Advertisement
ಬೆಳ್ತಂಗಡಿ: ಅಂದು 2012, ಆ. 15. ಯೋಧ ಕೃಷ್ಣಪ್ಪ ಗೌಡರ ಹುಟ್ಟೂರು, ಬೆಳ್ತಂಗಡಿಯ ಜನತೆ ಕಣ್ಣೀರು ಹಾಕಿದ್ದರು. ಅದರ ಮಧ್ಯೆಯೇ ದೇಶಕ್ಕಾಗಿ ಬಲಿದಾನಗೈದ ವೀರನಿಗೆ ಸಲಾಂ ಎಂದಿದ್ದರು! ಬೆಳ್ತಂಗಡಿ ತಾ. ಮಂಜೊಟ್ಟಿ ಸಮೀಪದ ನಡ ಗ್ರಾಮದ ಬಾಳಿಕೆ ಮನೆಯ ಚನನ ಗೌಡರ ಪುತ್ರ ಕೃಷ್ಣಪ್ಪ ಗೌಡ (30) ಭಾರತೀಯ ಭೂಸೇನೆಯ ವೀರ ಯೋಧ. 507ನೆಯ ಎಎಸ್‌ಸಿ ಬೆಟಾಲಿಯನ್‌ನ ನಾನ್ ಕಮಿಷನ್ಡ್ ಆಫೀಸರ್ ಆಗಿದ್ದವರು. ಫಿರೋಜ್‌ಪುರದಲ್ಲಿ ಸೇವಾನಿರತರಾಗಿದ್ದಾಗ ಶತ್ರುಗಳ ಹೊಂಚುದಾಳಿಗೆ ಮೃತಪಟ್ಟಿದ್ದರು.
ಸೇನೆಗೆ ಸೇರಬೇಕು, ದೇಶಸೇವೆ ಮಾಡಬೇಕು ಇದು ಕೃಷ್ಣಪ್ಪರಲ್ಲಿದ್ದ ನಿರಂತರ ತುಡಿತ. ನಡ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ವರೆಗೆ ವ್ಯಾಸಂಗ ಮಾಡಿದ ಅವರು ಸೇನೆ ಸೇರಬೇಕೆಂಬ ಹಂಬಲ ಇಟ್ಟುಕೊಂಡಿದ್ದರು. ಪಿಯು, ಪದವಿ ವಿದ್ಯಾಭ್ಯಾಸ ಬಳಿಕ ಅನೇಕ ಬಾರಿ ಸೇನಾ ರ್ಯಾಲಿಗೆ ಹೋದರೂ ಫಲಕಾರಿಯಾಗಲಿಲ್ಲ. ಆದರೆ ಛಲ ಬಿಡಲಿಲ್ಲ. ಕೊನೆಗೆ 2000ನೇ ಇಸವಿಗೆ ಕೊನೆಗೂ ಅವರ ಆಸೆ ಫಲಿಸಿತು. ಸೇನೆಗೆ ಸೇರಿದ ಬಳಿಕ ಮಹತ್ವದ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದರೂ ಅವರದನ್ನು ಹೇಳುತ್ತಿರಲಿಲ್ಲ. ಮನೆ ಮಂದಿ ಜತೆ ಹಂಚಿಕೊಳ್ಳುತ್ತಿರಲಿಲ್ಲ ಎನ್ನುತ್ತಾರೆ ಅವರ ಸಹೋದರ ಪ್ರಕಾಶ್. ಶ್ರೀನಗರ, ದಿಲ್ಲಿ, ಉತ್ತರಪ್ರದೇಶ ಮೊದಲಾದೆಡೆ ಸೇವೆ ಸಲ್ಲಿಸಿದ್ದ ಅವರು ದಕ್ಷಿಣ ಆಫ್ರಿಕಾದಲ್ಲೂ 6 ತಿಂಗಳ ಕಾಲ ಭಾರತೀಯ ಸೇನೆಯ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
Related Articles
ಕೃಷ್ಣಪ್ಪ ಅವರ ನಿಧನಾನಂತರ ಅವರ ಸಹೋದರ ಅವಿವಾಹಿತ ಪ್ರಕಾಶ್ ಅವರೇ ಕುಟುಂಬಕ್ಕೆ ಆಧಾರ. ಬಾಡಿಗೆ ವಾಹನ ಹೊಂದಿದ್ದು ಹೆತ್ತವರನ್ನು ಸಲಹುತ್ತಿದ್ದಾರೆ. ಒಂದಷ್ಟು ಪರಿಹಾರ ದೊರೆತಿದೆ. ಈಗ ಕುಟುಂಬಕ್ಕೆ ಆಧಾರ ಪ್ರಕಾಶ್ ವಾಹನದ ಬಾಡಿಗೆಯೇ ಆಗಿದೆ.
Advertisement
ಅಲ್ಲಿ ನಡೆದಿದ್ದೇನು? ಜವಾನರಾಗಿ ಭೂಸೇನೆಗೆ ಸೇರ್ಪಡೆಯಾಗಿದ್ದ ಕೃಷ್ಣಪ್ಪ ನಾನ್ ಕಮಿಷನ್ ಆಫೀಸರ್ ಆಗಿ ಭಡ್ತಿ ಹೊಂದಿದ್ದರು. ಮದುವೆಯಾಗಿ ಎರಡು ತಿಂಗಳಷ್ಟೇ ಆದ ಕಾರಣ ಆ. 18ರಿಂದ ಕೃಷ್ಣಪ್ಪ ಗೌಡರಿಗೆ ರಜೆಯೂ ಮಂಜೂರಾಗಿತ್ತು, ಸೇನಾ ವಸತಿ ಸೌಕರ್ಯವೂ ಮಂಜೂರಾಗಿತ್ತು. ಜಮ್ಮು ಮತ್ತು ಪಂಜಾಬ್ ರಾಜ್ಯಗಳ ಗಡಿ ಭಾಗದಲ್ಲಿ ಫಿರೋಜ್‌ಪುರದಲ್ಲಿ ಆ.12ರ ರಾತ್ರಿ ರಾತ್ರಿ ಪಾಳಿಗೆ ಅವರು ನಿಯೋಜಿತರಾಗಿದ್ದರು. ಆದರೆ ಬೆಳಗಾದರೂ ವಾಪಸ್ಸಾಗಿರಲಿಲ್ಲ. ಆ.13ರ ಮುಂಜಾನೆ ಹುಡುಕಾಟ ನಡೆದಿದ್ದು, ಶರೀರ ಪತ್ತೆಯಾಗಿತ್ತು. ಕುತ್ತಿಗೆಯಿಂದ ಕಿವಿವರೆಗೆ ಇರಿದ ಗಾಯ ಕಂಡುಬಂದಿತ್ತು. ದಾಳಿ ಅತಿ ಸಮೀಪದಿಂದ ನಡೆದಿದ್ದು ಖಚಿತವಾಗಿತ್ತು. ಹೊಂಚು ದಾಳಿಯ ಶಂಕೆ!
ಕೃಷ್ಣಪ್ಪ ಅವರನ್ನು ಪಾಕ್ ಸೈನಿಕರು ಕೊಂದಿದ್ದರು ಎಂದು ಆರಂಭದಲ್ಲಿ ನಂಬಲಾಗಿತ್ತು. ಆದರೆ ಈ ಭಾಗದಲ್ಲಿ ಸುಮಾರು 6 ಅಡಿ ಎತ್ತರ ಬೆಳೆಯುವ ಸರ್ಕಂಡ ಎಂಬ ಹುಲ್ಲು ಇದೆ. ಇದರಲ್ಲಿ ಅಡಗಿ ಕುಳಿತ ವೇಳೆ ವಿಷ ಮಿಶ್ರಿತ ಆಯುಧದ ಮೂಲಕ ಚುಚ್ಚಿ ಅಥವಾ ಸೈಲೆನ್ಸರ್ ಅಳವಡಿಸಿದ ಬಂದೂಕಿನ ಮೂಲಕ ಗುರಿಯಿಟ್ಟು ಇವರನ್ನು ಹೊಂಚು ದಾಳಿಯಲ್ಲಿ ಕೊಂದಿರುವ ಸಾಧ್ಯತೆಯಿದೆ ಎನ್ನಲಾಗಿತ್ತು. ಕತ್ತಲ ವೇಳೆ ಆದ್ದರಿಂದ ಇದು ಗಮನಕ್ಕೆ ಬಂದಿರಲಿಲ್ಲ.
– ಲಕ್ಷ್ಮೀ ಮಚ್ಚಿನ ►ಯೋಧ ನಮನ 1►ಕ್ಯಾಪ್ಟನ್ ರಾಧೇಶ್‌ಗೆ ಅಣ್ಣನೇ ಸ್ಫೂರ್ತಿ: //bit.ly/2noe3RR
► ಯೋಧ ನಮನ 2► ಕೈತುಂಬ ಸಂಬಳದ ಕೆಲಸಕ್ಕೇ ಗುಡ್‌ಬೈ!: //bit.ly/2ByAZCW ಈ ಸರಣಿಯ ಮೂಲ ಉದ್ದೇಶ ಯುವಜನರಲ್ಲಿ ಮತ್ತು ನಾಗರಿಕರಲ್ಲಿ ಸೇನೆ ಕುರಿತು ಅರಿವು ಹಾಗೂ ಸದಭಿಪ್ರಾಯ ಮೂಡಿಸುವುದು. ಅದರಲ್ಲೂ ಯುವಜನರಿಗೆ ಸ್ಫೂರ್ತಿ ತುಂಬುವುದು. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ಒಲವೂ ಸೇನೆಯ ಕಡೆಗೆ ಹೆಚ್ಚುತ್ತಿದೆ. ಯುವಜನರೂ ಹೆಚ್ಚಿನ ಒಲವು ತೋರುತ್ತಿದ್ದಾರೆ. ಆದ ಕಾರಣ, ನಮ್ಮ ಊರಿನ ಸೈನಿಕರನ್ನು ಎಲ್ಲರಿಗೂ ಪರಿಚಯಿಸುವುದು ಈ ಸರಣಿಯ ಧ್ಯೇಯ. ನಿಮ್ಮ ಊರಿನಲ್ಲೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವವರ ಬಗ್ಗೆ ಮಾಹಿತಿ ಇದ್ದರೆ ನಮ್ಮ ವಾಟ್ಸಪ್‌ಗೆ ತಿಳಿಸಬಹುದು. ಹೆಸರು, ಊರು ಹಾಗೂ ಸಂಪರ್ಕ ಸಂಖ್ಯೆ ಕಡ್ಡಾಯವಾಗಿ ನಮ್ಮೊಂದಿಗೆ ಹಂಚಿಕೊಳ್ಳಿ. ನಮ್ಮ ವಾಟ್ಸಪ್ ಸಂಖ್ಯೆ 7618774529