Advertisement
ಘಟನೆ 1ವಿವೇಕಾನಂದರು ಒಮ್ಮೆ ಬನಾರಸ್‌ನ ದೇವಾಲಯಕ್ಕೆ ಭೆಟಿ ನೀಡಿದ್ದರು. ದೇವರ ದರುಶನ ಮುಗಿಸಿ ಹಿಂದಿರುಗುವಾಗ ಮಂಗವೊಂದು ಅವರ ಬೆನ್ನುಬಿದ್ದು ಪೀಡಿಸಲು ಆರಂಭಿಸಿತು. ಇದರಿಂದ ಕೊಂಚ ಗಲಿಬಿಲಿಗೆ ಒಳಗಾದ ಇವರು ತುಸು ಜೋರಾಗಿ ನಡೆಯಲು ಆರಂಭಿಸಿದರು. ಆದರೂ ಅಷ್ಟೇ ವೇಗವಾಗಿ ಇವರನ್ನು ಆ ಮಂಗ ಹಿಂಬಾಲಿಸುತ್ತಿತ್ತು. ಇವೆಲ್ಲವನ್ನೂ ಅಲ್ಲೇ ಸನಿಹ ನಿಂತಿದ್ದ ಸನ್ಯಾಸಿಯೋರ್ವರು ಗಮನಿಸುತ್ತಿದ್ದರು. ಕೂಡಲೇ ಅವರು ವಿವೇಕಾನಂದರಲ್ಲಿ ಹೇಳಿದರು. ನೀವೇಕೆ ಹೆದರಿ ಓಡುತ್ತಿದ್ದೀರಿ. ನಿಂತಲ್ಲೆ ನಿಲ್ಲಿ. ಮಂಗವನ್ನು ದಿಟ್ಟವಾಗಿ ಎದುರಿಸಿ ಅದರತ್ತಲೇ ಒಂದು ಹೆಜ್ಜೆ ಮುಂದಿಡಿ ಎಂದು. ವಿವೇಕಾನಂದರು ಹಾಗೆ ಮಾಡಿದ್ದೇ ತಡ ಮಂಗ ಸದ್ದಿಲ್ಲದೆ ಓಡಿ ಹೋಯಿತು. ನಮ್ಮನ್ನು ಹೆದರಿಸುವವರು ಅನೇಕರಿರುತ್ತಾರೆ. ಧೈರ್ಯದಿಂದ ಅವರನ್ನು ಎದುರಿಸಿದಾಗ ಮಾತ್ರ ನಾವು ಸುಖವಾಗಿ ಬದುಕಲು ಸಾಧ್ಯ ಎಂಬುದು ಈ ಸಂದರ್ಭ ವಿವೇಕಾನಂದರಿಗೆ ಅರಿವಾಯಿತಂತೆ.
ವಿವೇಕಾನಂದರ ಮಾತಿನ ಮೋಡಿಗೆ ಮರುಳಾಗದವರೇ ಇಲ್ಲ. ಇವರಿಂದ ಬಹಳ ಪ್ರಭಾವಿತರಾಗಿದ್ದ ವಿದೇಶಿ ಮಹಿಳೆಯೋರ್ವರು ಒಮ್ಮೆ ವಿವೇಕಾನಂದರ ಬಳಿ ಬಂದು ನನ್ನನ್ನು ನೀವು ಮದುವೆಯಾಗಿ. ನಿಮಂತೆಯೇ ಜ್ಞಾನವಂತನಾದ ಮಗುವನ್ನು ನಾನು ಪಡೆಯಬೇಕು ಎಂದರಂತೆ. ಇದಕ್ಕೆ ಉತ್ತರಿಸಿದ ವಿವೇಕಾನಂದರು ನಾನೋರ್ವ ಸನ್ಯಾಸಿಯಾಗಿರುವ ಕಾರಣ ನಿಮ್ಮನ್ನು ವರಿಸಲು ಸಾಧ್ಯವಿಲ್ಲ. ನಿಮಗೆ ನನ್ನಂತಹ ಮಗು ಬೇಕೆಂಬ ಆಸೆಯಿದ್ದರೆ ನನ್ನನ್ನೇ ನಿಮ್ಮ ಮಗುವೆಂದು ತಿಳಿದುಕೊಳ್ಳಿ. ಆಗ ನಿಮ್ಮ ಆಸೆ ಈಡೇರಿದಂತಾಗುತ್ತದೆ ಅಲ್ಲವೆ ಎಂದರಂತೆ. ಇವರ ಮಾತುಗಳನ್ನು ಕೇಳಿದ ಆಕೆ ವಿವೇಕಾನಂದರ ವ್ಯಕ್ತಿತ್ವಕ್ಕೆ ತಲೆದೂಗಿದ್ದರಂತೆ.