ಬೆಂಗಳೂರು: ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಆಗಸ್ಟ್ 6 ರಂದು ಬೆಂಗಳೂರಿನಲ್ಲಿ ತಮಿಳು ದಿಗ್ಗಜ ನಟ ಚಿಯಾನ್ ವಿಕ್ರಮ್ ಅವರನ್ನು ಭೇಟಿಯಾದರು.
ಚಿಯಾನ್ ವಿಕ್ರಮ್ ಅವರು ತಮ್ಮ ಮುಂಬರುವ ಪಾ ರಂಜಿತ್ ನಿರ್ದೇಶನದ ಆ.15ರಂದು ತೆರೆಕಾಣುತ್ತಿರುವ ಚಿತ್ರ ‘ತಂಗಾಲನ್’ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು.
ಭೇಟಿಯ ಚಿತ್ರಗಳನ್ನು ಹಂಚಿಕೊಂಡಿರುವ ರಿಷಬ್ ‘ಅಮೂಲ್ಯ ಸಮಯವನ್ನು ಕಳೆದಿದ್ದರಿಂದ ತುಂಬಾ ಸಂತೋಷವಾಯಿತು’ ಎಂದು ಕೆಲವು ಕ್ಯಾಂಡಿಡ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ”ನಟನಾಗುವ ನನ್ನ ಪಯಣದಲ್ಲಿ ವಿಕ್ರಮ್ ಸರ್ ಯಾವಾಗಲೂ ನನಗೆ ಸ್ಫೂರ್ತಿ. 24 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಇಂದು ನನ್ನ ಆರಾಧ್ಯ ಮೂರ್ತಿ ಯನ್ನು ಭೇಟಿಯಾದ ಕ್ಷಣ ನಾನು ಭೂಮಿಯ ಮೇಲಿನ ಅದೃಷ್ಟಶಾಲಿ ವ್ಯಕ್ತಿ ಎಂದು ಭಾವಿಸುತ್ತೇನೆ.ನನ್ನಂತಹ ನಟರನ್ನು ಪ್ರೇರೇಪಿಸಿದ್ದಕ್ಕಾಗಿ ಧನ್ಯವಾದಗಳು, ಎಂದು ತಂಗಲನ್‌ಗಾಗಿ ಶುಭ ಹಾರೈಸಿದ್ದಾರೆ.
ನಮಗೆ ಸ್ಫೂರ್ತಿ ನೀಡಿದ್ದು ಕಾಂತಾರ ವಿಕ್ರಮ್ ಮುಕ್ತ ಮಾತು
‘ತಂಗಾಲನ್’ ಕಂಟೆಂಟ್ ಅನ್ನು ಜಾಗತಿಕ ಮಟ್ಟದಲ್ಲಿ ಕೊಂಡೊಯ್ಯಲು ನಮಗೆ ಕನ್ನಡದ ಕಾಂತಾರ ಸಿನಿಮಾ ಸ್ಫೂರ್ತಿ’ ಎಂದು ಚಿಯಾನ್ ವಿಕ್ರಮ್ ಹೇಳಿದರು
“ಕಂಟೆಂಟ್ ಇದ್ದರೆ ಜಗತ್ತಿನ ಯಾವ ಮೂಲೆಗಾದರೂ ಸಿನಿಮಾವನ್ನು ತೆಗೆದುಕೊಂಡು ಹೋಗಬಹುದು ಎಂದು ತೋರಿಸಿದ್ದು ಕಾಂತಾರ. ಮಂಗಳೂರಿನ ಒಂದು ಕಥೆ ಜಾಗತಿಕ ಮಟ್ಟದಲ್ಲಿ ಯಶಸ್ವಿಯಾಗಿದ್ದು ನಮಗೆ ಸ್ಫೂರ್ತಿಯಾಯಿತು. ನಾವು ನಮ್ಮ ಸಿನಿಮಾವನ್ನು ಚಿತ್ರೀಕರಣ ಮಾಡುವಾಗ “ಕಾಂತಾರ’ ಬಿಡುಗಡೆಯಾಯಿತು. ಈ ಚಿತ್ರವನ್ನು ನಾವು ಹೊರಜಗತ್ತಿಗೆ ಹೇಗೆ ತೆಗೆದುಕೊಂಡು ಹೋಗಬೇಕು ಎಂದು ಯೋಚಿಸುತ್ತಿದ್ದಾಗ “ಕಾಂತಾರ’ ದಾರಿ ತೋರಿಸಿತು’ ಎನ್ನುವ ಮೂಲಕ “ಕಾಂತಾರ’ ಚಿತ್ರಕ್ಕೆ ಮೆಚ್ಚುಗೆ ಸೂಚಿಸಿದರು.
“ತಂಗಲಾನ್’ ಚಿತ್ರದಲ್ಲಿ ವಿಕ್ರಮ್ ವಿಭಿನ್ನ ಪಾತ್ರ ಹಾಗೂ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ತುಂಬಾ ಭಿನ್ನವಾದ ಚಿತ್ರವಂತೆ. ಈ ಕುರಿತು ಮಾತನಾಡುವ ಅವರು, “ಇದು ನನ್ನ ಜೀವನದ ಅತ್ಯಂತ ಕಷ್ಟಕರವಾದ ಚಿತ್ರ. ಪ್ರತಿ ದೃಶ್ಯಕ್ಕೂ ನಾವು ಸಾಕಷ್ಟು ಕಷ್ಟಪಟ್ಟಿದ್ದೇವೆ. ರೊಮ್ಯಾಂಟಿಕ್ ದೃಶ್ಯಗಳು ಸಹ ಕಷ್ಟವಾಗಿತ್ತು’ ಎಂದರು.