ರಾಮನಗರ: ತಾಲೂಕಿನ ಕೈಲಾಂಚ ಗ್ರಾಮದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಮಕ್ಕಳಿಗೆ ತುರಿಕೆ, ಕಜ್ಜಿ ಕಾಡುತ್ತಿದ್ದ ಸುದ್ದಿ ಬಯಲಾದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಕ್ಕಳು, ವಸತಿ ನಿಲಯದ ಅಧಿಕಾರಿಗಳು, ಸಿಬ್ಬಂದಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಬಳಿ ಮಾಹಿತಿ ಸಂಗ್ರಹಿಸಿದರು.
ಬೆಳಗ್ಗೆ 7.30ಕ್ಕೆ ಹಾಸ್ಟೆಲ್ಗೆ ಬಂದ ಸಚಿವರು, ಮೊದಲು ಮಾತನಾಡಿಸಿದ್ದು ವಿದ್ಯಾರ್ಥಿಗಳ ಹತ್ತಿರ. ಕಜ್ಜಿ, ತುರಿಕೆ ಇದ್ದ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು. ಔಷಧಿ ಕೊಟ್ಟಿರುವ ಬಗ್ಗೆ ಖಾತರಿ ಪಡಿಸಿಕೊಂಡರು. ನಂತರ ಕೆಲವು ಪೋಷಕರ ಬಳಿಯೂ ಮಾಹಿತಿ ಕಲೆ ಹಾಕಿದರು.
ತರಗತಿಯಲ್ಲಿ ಡೆಸ್ಕ್ ಇಲ್ಲ, ಬರೆಯಲು ಪುಸ್ತಕವಿಲ್ಲ: ಬಾಡಿಗೆಗೆ ಪಡೆದ ಕಟ್ಟಡವೊಂದರಲ್ಲಿ ತೀರಾ ಚಿಕ್ಕದಾದ ಕೊಠಡಿಗಳಲ್ಲಿ ನಡೆಯುವ ತರಗತಿಗಳು, ಮಕ್ಕಳು ತಮ್ಮ ಟ್ರಂಕ್, ಬ್ಯಾಗ್‌ಗಳ ಜೊತೆಗೆ ಮಲಗಬೇಕಾದ ಸ್ಥಿತಿಯನ್ನು ಕಂಡರು. ತರಗತಿಯಲ್ಲಿ ಡೆಸ್ಕ್ ಇಲ್ಲದನ್ನು ಕಂಡು ಅವರು, ಅಧಿಕಾರಿಗಳನ್ನು ಪ್ರಶ್ನಿಸಿದರು. ಬರೆದುಕೊಳ್ಳಲು ನೋಟ್ ಪುಸ್ತಕದ ಕೊರತೆ ಇದೆ ಎಂದು ವಿದ್ಯಾರ್ಥಿಗಳು ಸಚಿವರ ಗಮನ ಸೆಳೆದರು. ಪುಸ್ತಕದ ಬ್ಯಾಗ್ ಕೊಡಿಸಿದ್ದು, ತಮ್ಮ ಪೋಷಕರು ಎಂದರು. ಸಮಾಜ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ (ಕೆಆರ್‌ಇಐ) ಅಧಿಕಾರಿಗಳಿಗೆ ಡೆಸ್ಕ್ಗಳು, ನೋಟ್ ಪುಸ್ತಕಗಳನ್ನು ಪೂರೈಸಬೇಕು. ಕಿಷ್ಕಿಂದ ಕೊಠಡಿಗಳಲ್ಲಿ ಮಕ್ಕಳು ಮಲಗಲು ವ್ಯವಸ್ಥೆ ಮಾಡಿರುವ ಬಗ್ಗೆ ಜಿಲ್ಲಾಡಳಿತವನ್ನು ಪ್ರಶ್ನಿಸಿದರು.
ಅಪೂರ್ಣಗೊಳ್ಳಬೇಕಿದೆ ಕಟ್ಟಡ ಕಾಮಗಾರಿ: ಜಿಪಂ ಸಿಇಒ ಜಯ ವಿಭವ ಸ್ವಾಮಿ ಮಾತನಾಡಿ, ಸುಸಜ್ಜಿತ ವಸತಿ ಶಾಲೆಯ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಬೇಕಾಗಿದೆ. ಅಲ್ಲಿಯವರೆಗೆ ಪರ್ಯಾಯವಾಗಿ ಸರ್ಕಾರಿ ಸಾರ್ವಜನಿಕ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಬಾಲಕರಿಗೆ ತಂಗಲು ಅವಕಾಶ ನೀಡುವುದು ಮತ್ತು ಗ್ರಾಮದಲ್ಲಿರುವ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಖಾಲಿ ಇರುವ ಕೊಠಡಿಗಳಲ್ಲಿ ತರಗತಿಗಳು ನಡೆಯಲು ಅವಕಾಶ ನೀಡುವ ಕುರಿತು ಚಿಂತನೆ ನಡೆದಿದೆ ಎಂದರು. ಸಚಿವರ ನಂತರ ಪರ್ಯಾಯ ಸ್ಥಳಗಳಿಗೂ ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿಗಳಿಗೆ ಅನುಮತಿ ನೀಡಿದರು.
ಮತ್ತೆ ಬರ್ತೀನಿ ಎಂದ ಸಚಿವರು: ಪರ್ಯಾಯ ವ್ಯವಸ್ಥೆ ತಕ್ಷಣವೇ ಕೈಗೆತ್ತಿಕೊಳ್ಳಬೇಕು. ಸೆಪ್ಟಂಬರ್ 4 ಅಥವಾ 6ರಂದು ಮತ್ತೆ ಭೇಟಿ ಕೊಡುವುದಾಗಿ ತಿಳಿಸಿ ಅಧಿಕಾರಿಗಳನ್ನು ಎಚ್ಚರಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ತಾಪಂ ಅಧ್ಯಕ್ಷ ಗಾಣಕಲ್ ನಟರಾಜು, ಕೈಲಾಂಚ ಗ್ರಾಮ ಪಂಚಾಯ್ತಿ ಅಧ್ಯಕ್ಷ ಆರ್.ಪಾಂಡುರಂಗ, ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ, ಡಿಡಿಪಿಐ ಗಂಗಮಾರೇಗೌಡ, ಬಿಇಒ ಮರೀಗೌಡ, ಡಿಡಿಪಿಐ ಕಚೇರಿಯ ವಿಷಯ ಪರೀವೀಕ್ಷಕ ಸೋಮಲಿಂಗಯ್ಯ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.