ಧಾರವಾಡ: ಛತ್ರಪತಿ ಶಿವಾಜಿಯನ್ನೇ ಯುದ್ಧದಲ್ಲಿ ಸೋಲಿಸಿದ ಬೆಳವಡಿ ಮಲ್ಲಮ್ಮ ಇಂದಿನ ಸಂಕಷ್ಟಗಳ ಸರಮಾಲೆ ಇರುವ ಸಮಾಜದ ಎಲ್ಲ ಮಹಿಳೆಯರಿಗೆ ಮಾದರಿಯಾಗಬೇಕು ಎಂದು ಡಾ|ರೇಣುಕಾ ಅಮಲಜರಿ ಅಭಿಪ್ರಾಯಪ್ಟಟರು.
ನಗರದಲ್ಲಿ ಚರಂತಿಮಠ ಗಾರ್ಡನ್‌ದಲ್ಲಿರುವ ಶ್ರೀ ಬನಶಂಕರಿ ಭವನದಲ್ಲಿ ಹಮ್ಮಿಕೊಂಡಿದ್ದ ವೀರರಾಣಿ ಬೆಳವಡಿ ಮಲ್ಲಮ್ಮನ 356 ನೇ ಜನ್ಮದಿನಾಚರಣೆ ಹಾಗೂ ಮಹಿಳಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಯುದ್ಧ ಮುಗಿಸಿ ಹೋಗುತ್ತಿದ್ದ ಶಿವಾಜಿಸೈನಿಕರು ಬೆಳವಡಿಯ ದೊರೆ ಈಶ್ವರಪ್ರಭುವನ್ನು ಕೊಂದಾಗ, ರಾಣಿ ಬೆಳವಡಿ ಮಲ್ಲಮ್ಮ ಅಂತಹ ಬಲಿಷ್ಠ ಶಿವಾಜಿ ಸೈನ್ಯದ ವಿರುದ್ಧ ಮಹಿಳಾ ಸೈನ್ಯ ಕಟ್ಟಿ ಹೋರಾಡುತ್ತಾಳೆ. ಕೊನೆಗೆ ತಮ್ಮ ತಪ್ಪಿನ ಅರಿವಾದ ಶಿವಾಜಿ ಮಹಾರಾಜ ಮಲ್ಲಮ್ಮಾಜಿಯ ಪಾದಕ್ಕೆ ಬಿದ್ದು ಕ್ಷಮೆ ಕೇಳುವ ಮೂಲಕ ಮಹಿಳೆಗೆ ಗೌರವ ಕೊಡುತ್ತಾನೆ.
ಇಂತಹ ಮನೋಭಾವ ಇಂದಿನ ಸಮಾಜದಲ್ಲೂ ಮುಂದುವರಿಯಬೇಕಿದೆಎಂದರು. ಕೆಲವು ದುಷ್ಟ ವಿಚಾರ ಹೊಂದಿರುವ ಸದಾಚಾರವಿಲ್ಲದ ವಿಕೃತ ಮನಸ್ಸುಗಳು ಮಾತ್ರ ದುರ್ಬಲ ಮಹಿಳೆಯರ ಮೇಲೆ ದೌರ್ಜನ್ಯ ಮಾಡುತ್ತಿವೆ. ಆದರೆ ಇತ್ತೀಚೆಗೆ ಮಹಿಳೆ ಕೂಡಸಿಡಿದೇಳುವ ಸ್ಥಿತಿ ತಲುಪಿದ್ದಾಳೆ.
ತನ್ನ ಮೇಲೆ ನಡೆಯುವ ದೌರ್ಜನ್ಯವನ್ನು ಖಂಡಿಸುವ ಹಾಗೂ ಎದುರಿಸಿ ಹೋರಾಟ ನಡೆಸುವ ಶಕ್ತಿ ಬಂದಿದೆ. ಬಸವಣ್ಣನವರು ಮಹಿಳೆಗೆ ಕೊಟ್ಟ ಸ್ತ್ರೀ ಸ್ವಾತಂತ್ರ್ಯದಿಂದ ಇಂದು ಅನೇಕ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ದಾಪುಗಾಲು ಹಾಕುತ್ತಿದ್ದಾರೆ. ವಿಶೇಷ ಸಾಧನೆ ಮಾಡುವಲ್ಲಿ ಮಹತ್ವದ ಪಾತ್ರ ನಿಭಾಯಿಸುತ್ತಿದ್ದಾರೆ.
ಹೀಗಾಗಿ ಮಹಿಳೆ ಅಬಲೆಎನ್ನುವ ಕಾಲ ಹೊರಟು ಹೋಗಿದೆ ಎಂದರು. ಶ್ರೀ ಬನಶಂಕರಿ ಸೇವಾ ಸಮಿತಿ ಅಧ್ಯಕ್ಷ ಶಿವಾನಂದ ಲೋಲೆನವರ ಅಧ್ಯಕ್ಷತೆ ವಹಿಸಿದ್ದರು.ಮುಖ್ಯಾಧ್ಯಾಪಕ ವೀರಣ್ಣ ಒಡ್ಡೀನ ಉಪನ್ಯಾಸ ನೀಡಿದರು.
ಲಿಂಗಾಯತ ಸಮಿತಿ ಕಾರ್ಯದರ್ಶಿ ಶಿವಾನಂದ ಶೆಟ್ಟೆಣ್ಣವರ, ಚಿಂತಕಿ ಸವಿತಾ ನಡಕಟ್ಟಿ, ಸುವರ್ಣ ಲೇಡಿಜ್ ಕ್ಲಬ್ ಕಾರ್ಯದರ್ಶಿ ಹೇಮಾಕ್ಷಿ ಕಿರೆಸೂರ, ಮಲ್ಲಿಕಾರ್ಜುನ ಪಳ್ಳೋಟಿ ಇದ್ದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ರೀಮತಿ ರಾಜೇಶ್ವರಿ ತುಂಬರಗುದ್ದಿ, ಲತಾ ಮಂಟಾ, ಶಶಿಕಲಾ ಕೋಳಕೂರ, ತೇಜಸ್ವಿನಿ ಗುರಪ್ಪನವರ, ಲೀಲಾವತಿ ಅಂಕಲಿ ಅವರನ್ನು ಸನ್ಮಾನಿಸಲಾಯಿತು. ಸವಿತಾ ಅಮರಶೆಟ್ಟಿ ನಿರೂಪಿಸಿ, ಸ್ವಾಗತಿಸಿದರು. ಶಿವಕುಮಾರ ಪಾಟೀಲ ವಂದಿಸಿದರು.