ಹೊಸದಿಲ್ಲಿ : ಏಕೈಕ ಅತಿ ದೊಡ್ಡ ಪಕ್ಷಕ್ಕೆ ಸರಕಾರ ರಚಿಸುವ ಆಹ್ವಾನ ನೀಡಿರುವ ಕರ್ನಾಟಕ ರಾಜ್ಯಪಾಲರ ಮಾದರಿಯಿಂದ ಪ್ರೇರಿತರಾಗಿರುವ ಗೋವಾ, ಬಿಹಾರ ಮತ್ತು ಮಣಿಪುರದ ವಿರೋಧ ಪಕ್ಷ ನಾಯಕರು ತಮ್ಮ ಈಚಿನ ಚುನಾವಣೆಗಳಲ್ಲಿ ತಮ್ಮ ಪಕ್ಷ ಏಕೈದ ದೊಡ್ಡ ಪಕ್ಷವಾಗಿ ಮೂಡಿ ಬಂದಿದ್ದ ಕಾರಣ ತಮಗೆ ಸರಕಾರ ರಚಿಸುವುದಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ತಮ್ಮ ರಾಜ್ಯಗಳಲ್ಲಿನ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.
ಗೋವಾದಲ್ಲಿ
ವರದಿಗಳ ಪ್ರಕಾರ ಗೋವಾ ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನು ಭೇಟಿಯಾಗಿ ರಾಜ್ಯದಲ್ಲಿನ ಈಚಿನ ಚುನಾವಣೆಯಲ್ಲಿ ಏಕೈಕ ಬಹುದೊಡ್ಡ ಪಕ್ಷವಾಗಿ ಮೂಡಿ ಬಂದಿದ್ದ ತಮಗೆ ಸರಕಾರ ರಚಿಸುವುದಕ್ಕೆ ಅವಕಾಶ ನೀಡಬೇಕು; ತಾವು 7 ದಿನಗಳ ಒಳಗೆ ಸದನದಲ್ಲಿ ಬಹುಮತ ಸಾಬೀತು ಪಡಿಸುವೆವು ಎಂದು ಹೇಳುವ ಮನವಿಯನ್ನು ಗೋವೆಯ ಪ್ರಭಾರಿಯಾಗಿರುವ ಚೆಲ್ಲ ಕುಮಾರ್ ನೇತೃತ್ವದ 13 ಕಾಂಗ್ರೆಸ್ ನಾಯಕರು ರಾಜ್ಯಪಾಲೆ ಮೃದುಲಾ ಸಿನ್ಹಾ ಅವರಿಗೆ ಮನವಿ ಅರ್ಪಿಸಿದರು.
ಇದೇ ರೀತಿ ಬಿಹಾರದಲ್ಲಿ ಆರ್ ಜೆ ಡಿ ನಾಯಕ ತೇಜಸ್ವಿ ಯಾದವ್ ಅವರು ಕಾಂಗ್ರೆಸ್ ಸದಸ್ಯರು ಮತ್ತು ಸಿಪಿಐ-ಎಂಎಲ್ ಸದಸ್ಯರನ್ನು ಒಳಗೊಂಡ ನಿಯೋಗವನ್ನು ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರಲ್ಲಿಗೆ ಒಯ್ದು ತಮ್ಮ ಮೈತ್ರಿಕೂಟಕ್ಕೆ ಬಹುಮತ ಇರುವುದರಿಂದ ತಮಗೆ ಸರಕಾರ ರಚಿಸುವುದಕ್ಕೆ ಅವಕಾಶ ಕೊಡಬೇಕು ಎಂದು ಒತ್ತಾಯಿಸಿ ಮನವಿ ಅರ್ಪಿಸಿದರು.
ಬಿಹಾರದಲ್ಲಿ
ಬಿಹಾರದಲ್ಲಿ ಈಚೆಗೆ ನಡೆದಿದ್ದ ಚುನಾವಣೆಯಲ್ಲಿ ಆರ್ ಜೆ ಡಿ ಏಕೈಕ ದೊಡ್ಡ ಪಕ್ಷವಾಗಿ ಮೂಡಿ ಬಂದಿತ್ತು; ಆದುದರಿಂದ ತನ್ನ ಮೈತ್ರಿಕೂಟಕ್ಕೆ ಸರಕಾರ ರಚಿಸುವುದಕ್ಕೆ ಅವಕಾಶ ನೀಡಬೇಕು ಎಂದು ತೇಜಸ್ವಿ ಯಾದವ್ ಹೇಳಿದರು. ತಮಗಿರುವ ಬಹುಮತವನ್ನು ತಾವು 7 ದಿನಗಳ ಒಳಗೆ ಸದನದಲ್ಲಿ ಸಾಬೀತು ಪಡಿಸುವುದಾಗಿ ರಾಜ್ಯಪಾಲರಿಗೆ ಮನವರಿಕೆ ಮಾಡಿದರು.
ಮಣಿಪುರದಲ್ಲಿ
ಇದೇ ರೀತಿಯ ಇನ್ನೊಂದು ಬೆಳವಣಿಗೆಯಲ್ಲಿ ಮಣಿಪುರದ ಕಾಂಗ್ರೆಸ್ ಪಕ್ಷ ಮಣಿಪುರದ ಪ್ರಭಾರ ರಾಜ್ಯಪಾಲರಾಗಿರುವ ಜಗದೀಶ್ ಮುಖೀ ಅವರನ್ನು ಭೇಟಿಯಾಗಿ ಈಚಿನ ಮಣಿಪುರ ಚುನಾವಣೆಯಲ್ಲಿ ತಮ್ಮ ಪಕ್ಷ ಅತೀ ದೊಡ್ಡ ಪಕ್ಷವಾಗಿ ಮೂಡಿಬಂದಿರುವ ಕಾರಣ ತಮಗೆ ಸರಕಾರ ರಚಿಸುವುದಕ್ಕೆ ಅವಕಾಶ ಕೊಡಬೇಕು ಎಂಬ ಮನವಿಯನ್ನು ಅರ್ಪಿಸಿದರು.