Advertisement

ಸಮಾಜಕ್ಕೆ ಸ್ಫೂರ್ತಿದಾಯಕ ಕಾರ್ಯ: ನ್ಯಾ|ವಿಶ್ವನಾಥ ಶೆಟ್ಟಿ

08:02 PM Jun 08, 2019 | mahesh |

ವೇಣೂರು : ಉತ್ತಮ ವಾತಾವರಣದಿಂದ ಮಾತ್ರ ಮಗುವಿನ ಜ್ಞಾನ ಮತ್ತು ತಿಳಿವಳಿಕೆ ವೃದ್ಧಿ ಸಾಧ್ಯ. ಶಿಕ್ಷಣಕ್ಕೆ ಪ್ರೋತ್ಸಾಹ ಮತ್ತು ಸಮಾಜಕ್ಕೆ ಆರೋಗ್ಯ ಸೇವೆ ನೀಡಿದಾಗ ಸರಕಾರಕ್ಕೆ ಸಹಕಾರ ಮಾಡಿದಂತಾಗುತ್ತದೆ. ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದಂತಾಗುತ್ತದೆ. ಇಂತಹ ಕಾರ್ಯ ಸಮಾಜಕ್ಕೆ ಸ್ಫೂರ್ತಿದಾಯಕ ವಾದದ್ದು ಎಂದು ಕರ್ನಾಟಕ ಲೋಕಾಯುಕ್ತ ನ್ಯಾ| ಪಿ. ವಿಶ್ವನಾಥ ಶೆಟ್ಟಿ ಹೇಳಿದರು.

Advertisement

ಬೆಳ್ತಂಗಡಿ ತಾ|ನ ಅಳದಂಗಡಿ ಶ್ರೀ ಸತ್ಯದೇವತೆ (ಕಲ್ಲುರ್ಟಿ) ದೈವಸ್ಥಾನದ ವತಿಯಿಂದ ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದ ರಾಜಾಂಗಣದಲ್ಲಿ ಶನಿವಾರ ಜರಗಿದ 15ನೇ ವರ್ಷದ 4,500ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಯೋಧರ ಸಮ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಸಮಾಜದ ಒಳಿತು, ಉದ್ಧಾರ ಹಾಗೂ ಶ್ರೇಯಸ್ಸನ್ನು ಅಪೇಕ್ಷಿಸಿ ಆಯೋಜಿಸಿದ ಕಾರ್ಯಕ್ರಮ ಇದಾಗಿದೆ. ಇಂತಹ ಕಾರ್ಯಕ್ರಮ ನನಗೆ ಪ್ರಿಯವಾದದ್ದು ಎಂದರು.

ರಾಜ್ಯ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಜಸ್ಟೀಸ್‌ ಅಜಿತ್‌ ಜೆ. ಗುಂಜಾಲ್‌ ಪ್ರತಿಭಾ ಪುರಸ್ಕಾರ ವಿತರಿಸಿ ಶುಭ ಹಾರೈಸಿದರು. ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ| ಪದ್ಮಪ್ರಸಾದ ಅಜಿಲರು ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಮಾತನಾಡಿ, ಸಾವಿರಾರು ಮಂದಿ ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕನ್ನು ಕರುಣಿಸುವ ಇಂತಹ ಕಾರ್ಯ ಶ್ರೇಷ್ಠವಾದದ್ದು ಎಂದರು. ವಿಧಾನಸಭಾ ಪರಿಷತ್‌ ಸದಸ್ಯ ಕೆ. ಹರೀಶ್‌ ಕುಮಾರ್‌ ಮಾತನಾಡಿದರು.

ಸಮ್ಮಾನ
ಲೋಕಾಯುಕ್ತ ನ್ಯಾ| ಪಿ. ವಿಶ್ವನಾಥ ಶೆಟ್ಟಿ, ವಿಶ್ರಾಂತ ನ್ಯಾ| ಜಸ್ಟೀಸ್‌ ಅಜಿತ್‌ ಜೆ. ಗುಂಜಾಲ್‌, ಯೋಧರಾದ ಮೋಹನ ಕುಲಾಲ್‌, ಹರಿಶ್ಚಂದ್ರ, ಹರ್ಷಿತ್‌ ಕೆ., ಕಳೆದ ಎಸೆಸೆಲ್ಸಿಯಲ್ಲಿ ರಾಜ್ಯದಲ್ಲಿ 4ನೇ ಸ್ಥಾನ ಪಡೆದ ಜ್ಯೋತಿಕಾ ಎನ್‌. ಪೂಜಾರಿ ಅವರನ್ನು ಸಮ್ಮಾನಿಸಲಾಯಿತು. ಸಮ್ಮಾನಪತ್ರವನ್ನು ಪಿ.ಎಚ್‌. ನಿತ್ಯಾನಂದ ಶೆಟ್ಟಿ ವಾಚಿಸಿದರು. ಯೋಧ ಮೋಹನ ಕುಲಾಲ್‌ ಅನಿಸಿಕೆ ವ್ಯಕ್ತಪಡಿಸಿದರು. ಪ್ರತಿಭಾ ಪುರಸ್ಕಾರ ಹಾಗೂ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ವಿಜಯಕುಮಾರ್‌ ಜೈನ್‌ ನಿರ್ವಹಿಸಿದರು.

ವಿದ್ಯಾರ್ಥಿವೇತನ-ಅಕ್ಕಿ ವಿತರಣೆ
ವೇಣೂರು ನವಚೇತನ ವಿಶೇಷ ಶಾಲೆಯ ಮಕ್ಕಳಿಗೆ ಸಮವಸ್ತ್ರ ವಿತರಣೆ ಹಾಗೂ ಗುಂಡೂರಿ ವೃದ್ಧಾಶ್ರಮಕ್ಕೆ ಒಂದೂವರೆ ಕ್ವಿಂಟಾಲ್‌ ಅಕ್ಕಿಯ ಖರೀದಿಪತ್ರ ಹಸ್ತಾಂತರ ಮಾಡಲಾಯಿತು. ಹಿಂದೂ ಯುವಶಕ್ತಿ ಆಲಡ್ಕ ಇದರ ವತಿಯಿಂದ ಮೂವರು ವಿಶೇಷ ಸಾಮರ್ಥ್ಯದ ಮಕ್ಕಳಿಗೆ ತಲಾ ರೂ. 10,000ದಂತೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಸಂಪತ್‌ ಜೈನ್‌ ನೂರಳ್‌ಬೆಟ್ಟು ಸಂಪಾದಕತ್ವದಲ್ಲಿ ನಿರ್ಮಿಸಲಾದ ಬೆಳ್ತಂಗಡಿ ತಾ|ನ ಮಾಹಿತಿ ಕೈಪಿಡಿ ಪುಸ್ತಕವನ್ನು ಡಾ| ಪದ್ಮಪ್ರಸಾದ ಅಜಿಲರು ಬಿಡುಗಡೆಗೊಳಿಸಿದರು.

Advertisement

ಬೆಂಗಳೂರು ತುಳುಕೂಟದ ಅಧ್ಯಕ್ಷ ದಿನೇಶ್‌ ಹೆಗ್ಡೆ, ಬೆಂಗಳೂರಿನ ಉದ್ಯಮಿ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಅಳದಂಗಡಿ ಗ್ರಾ.ಪಂ. ಅಧ್ಯಕ್ಷ ಸತೀಶ್‌ ಕುಮಾರ್‌ ಮಿತ್ತಮಾರು, ತಾ.ಪಂ. ಸದಸ್ಯ ಸುಧೀರ್‌ ಆರ್‌. ಸುವರ್ಣ ಉಪಸ್ಥಿತರಿದ್ದರು. ಅಳದಂಗಡಿ ಶ್ರೀ ಸತ್ಯದೇವತೆ ದೈವಸ್ಥಾನದ ಆಡಳಿತದಾರ, ಕಾರ್ಯಕ್ರಮದ ಪ್ರಮುಖ ಆಯೋಜಕರಾದ ಶಿವಪ್ರಸಾದ ಅಜಿಲರು ಪ್ರಸ್ತಾವಿಸಿ, ಸ್ವಾಗತಿಸಿದರು. ಶಿಕ್ಷಕ ಅಜಿತ್‌ ಕುಮಾರ್‌ ಜೈನ್‌ ಕಾರ್ಯಕ್ರಮ ನಿರ್ವಹಿಸಿ, ಎ. ಮೋಹನದಾಸ್‌ ವಂದಿಸಿದರು.

 ಪ್ರತಿಷ್ಠಿತ ಸ್ಥಾನದ ಅವಕಾಶ‌
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶ ನಡೆಯುತ್ತಿದೆ. ಹೆಣ್ಣು-ಗಂಡು ಭೇದವಿಲ್ಲದೆ ಪ್ರತಿಷ್ಠಿತ ಸ್ಥಾನ ಅಲಂಕರಿಸುವ ಅವಕಾಶ ನಮ್ಮಲ್ಲಿದೆ. ಸಮಾಜದ ಸಹಕಾರ ಮತ್ತು ಕೊಡುಗೆಯನ್ನು ಪಡೆದುಕೊಂಡು ಇಂತಹ ಸ್ಥಾನಕ್ಕೇರಲು ವಿದ್ಯಾರ್ಥಿಗಳು ಶ್ರಮಪಡಬೇಕು.
– ನ್ಯಾ| ಪಿ. ವಿಶ್ವನಾಥ ಶೆಟ್ಟಿ, ರಾಜ್ಯ ಲೋಕಾಯುಕ್ತರು

Advertisement

Udayavani is now on Telegram. Click here to join our channel and stay updated with the latest news.

Next