Advertisement

ರಸ್ತೆ ಸುರಕ್ಷತಾ ಸಮಿತಿಯಿಂದ ಎಕ್ಸ್ ಪ್ರೆಸ್‌ ವೇ ಪರಿಶೀಲನೆ

01:18 PM Jul 20, 2023 | Team Udayavani |

ರಾಮನಗರ: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಾಗುತ್ತಿರುವ ಅಪಘಾತಗಳ ಪ್ರಕರಣಕ್ಕೆ ಕಡಿವಾಣ ಹಾಕುವ ಹಿನ್ನೆಲೆಯಲ್ಲಿ ಕೈಗೊಳ್ಳ ಬೇಕಿರುವ ಅಗತ್ಯ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಲು ರಾಷ್ಟ್ರೀಯ ಹೆದ್ದಾರಿ ಪ್ರಾ—ಕಾರದ ರಸ್ತೆ ಸುರಕ್ಷತೆ ವಿಭಾಗದ ಮುಖ್ಯ ಪ್ರಧಾನ ವ್ಯವಸ್ಥಾಪಕ (ಸಿಜಿಎಂ) ಸುನೀಲ್‌ ಜಿಂದಾಲ್‌ ಅವರು ನೀಡಿರುವ ಸೂಚನೆ ಮೇರೆಗೆ ಕೆಂಗೇರಿ ಬಳಿಯಿಂದ ತಜ್ಞರ ತಂಡ ಫ್ಲೈಓವರ್‌ ಮೂಲಕ ಪ್ರಯಾಣಿಸಿ ರಸ್ತೆ ಸುರಕ್ಷತಾ ಮಾನದಂಡಗಳ ಬಗ್ಗೆ ಪರಿಶೀಲನೆ ನಡೆಸಿದರು.

Advertisement

ನೂತನ ಎಕ್ಸ್‌ಪ್ರೆಸ್‌ ಹೈವೆಯಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಲು ರಸ್ತೆ ಸುರಕ್ಷತೆ ಸಲಹೆಗಾರ ಸುದರ್ಶನ್‌ ಕೆ.ಪೊಪ್ಲಿ, ಪ್ರಾಕಾರದ ಉಪ ವ್ಯವಸ್ಥಾಪಕ ಹಾಗೂ ರಸ್ತೆ ಸುರಕ್ಷತಾ ಅಧಿಕಾರಿ ಪ್ರವೀಣ್‌ ಕುಮಾರ್‌ (ಆರ್‌ ಎಸ್‌ಒ) ಹಾಗೂ ಸೊಹಾ°-ದೌಸಾ ಎಕ್ಸ್‌ಪ್ರೆಸ್‌ ಯೋಜನೆ ಜಾರಿ ಘಟಕದ ವ್ಯವಸ್ಥಾಪಕ ಜೈವರ್ಧನ್‌ ಸಿಂಗ್‌ ಸಮಿತಿಯ ಸದಸ್ಯರಾಗಿದ್ದು ಪರಿಶೀಲನೆ ನಡೆಸಿ ಸಮಿತಿ ಇನ್ನು 10 ದಿನಗಳ ಒಳಗೆ ವರದಿಯನ್ನು ನೀಡಲಿದೆ.

ಎಕ್ಸ್‌ಪ್ರೆಸ್‌ವೇ ನಲ್ಲಿ ವಾಹನಗಳ ಸಂಚಾರ ಆರಂಭಗೊಂಡ ಕಳೆದ ಒಂಬತ್ತು ತಿಂಗಳ ಅವಧಿಯಲ್ಲಿ ಸಂಭವಿಸಿದ 550ಕ್ಕೂ ಹೆಚ್ಚು ಅಪಘಾತಗಳಲ್ಲಿ 158ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಅದರ ಬೆನ್ನಲ್ಲೇ, ರಸ್ತೆಯ ಅಸುರಕ್ಷತೆ ಕುರಿತು ವ್ಯಾಪಕ ಚರ್ಚೆಗಳು ಆರಂಭವಾಗಿದ್ದವು. ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣದಿಂದ ಅಪಘಾತಗಳು ಹೆಚ್ಚುತ್ತಿವೆ ಎಂದು ಸಾರ್ವಜನಿಕರು, ಚುನಾಯಿತ ಪ್ರತಿನಿಧಿಗಳು ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷತೆಯತ್ತ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗಮನಹರಿಸಿದ್ದಾರೆ.

ಹಲವು ತಂಡಗಳಿಂದ ವೀಕ್ಷಣೆ: ರಾಷ್ಟ್ರೀಯ ಹೆದ್ದಾರಿ 275ರ ಎಕ್ಸ್‌ಪ್ರೆಸ್‌ ಹೈವೇನಲ್ಲಿ ಅಪಘಾತಗಳ ಪ್ರಮಾಣ ಹೆಚ್ಚಳಗೊಂಡ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾ ಪೊಲೀಸರು ಪರಿಶೀಲನೆ ನಡೆಸಿ 54 ಅಂಶಗಳ ವರದಿಯನ್ನು ನೀಡಿದ್ದರು. ಇನ್ನು ಪೊಲೀಸ್‌ ಇಲಾಖೆ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್‌ಕುಮಾರ್‌ ಹಿರಿಯ ಪೊಲೀಸ್‌ ಅಧಿಕಾರಿ ಗಳ ಜೊತೆ ಎಕ್ಸ್‌ಪ್ರೆಸ್‌ ವೇ ನ್ಯೂನತೆಗಳನ್ನು ಪರಿಶೀಲನೆ ನಡೆಸಿ ಕೆಲ ಸಲಹೆ ಸೂಚನೆ ನೀಡಿದ್ದರು. ರಾಮನಗರ ಮತ್ತು ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಎನ್‌ಎಚ್‌ಎಐ ಅಧಿಕಾರಿಗಳು ಜಂಟಿ ಸರ್ವೆ ನಡೆಸಿ ನ್ಯೂನತೆಗಳನ್ನು ಪಟ್ಟಿ ಮಾಡಿದ್ದರು. ಇದೀಗ ಹೆದ್ದಾರಿ ಪ್ರಾಧಿಕಾರ ತಜ್ಞರ ಸಮಿತಿಯನ್ನು ನೇಮಿಸಿದೆ.

ಸಮಿತಿಯ ಸದಸ್ಯರಿಂದ ಪ್ರಮುಖ ಸ್ಥಳಗಳ ವೀಕ್ಷಣೆ: ಕಣಿಮಿಣಿಕೆ, ಹೆಜ್ಜಾಲ, ವಂಡರ್‌ಲಾ ಗೇಟ್‌, ಹನುಮಂತನಗರ, ಲಕ್ಷ್ಮೀಸಾಗರ ಗೇಟ್‌, ಕೇತುಗಾನಹಳ್ಳಿ ಮೇಲ್ಸೇತುವೆ, ದಾಸಪ್ಪನದೊಡ್ಡಿ ಅಂಡರ್‌ಪಾಸ್‌, ಕೆಂಪನಹಳ್ಳಿ ಗೇಡ್‌, ಮಾಯ ಗಾನಹಳ್ಳಿ ಮೂಲಕ ಸಾಗಿ ಸಂಗನಬಸವನದೊಡ್ಡಿ ಬಳಿಯ ಎಂಟ್ರಿ ಮತ್ತು ಎಕ್ಸಿಟ್‌ ಪಾಯಿಂಟ್‌ಗಳು, ಅಂಡರ್‌ಪಾಸ್‌ ಬಳಿ ಮಳೆ ನೀರಿನಿಂದ ಸಮಸ್ಯೆ ಉಂಟಾಗುತ್ತಿದ್ದ ಸ್ಥಳವೂ ಸೇರಿದಂತೆ ಕೆಲವು ಪ್ರಮುಖ ಸ್ಥಳಗಳ ವೀಕ್ಷಣೆ ಮಾಡಿದ ಸಮಿತಿಯ ಸದಸ್ಯರು, ಮಂಡ್ಯ, ಮೈಸೂರು ಭಾಗದ ಎಕ್ಸ್‌ಪ್ರೆಸ್‌ ವೇ ಪರಿಶೀಲನೆಗೆ ತೆರಳಿದರು.

Advertisement

ತಜ್ಞರ ವರದಿ ಮೇಲೆ ಮಾರ್ಪಾಡು: ಎಕ್ಸ್‌ಪ್ರೆಸ್‌ ವೇ ಕಾಮಗಾರಿಯಲ್ಲಿ ನಡೆದಿರುವ ನ್ಯೂನತೆಗಳು, ಅಘಾತ ಹೆಚ್ಚಳವಾಗುತ್ತಿರುವುದಕ್ಕೆ ಕಾರಣಗಳನ್ನು ತಜ್ಞರ ಸಮಿತಿ ನೀಡಲಿದ್ದು, ಸಮಿ ತಿಯ ವರದಿಯನ್ನು ಆದರಿಸಿ ಹೆದ್ದಾರಿ ಪ್ರಾಧಿಕಾರ ಹೆದ್ದಾರಿಯಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಕೈಗೊಳ್ಳಲಿದೆ. ಇಡೀ ಹೆದ್ದಾರಿ ಕಾಮಗಾರಿಯನ್ನು ಸಮಗ್ರವಾಗಿ ವೀಕ್ಷಣೆ ಮಾಡಿರುವ ಮೂರು ಮಂದಿ ತಜ್ಞರ ಸಮಿತಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವಿಸ್ತೃತ ವರದಿ ನೀಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next