ಕೆರೂರ: ನೀರಬೂದಿಹಾಳ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಕ್ಕೆ ಶುಕ್ರವಾರ ಬಾದಾಮಿ ಬಿಇಒ ರುದ್ರಪ್ಪ ಹುರುಳಿ ಭೇಟಿ ನೀಡಿ, ಪರೀಕ್ಷಾರ್ಥಿಗಳಿಗೆ ನೀಡುವ ಭೌತಿಕ ಸೌಲಭ್ಯಗಳನ್ನು ಪರಿಶೀಲಿಸಿದರು.
ಮುಖ್ಯ ಪರೀಕ್ಷಾ ಕೇಂದ್ರ ಹಾಗೂ ಬ್ಲಾಕ್ ಪರೀಕ್ಷಾ ಕೇಂದ್ರದ ಎಲ್ಲ ಕೊಠಡಿಗಳನ್ನು ವೀಕ್ಷಿಸಿದ ಅವರು, ಜೋಡಣೆಯಾದ ಸುತ್ತಲಿನ ಪ್ರೌಢಶಾಲೆಗಳ ಮುಖ್ಯಶಿಕ್ಷಕರು, ಉಪಾಧ್ಯಾಯರು ಸೇರಿದಂತೆ ವಿವಿಧ ಶಿಕ್ಷಕರಿಗೆ ಕೇಂದ್ರದಲ್ಲಿ ಕೈಗೊಳ್ಳಬೇಕಾದ ಅಗತ್ಯ ಮಾರ್ಗದರ್ಶನಗಳ ಕುರಿತು ಸೂಚನೆ ನೀಡಿದರು.
ಮುಖ್ಯವಾಗಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾರ್ಥಿಗಳಿಗೆ ಕುಡಿಯುವ ನೀರು, ವಿದ್ಯುತ್ ಹಾಗೂ ಸಿಸಿ ಕ್ಯಾಮೆರಾಗಳ ಸೌಲಭ್ಯ ಸೇರಿದಂತೆ ಸಾಮಾಜಿಕ ಅಂತರ ಪಾಲನೆಯ ಜತೆಗೆ ಆಸನಗಳ ವ್ಯವಸ್ಥೆ ಕೈಗೊಂಡ ಕೊಠಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರು, ಶಿಕ್ಷಕರು ಸಹಿತ ಪಾಲ್ಗೊಂಡಿದ್ದ ಸಭೆಯಲ್ಲಿ ಬಿಇಒ ಹುರುಳಿ ಅವರು, ಎಲ್ಲ ರೀತಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಅಚ್ಚುಕಟ್ಟಾಗಿ ನಡೆಯಬೇಕು. ಯಾವುದೇ ಕಾರಣಕ್ಕೂ ಇಲಾಖೆಯ ಸೂಚನೆಗಳನ್ನು ತಪ್ಪದೇ ಪಾಲಿಸುವಂತೆ ಸೂಚಿಸಿದರು. ನೀರಬೂದಿಹಾಳ ಕಾಲೇಜಿನ ಉಪ ಪ್ರಾಚಾರ್ಯ ನಾಗರಾಜ ದೇಶಪಾಂಡೆ, ಈ ಪರೀಕ್ಷಾಕೇಂದ್ರದಲ್ಲಿ ಕೈಗೊಂಡ ಭೌತಿಕ ಸೌಲಭ್ಯಗಳು, ಪರೀಕ್ಷಾರ್ಥಿಗಳ ವಿವರ, ಕೊಠಡಿಗಳ ಹಂಚಿಕೆ ಹಾಗೂ ಕೋವಿಡ್-19 ನಿಮಿತ್ತ ಕೈಗೊಳ್ಳಲಾದ ಸಮಗ್ರ ಮುಂಜಾಗ್ರತಾ ಕ್ರಮಗಳ ಕುರಿತು ಸಭೆಗೆ ಮಾಹಿತಿ ನೀಡಿದರು.
ತಾಲೂಕು ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ವಿ.ಎಸ್. ಮೇಟಿ ಮಾತನಾಡಿ, ಸಲಹೆ ನೀಡಿದರು. ಸಭೆಯಲ್ಲಿ ಹೂಲಗೇರಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ರಾಜೇಶ್ವರಿ ಬಾದವಾಡಗಿ, ಅನವಾಲದ ಮುಖ್ಯಶಿಕ್ಷಕ ಎಂ.ಎನ್. ಪೊಲೀಶಿ, ಶಿಕ್ಷಣ ಸಂಯೋಜಕ ಆರ್.ಜಿ. ಗಿರಿಯಪ್ಪಗೌಡ್ರ, ಸಿಆರ್ ಪಿಯ ಎಂ.ಎಚ್. ಗಂಗಲ್, ಹಿರಿಯ ಶಿಕ್ಷಕ ಗವಿಸಿದ್ದಪ್ಪ ಬೂದಿಹಾಳ ಮುಂತಾದವರು ಪಾಲ್ಗೊಂಡಿದ್ದರು. ಮುಲ್ಲು ಗಂಗಲ್ ನಿರೂಪಿಸಿದರು.