ಮೈಸೂರು: ಮನೋರಂಜನ್‌ನ ಪುಸ್ತಕ ಓದುವ ಹವ್ಯಾಸವೇ ಸಂಸತ್ ಭವನದಲ್ಲಿ ಕೋಲಾಹಲ ಎಬ್ಬಿಸಿ ದುಷ್ಕೃತ್ಯ ಮೆರೆಯಲು ಕಾರಣವಾಯಿತೆ ಎಂಬ ಅನುಮಾನ ಎಲ್ಲರಲ್ಲೂ ಮೂಡಿದೆ.
2014ರಲ್ಲಿ ಬಿಇ ಪದವಿ ಪಡೆದರೂ ಎಂಜಿನಿಯರ್ ವೃತ್ತಿಗೆ ಹೋಗದೇ, ಹೆಚ್ಚು ಹೆಚ್ಚು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡಿದ್ದ. ಅದರಲ್ಲೂ ದೇಶ, ವಿದೇಶಗಳ ಹೋರಾಟಗಾರರು, ಪಾತಕಿಗಳು, ದಾರ್ಶನಿಕರು, ಕ್ರಾಂತಿಕಾರಿಗಳ ಬಗ್ಗೆ ಹೆಚ್ಚು ಓದಿಕೊಂಡಿದ್ದ. ಕ್ರಾಂತಿಕಾರಿ ಚಿ ಗುವೆರಾ, ಪಾತಕಿ ದಾವೂದ್ ಇಬ್ರಾಹಿಂ ಬಗೆಗಿನ ದಾದಾಗಿರಿ ಟು ದುಬೈ ಹಾಗೂ ಇತರ ಪುಸ್ತಕಗಳಾದ ದಿ ಆರ್ಟ್ ವಾರ್, ವಾಟರ್ ವಾರ್, ಎದೆಗಾರಿಕೆ ಇಂತಹ ಪುಸ್ತಕಗಳನ್ನೇ ಹೆಚ್ಚು ಓದಿದ್ದಾನೆ. ಈ ಮೂಲಕ ಸಂಸತ್‌ನಲ್ಲಿ ಬುಧವಾರ ನಡೆದ ದಾಳಿಗೆ ಇದೇ ಮೂಲಕ ಕಾರಣ ಎನ್ನಲಾಗಿದೆ.
ಕಾದಂಬರಿ, ಸ್ವಾತಂತ್ರ್ಯ ಹೋರಾಟದ ಜತೆಗೆ ಅಪರಾಧ, ಹೋರಾಟದ ಕಥನಗಳನ್ನು ಓದಿಕೊಂಡಿದ್ದು, ಬೆಲೆ ಬಾಳುವ ಪುಸ್ತಕಗಳನ್ನೇ ಖರೀದಿಸಿದ್ದಾನೆ. ಇಂಗ್ಲೆಂಡ್, ಫ್ರಾನ್ಸ್, ಕೆನಡಾ, ಅಮೆರಿಕ ಮೂಲದ ಲೇಖಕರು ರಚಿಸಿರುವ ಸಾಕಷ್ಟು ಪುಸ್ತಕಗಳು ಆತನ ಮನೆಯಲ್ಲಿ ಪೊಲೀಸರಿಗೆ ಲಭ್ಯವಾಗಿವೆ.
ಪುಸ್ತಕ ಓದಿನಿಂದ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಆಗಬೇಕು ಎಂದು ಬಯಸುತ್ತಿದ್ದ ಮನೋರಂಜನ್, ಸಮಾಜ ಸೇವೆ ಮಾಡುವ ಆಸೆ ಇಟ್ಟುಕೊಂಡಿದ್ದ. ಆತ ಎಲ್ಲವನ್ನೂ ಯಾರ ಬಳಿಯೂ ಹಂಚಿಕೊಳ್ಳುತ್ತಿರಲಿಲ್ಲ. ಅವನು ಮನಸ್ಸಿನಲ್ಲಿ ಏನು ಯೋಚನೆ ಮಾಡುತ್ತಿದ್ದಾನೆ ಎಂಬುದೇ ತಿಳಿಯುತ್ತಿರಲಿಲ್ಲ ಎಂದು ಆತನನ್ನು ಹತ್ತಿರದಿಂದ ನೋಡಿದವರು ಪತ್ರಿಕೆಗೆ ತಿಳಿಸಿದ್ದಾರೆ.