ಗೋಕಾಕ: ತಂತ್ರಜ್ಞಾನ ಯುಗದಲ್ಲಿ ನಶಿಸುತ್ತಿರುವ ಜಾನಪದ ಕಲೆ ಉಳಿಸಿ-ಬೆಳೆಸುವ ದಿಸೆಯಲ್ಲಿ ಸತೀಶ ಜಾರಕಿಹೊಳಿ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಸತೀಶ ಶುಗರ್ ಅವಾರ್ಡ್ಸ್ ವೇದಿಕೆ ಪ್ರೇರಣಾತ್ಮಕ ಕೆಲಸ ಮಾಡುತ್ತಿದೆ ಎಂದು ಚಿಕ್ಕೋಡಿ ಡಿಡಿಪಿಐ ಗಜಾನನ ಮನ್ನಿಕೇರಿ ಹೇಳಿದರು.
ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಶನಿವಾರ ಆರಂಭಗೊಂಡ ಸತೀಶ ಜಾರಕಿಹೊಳಿ ಫೌಂಡೇಶನ್ ಪ್ರಾಯೋಜಕತ್ವದಲ್ಲಿ 19ನೇ ಸತೀಶ ಶುಗರ್ ಅವಾರ್ಡ್ಸ್ ಅಂತಿಮ ಹಂತದ ಸಾಂಸ್ಕೃತಿಕ ಸ್ಪರ್ಧೆಗಳ ಎರಡು ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಕಲಾ ಪ್ರತಿಭೆ ಗುರುತಿಸುವ ಉದ್ದೇಶದಿಂದ ಕಳೆದ 19 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸತೀಶ ಶುಗರ್ ಅವಾರ್ಡ್ಸ್ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮ ವಿದ್ಯಾರ್ಥಿ ಸಮುದಾಯಕ್ಕೆ ಪ್ರೇರಣೆಯಾಗಿದೆ ಎಂದರು. ಶಾಸಕ ಸತೀಶ ಜಾರಕಿಹೊಳಿ ರಾಜಕಾರಣಿಯಾಗಿದ್ದರೂ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಕ್ರೀಡೆ, ಔದ್ಯೋಗಿಕ ಹಾಗೂ ಕೃಷಿ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸುವ ಜೊತೆಗೆ ವಿದ್ಯಾರ್ಥಿ ಸಮುದಾಯದ ಸಂಜೀವಿನಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಈ ಸಾಂಸ್ಕೃತಿಕ ವೇದಿಕೆಯಿಂದ ಸಾವಿರಾರು ವಿದ್ಯಾರ್ಥಿಗಳು ರಾಜ್ಯ- ರಾಷ್ಟ್ರ ಮಟ್ಟದಲ್ಲಿ ಪ್ರತಿಭೆ ಅನಾವರಣಗೊಳಿಸಿ ಛಾಪು ಮೂಡಿಸಿದ್ದಾರೆ. ಈ ಕಾರ್ಯಕ್ರಮ ವಿದ್ಯಾರ್ಥಿಗಳಿಂದ ಉದ್ಘಾಟನೆ ಮಾಡುತ್ತಿರುವುದು ಶಾಸಕ ಸತೀಶ ಜಾರಕಿಹೊಳಿ ಅವರಿಗೆ ವಿದ್ಯಾರ್ಥಿಗಳ ಮೇಲಿರುವ ಪ್ರೇಮವೇ ಕಾರಣ ಎಂದರು.
ಕಳೆದ ಸಾಲಿನ ಸತೀಶ ಶುಗರ್ ಅವಾರ್ಡ್ಸ್ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರಾಥಮಿಕ ಶಾಲಾ ವಿಭಾಗದ ಸಂಜನಾ ಗಾನೂರ ಸಮಾರಂಭವನ್ನು ಉದ್ಘಾಟಿಸಿದರು. ಈ ವೇಳೆ ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ, ಎ.ಎಸ್. ಜೋಡಗೇರಿ, ಎನ್.ಎಸ್. ಎಫ್. ಕಾರ್ಯದರ್ಶಿ ಎಸ್.ಎ. ರಾಮಗಾನಟ್ಟಿ, ಕಳೆದ ಸಾಲಿನ ವಿವಿಧ ಸ್ಪರ್ಧೆಗಳಲ್ಲಿ ವಿಜೇತಗೊಂಡ
ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ರಕ್ಷಿತಾ ಮಿರ್ಜಿ, ಪವಿತ್ರಾ ಹತ್ತರವಾಟ, ಆರತಿ ಐದುಡ್ಡಿ, ಸುಜಾನ ನದಾಫ, ಗೋಪಾಲ ದರೂರ, ನಿರಂಜನ ಕನಮಡ್ಡಿ, ಮನೋಜ ಗಂಡವ್ವಗೋಳ ಇದ್ದರು.
ನಂತರ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಜಾನಪದ ಗಾಯನ, ಸೋಲೋ ಡ್ಯಾನ್ಸ್, ಸಮೂಹ ನೃತ್ಯ ನಡೆದವು. ಎ.ಜಿ. ಕೋಳಿ ಸ್ವಾಗತಿಸಿದರು. ಆರ್.ಎಲ್. ಮಿರ್ಜಿ ನಿರೂಪಿಸಿದರು. ಟಿ.ಬಿ. ಬಿಲ್ಲ ವಂದಿಸಿದರು.