂ ಲಾಗಿನ್ ಸಮಸ್ಯೆಯನ್ನು ಕೂಡ ಸರಿಪಡಿಸಿಕೊಂಡಿದೆ.