ಉಡುಪಿ: ರಂಗಭೂಮಿಯಿಂದ ಪ್ರೇಕ್ಷಕರನ್ನು ನಗಿಸುವ ಜತೆಗೆ ಉತ್ತಮ ಪ್ರಜೆಗಳನ್ನಾಗಿ ರೂಪುಗೊಳಿಸುವ ಕೆಲಸ ನಡೆಯುತ್ತಿದೆ. ಮಕ್ಕಳಿಗೆ ಓದಿನ ಜತೆ ರಂಗಚಟುವಟಿಕೆಯಲ್ಲೂ ಭಾಗವಹಿಸಲು ಪ್ರೇರೇಪಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು ಹೇಳಿದರು.
ಸೋಮವಾರ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ರಂಗಭೂಮಿಯ ಆಶ್ರಯದಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ಆನಂದೋತ್ಸವ- 2019ರ ಸಮಾರೋಪದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಂಗಭೂಮಿಯ ರಂಗಚಟುವಟಿಕೆಗಳನ್ನು ವೀಕ್ಷಿಸುವಂತೆ ಮಕ್ಕಳನ್ನು ಪ್ರೇರೇಪಿಸಬೇಕು. ಈ ಮೂಲಕ ಕಲೆ ಉಳಿಸಿ, ಬೆಳೆಸಲು ಪ್ರೋತ್ಸಾಹಿಸಬೇಕು ಎಂದರು.
ನಿವೃತ್ತ ಉಪಅರಣ್ಯ ಸಂರಕ್ಷಣಾಧಿಕಾರಿ ರವಿರಾಜ ನಾರಾಯಣ ಮಾತನಾಡಿ, ಅಧಿಕ ಉಷ್ಣಾಂಶದಿಂದ ಪ್ರಾಣಿ-ಪಕ್ಷಿಗಳು ಇಂದು ಸಂಕಷ್ಟದಲ್ಲಿವೆ. ಪೋಲಾಗುವ ನೀರನ್ನು ಸಂರಕ್ಷಿಸುವ ಕೆಲಸ ಆಗಬೇಕು. ನೀರಿಗಾಗಿ ಯುದ್ಧ ನಡೆಯುವ ಮುನ್ನ ಎಚ್ಚೆತ್ತುಕೊಳ್ಳಬೇಕು ಎಂದರು.
ಸುಮನಸ ಕೊಡವೂರು ಅಧ್ಯಕ್ಷ ಪ್ರಕಾಶ್ ಕೊಡವೂರು, ರಂಗತಪಸ್ವಿ ಡಾ| ಎಚ್.ಶಾಂತಾರಾಮ್, ರಂಗಭೂಮಿ ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ, ವಿಜಯ ಬ್ಯಾಂಕ್ ನಿವೃತ್ತ ಎಜಿಎಂ ಕೆ.ಎಂ.ಶೇಖರ್ ಉಪಸ್ಥಿತರಿದ್ದರು.
ಪ್ರದೀಪ್‌ಚಂದ್ರ ಕುತ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಯಹೂದಿ ಹುಡುಗಿ ನಾಟಕ ಪ್ರದರ್ಶನ ಜರಗಿತು.